Kadlekai Parishe: ಕಡ್ಲೆಕಾಯಿ ಪರಿಷೆ ದಿನ ಬಸವನಗುಡಿ ಸುತ್ತಮುತ್ತ ಸಂಚಾರ ನಿಷೇಧ, ಪಾರ್ಕಿಂಗ್ ವಿವರ
ಪ್ರತಿ ವರ್ಷ ನಡೆಯುವ ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಕಡ್ಲೆಕಾಯಿ ಪರಿಷೆ ಈ ಬಾರಿ ಡಿಸೆಂಬರ್ 8-9 ರಂದು ನಡೆಯಲಿದೆ. ವಾರಾಂತ್ಯದಲ್ಲಿ ನಡೆಯಲಿರುವ ಈ ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಮುಂಜಾಗ್ರತಾ ಕ್ರಮವಾಗಿ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ತಗ್ಗಿಸಲು ಕ್ರಮ ತೆಗೆದುಕೊಂಡಿದ್ದಾರೆ.
ಬೆಂಗಳೂರಿ ದಕ್ಷಿಣ ಭಾಗದ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ನಡೆಯುವ ಕಡ್ಲೆಕಾಯಿ ಪರಿಷೆಯಲ್ಲಿ ಸಾವಿರಾರು ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸಲು ಪೊಲೀಸರು ಸಂಚಾರಿ ಸೂಚನೆ ನೀಡಿದ್ದಾರೆ.

ಹಲವು ರಸ್ತೆಗಳಲ್ಲಿ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನಗಳ ಪಾರ್ಕಿಂಗ್‌ಗೆ ಕೂಡ ಸ್ಥಳ ನಿಗದಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಚಾರ ಸಲಹೆ
ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ವಾಣಿ ವಿಲಾಸ ರಸ್ತೆ, ಚಾಮರಾಜಪೇಟೆ ಮತ್ತು ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ಹನುಮಂತನಗರ ಕಡೆಗೆ ಹೋಗುವ ವಾಹನಗಳು ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಹಯವದನ ರಾವ್ ರಸ್ತೆ, ಗವಿಪುರಂ 3ನೇ ಕ್ರಾಸ್ ಮೂಲಕ ಹನುಮಂತನಗರ ತಲುಪಬೇಕು.
ಆರ್‌ವಿ ಶಿಕ್ಷಕರ ಕಾಲೇಜು ಜಂಕ್ಷನ್‌ನಿಂದ ಟ್ರಿನಿಟಿ ಆಸ್ಪತ್ರೆ ರಸ್ತೆ ಕಡೆಗೆ ಹೋಗುವವರು ಬ್ಯೂಗಲ್ ರಾಕ್ ರಸ್ತೆ ಮೂಲಕ ಹನುಮಂತನಗರದ ಕಡೆಗೆ ಹೋಗುವವರು ಟ್ಯಾಗೋರ್ ವೃತ್ತದಲ್ಲಿ ಬಲ ತಿರುವು ಪಡೆದು ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ರಾಮಕೃಷ್ಣ ಆಶ್ರಮ ವೃತ್ತ ದಾಟಿ ಗವಿಪುರಂ ವಿಸ್ತರಣೆ 3ನೇ ಕ್ರಾಸ್ ಮೂಲಕ ಮುಂದೆ ಚಲಿಸಲು ಕೋರಲಾಗಿದೆ.
ತ್ಯಾಗರಾಜನಗರ ಅಥವಾ ಬನಶಂಕರಿ ಕಡೆಯಿಂದ ಬುಲ್ ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಹೋಗುವ ವಾಹನಗಳು ಕಾಮತ್ ಹೋಟೆಲ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಅಶೋಕನಗರ 2ನೇ ಕ್ರಾಸ್ ಮೂಲಕ ಕತ್ರಿಗುಪ್ಪೆ ರಸ್ತೆ ಜಂಕ್ಷನ್‌ನಿಂದ ಬಲಕ್ಕೆ ಸಾಗಿ 3ನೇ ಮುಖ್ಯರಸ್ತೆಯಲ್ಲಿ ನಾರಾಯಣಸ್ವಾಮಿ ವೃತ್ತ ತಲುಪಬೇಕು. ಅವರು ಕೆ.ಜಿ.ನಗರ ಮುಖ್ಯರಸ್ತೆ ಅಥವಾ ಹಯವದನ ರಾವ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಸಾಗಲು ಕೋರಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ
ಎಪಿಎಸ್ ಕಾಲೇಜು ಮೈದಾನ, ಎನ್ ಆರ್ ಕಾಲೋನಿ, ಕೊಹಿನೂರ್ ಮೈದಾನ, ಹಯವದನ ರಾವ್ ರಸ್ತೆ, ಉದಯಭಾನು ಮೈದಾನ, ಬುಲ್ ಟೆಂಪಲ್ ರಸ್ತೆಯಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications