BMTC Accident: 2023ರಲ್ಲಿ ಬಿಎಂಟಿಸಿಗೆ 34 ಮಂದಿ ಬಲಿ, ಸಂಚಾರಿ ಪೊಲೀಸರಿಂದ ಮಹತ್ವದ ನಿರ್ಧಾರ..!
ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇದೆ. ಬಿಎಂಟಿಸಿ ಬಸ್ ಚಾಲಕರನ್ನು ಜನರು ಯಮದೂತರು ಎಂದೂ ಸಹ ಕರೆಯುತ್ತಾರೆ. ರಸ್ತೆ ಗುಂಡಿಗಳು, ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ಬಿಎಂಟಿಸಿ ಬಸ್ ಚಾಲಕರ ಅಜಾಗಕರೂಕ ಚಾಲನೆಯಿಂದ ಬೆಂಗಳೂರು ನಗರದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಬಿಎಂಟಿಸಿ ಬಸ್ ಅಪಘಾತಕ್ಕೆ ಅನೇಕ ಜನರು ಬಲಿಯಾಗಿದ್ದಾರೆ. ಕಳೆದ ವಾರವಷ್ಟೇ ಸಿಲ್ಕ್ ಬೋರ್ಡ್ ಜೆಂಕ್ಷನ್ ಬಳಿಯ ಮಡಿವಾಳ ಫ್ಲೇವೋವರ್ ಮೇಲೆ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದು, ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದರು. ಮಗುವಿನೊಂದಿಗೆ ತೆರಳುತ್ತಿದ್ದ ದಂಪತಿ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿತ್ತು. ಘಟನೆ ಬಳಿಕ ಬಿಎಂಟಿಸಿ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಪಘಾತಗಳನ್ನು ತಡೆಯಲು ಬಿಎಂಟಿಸಿ ಜೊತೆಗೆ ಬೆಂಗಳೂರು ಸಂಚಾರಿ ಪೊಲೀಸರು ಕೈ ಜೋಡಿಸಿದ್ದಾರೆ. ನಗರದಲ್ಲಿ ಅಪಘಾತ ಸಂಖ್ಯೆ ತಡೆಯಲು ಬೆಂಗಳೂರು ಟ್ರಾಫಿಕ್ ಪೊಲೀಸ್ ಬಿಎಂಟಿಸಿ ಸಹಯೋಗದೊಂದಿಗೆ ಚಾಲಕರಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
2023ರ ಜನವರಿಯಿಂದ ನವೆಂಬರ್‌ವರೆಗೆ ಬಿಎಂಟಿಸಿ ಬಸ್ ಅಪಘಾತದಲ್ಲಿ ಒಟ್ಟು 34 ಜನರು ಸಾವನ್ನಪ್ಪಿದ್ದಾರೆ. 97 ಜನರು ಗಾಯಗೊಂಡಿದ್ದಾರೆ. ಬಿಟಿಪಿಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ವರ್ಷ ಬಿಎಂಟಿಸಿ ಚಾಲಕರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗಾಗಿ 13,917 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಬಿಎಂಟಿಸಿ ನಿಗಮಕ್ಕೆ 1.04 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಹೀಗಾಗಿ ಈ ಎಲ್ಲಾ ತಪ್ಪುಗಳಿಗೆ ಬ್ರೇಕ್ ಹಾಕಲು ಬಿಎಂಟಿಸಿ ಜೊತೆಗೆ ಬೆಂಗಳೂರು ಸಂಚಾರಿ ಪೊಲೀಸರು ಒಂದಾಗಿದ್ದಾರೆ.
ಬಿಎಂಟಿಸಿ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ಮತ್ತು ದಂಡವನ್ನು ಸಂಗ್ರಹಿಸುವುದು ನಮ್ಮ ಉದ್ದೇಶವಲ್ಲ. ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದಿರುವ ಬೆಂಗಳೂರು ಸಂಚಾರಿ ಪೊಲೀಸರು ಬಿಎಂಟಿಸಿ ಬಸ್ ಚಾಲಕರಿಗೆ ಡ್ರೈವಿಂಗ್ ತರಬೇತಿ ನೀಡಲಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಹೇಗೆ ಬಸ್ ಓಡಿಸಬೇಕು. ಸಂಚಾರಿ ನಿಯಮಗಳನ್ನು ಹೇಗೆ ಪಾಲಿಸಬೇಕು, ಅಪಘಾತ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎನ್ನುವುದರ ಬಗ್ಗೆ ನಗರದ ಟ್ರಾಫಿಕ್ ಪೊಲೀಸ್ ಕಮಾಂಡ್ ಸೆಂಟರ್‌ನಲ್ಲಿ ಪ್ರತಿನಿತ್ಯ ಐವತ್ತು ಚಾಲಕರಿಗೆ ಸಂಚಾರಿ ಪೊಲೀಸರು ತರಬೇತಿ ನೀಡಲಿದ್ದಾರೆ. ಇನ್ನು ಸಂಚಾರಿ ಪೊಲೀಸರು ತರಬೇತಿ ಕಾರ್ಯಕ್ರಮದಲ್ಲಿ ಬಿಎಂಟಿಸಿ ಚಾಲಕರಿಗೆ ಅಪಘಾತ ಮುಕ್ತ ಹಾಗೂ ಸುರಕ್ಷಿತ ಚಾಲನೆ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.












Click it and Unblock the Notifications