ಮಾನವೀಯತೆ ಮೆರೆದ ದೊಡೇಜಾಗೆ ಅಭಿನಂದನೆ
ಬೆಂಗಳೂರು, ಮೇ 12 : ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾದಚಾರಿಯನ್ನು ತಾವೇ ಸ್ವತಃ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮತ್ತು ಸಮಯಸ್ಫೂರ್ತಿ ಮೆರೆದ ಬೆಂಗಳೂರಿನ ನಿವಾಸಿ ಸಂದೀಪ್ ದೊಡೇಜಾ ಅವರನ್ನು ಬೆಂಗಳೂರು ಸಂಚಾರಿ ಪೊಲೀಸರು ಶ್ಲಾಷಿಸಿದ್ದಾರೆ. ಸಂದೀಪ್ ಅವರನ್ನು ಗುರುತಿಸಿ ಶ್ಲಾಘಿಸಿದ ಸಂಚಾರಿ ಪೊಲೀಸರಿಗೂ ಅಭಿನಂದನೆ.
ಮಾನವ ಜೀವವನ್ನು ಕಾಪಾಡುವ ಉದ್ದೇಶದಿಂದ ರಾತ್ರಿಯಾಗಿದ್ದನ್ನೂ ಲೆಕ್ಕಿಸದೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಸಂದೀಪ್ ಅವರ ಪ್ರಯತ್ನವನ್ನು ಶ್ಲಾಘಿಸಿ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಅಧಿಕಾರಿ ಅವರು ಸಂದೀಪ್ ದೊಡೇಜಾ ಅವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಅಭಿನಂದಿಸಿದರು.

ಆಗಿದ್ದೇನು? : ಸಿಟಿ ಮಾರುಕಟ್ಟೆ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವಿಐಎಸ್ಎಲ್ ಕಟ್ಟಡದ ಬಳಿ ಮೇ 7ರಂದು ರಾತ್ರಿ 10.45ರ ಸುಮಾರಿಗೆ ರಸ್ತೆ ದಾಟುತ್ತಿದ್ದ ಪಾದಚಾರಿಯನ್ನು ಕಪ್ಪು ಬಣ್ಣದ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ಅಡ್ಡಾದಿಡ್ಡಿಯಾಗಿ ಅಜಾರೂಕತೆಯಿಂದ ಓಡಿಸುತ್ತಿದ್ದ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ.
ಆ ಕಪ್ಪು ಕಾರಿನ ಹಿಂದೆ ಬರುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಸಂದೀಪ್ ದೊಡೇಜಾ ಅವರು ತಕ್ಷಣ ಕಾರನ್ನು ನಿಲ್ಲಿಸಿದ್ದಾರೆ. ತಲೆಗೆ ತೀವ್ರ ಪೆಟ್ಟು ತಿಂದು ಒದ್ದಾಡುತ್ತಿದ್ದ ಪಾದಚಾರಿಯನ್ನು, ಬೇರೆ ವಿಚಾರವನ್ನು ಕೂಡ ಮಾಡದೆ ಸಂದೀಪ್ ಮತ್ತು ಅವರ ಪತ್ನಿ ತಮ್ಮ ಕಾರಿನಲ್ಲಿ ಕೂಡಿಸಿಕೊಂಡು ಹತ್ತಿರದಲ್ಲಿದ್ದ ಎಸ್ಆರ್ ನಗರದಲ್ಲಿರುವ ಸಿಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. [ಮಾನವೀಯತೆ ಮೆರೆದ ಆಟೋ ಚಾಲಕರು]
ಗಾಯಾಳುವಿನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸಿಂಧಿ ಆಸ್ಪತ್ರೆಯ ಸಲಹೆಯಂತೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮೇ 8ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಸುನೀಗಿದ್ದಾರೆ. ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಕೇಸನ್ನು ದಾಖಲಿಸಿಕೊಳ್ಳಲಾಗಿದ್ದು, ಹಿಟ್ ಅಂಡ್ ರನ್ ಮಾಡಿದ ಚಾಲಕನ ಹುಡಾಕಾಟದಲ್ಲಿದ್ದಾರೆ.












Click it and Unblock the Notifications