Traffic Fine Discount: ಟ್ರಾಫಿಕ್ ಫೈನ್ ಮೇಲೆ ಭರ್ಜರಿ ಡಿಸ್ಕೌಂಟ್ ಕೊಟ್ಟ ಪೊಲೀಸರು, ಎಷ್ಟು ದಿನ?
ತಮ್ಮ ವಾಹನಗಳ ಮೇಲೆ ಇರುವ ಟ್ರಾಫಿಕ್ ಫೈನ್ ಕ್ಲಿಯರ್ ಮಾಡಿಕೊಳ್ಳಲು ಸಂಚಾರ ಪೊಲೀಸರು ಮತ್ತೊಮ್ಮೆ ಸುವರ್ಣಾವಕಾಶ ಕಲ್ಪಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ವಾಹನಗಳ ಮೇಲೆ ದಾಖಲಾಗಿರುವ ದೂರುಗಳನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದೆ. ನಿಮ್ಮ ವಾಹನದ ಮೇಲೆ ಇರುವ ಟ್ರಾಫಿಕ್ ದಂಡ ಪಾವತಿಸುವವರಿಗೆ ಶೇ 50ರಷ್ಟು ಡಿಸ್ಕೌಂಟ್ ಕೂಡ ನೀಡಲಾಗಿದೆ. ಈ ಆಫರ್ ಎಷ್ಟು ದಿನಗಳವರೆಗೆ ಇರಲಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು ಸೇರಿ ವಿವಿಧೆಡೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ಹಾಕಲಾಗುತ್ತದೆ. ಮೊದಲಿನಿಂದಲೂ ಈ ವ್ಯವಸ್ಥೆ ಜಾರಿಯಲ್ಲಿದ್ದರೂ, ಪೊಲೀಸರು ಅಡ್ಡಗಟ್ಟಿದಾಗ ಇರುವ ದಂಡದ ಮೊತ್ತವನ್ನೇ ಪಾವತಿಸಬೇಕಾಗಿತ್ತು. ಈಗಂತೂ ಬಹುತೇಕ ವಾಹನ ಮಾಲೀಕರು ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಆಧುನಿಕ ಕ್ಯಾಮರಾಗಳ ಮೂಲಕ ಫೋಟೋ ಸಹಿತ ದಂಡ ವಿಧಿಸುವ ವ್ಯವಸ್ಥೆ ಜಾರಿಯಲ್ಲಿದೆ.

ಕೆಲವರಂತೂ ಟ್ರಾಫಿಕ್ ಫೈನ್‌ನ ಚಿಂತೆಯೇ ಇಲ್ಲದೆ ಪದೇ ಪದೇ ನಿಯಮ ಉಲ್ಲಂಘಿಸಿರುತ್ತಾರೆ. ಇವುಗಳ ಒಟ್ಟ ದಂಡದ ಮೊತ್ತವು ಸಾವಿರಾರು ರೂಪಾಯಿಗಳಾಗಿರುತ್ತವೆ. ಈ ಹಿನ್ನೆಲೆ ತಮ್ಮ ವಾಹನದ ಮೇಲಿರುವ ಟ್ರಾಫಿಕ್ ಫೈನ್ ಕ್ಲಿಯರ್ ಮಾಡಿಕೊಳ್ಳಲು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದಾರೆ. ನಿಮ್ಮ ಬೈಕ್ ಅಥವಾ ಕಾರಿನ ಮೇಲೆ ಇರುವ ದಂಡವನ್ನು ಈಗ ಅರ್ಧದಷ್ಟು ಪಾವತಿಸಿದರೆ ಸಾಕು ಎಂದು ತಿಳಿಸಿದ್ದಾರೆ. ಉದಾಹರಣೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 1000 ರೂಪಾಯಿ ದಂಡ ನಿಮ್ಮ ವಾಹನದ ಮೇಲೆ ಇದ್ದರೆ, ನೀವು ಕೇವಲ 500 ರೂಪಾಯಿ ಪಾವತಿಸಿ ಅದನ್ನು ಕ್ಲಿಯರ್ ಮಾಡಿಕೊಳ್ಳಬಹುದು.
ದಂಡ ಎಲ್ಲೆಲ್ಲಿ ಕಟ್ಟಬಹುದು?
ಇದೇ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಶೇ 50ರಷ್ಟು ಡಿಸ್ಕೌಂಟ್‌ನೊಂದಿಗೆ ನಿಮ್ಮ ಟ್ರಾಫಿಕ್ ಫೈನ್ ಕಟ್ಟಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಬಾಕಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿ ಮಾಡಲು ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯವಿರುವ ಮೊಬೈಲ್ ಅಪ್‌ಗಳನ್ನು ಸಹ ಬಳಸಬಹುದು.
ಕರ್ನಾಟಕ ರಾಜ್ಯ ಪೊಲೀಸ್ ಆಪ್, ಕರ್ನಾಟಕ ಒನ್ ಆಪ್ ಅಥವಾ ಆಸ್ಟಮ್ (BTP/ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ) ಆಪ್‌ಗಳನ್ನು ಬಳಸಬಹುದು. ಇವುಗಳಲ್ಲಿ ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ವಾಹನದ ಫೋಟೋ ಹಾಗೂ ವಿವರಗಳನ್ನು ಪರಿಶೀಲಿಸಿ. ರಿಯಾಯಿತಿಯೊಂದಿಗೆ ದಂಡವನ್ನು ಪಾವತಿಸಬಹುದು.
ಯಾವುದೇ ಸಮೀಪದ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ನೀವೇ ಖುದ್ದಾಗಿ ದಂಡದ ಹಣ ಕಟ್ಟಬಹುದು. ಅಥವಾ ಬೆಂಗಳೂರಿನ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ಭೇಟಿ ನೀಡಿ, ಅಲ್ಲಿಯೂ ನಿಮ್ಮ ದಂಡ ಪಾವತಿಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications