Traffic Advisory: ವೈಕುಂಠ ಏಕಾದಶಿ: ಬೆಂಗಳೂರಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ
ವೈಕುಂಠ ಏಕಾದಶಿ ಪ್ರಯುಕ್ತ ರಾಜ್ಯದಾದ್ಯಂತ ಇಂದು (ಶುಕ್ರವಾರ ಜನವರಿ 10) ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಸಾವಿರಾರು ಜನ ಭಕ್ತರಿ ಸೇರುತ್ತಿದ್ದಾರೆ. ಬೆಂಗಳೂರಿನ ಇಸ್ಕಾನ್ ಹಾಗೂ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಅಪಾರ ಸಂಖ್ಯೆಯ ಜನ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಸಂಚಾರ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರಿನ ವಿವಿಧ ಭಾಗದಲ್ಲಿ ವಾಹನ ಸಂಚಾರವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಎಲ್ಲೆಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಶುಕ್ರವಾರ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗದಲ್ಲಿ ರಥೋತ್ಸವ, ಪೂಜೆ ಹಾಗೂ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಶುಕ್ರವಾರ ಬೆಂಗಳೂರಿನ ವಿವಿಧ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧ ಇರಲಿದೆ.

ಮಲ್ಲೇಶ್ವರದ ವೆಸ್ಟ್ ಆಪ್ ಕಾರ್ಡ್ ರಸ್ತೆ ಮಾರ್ಗ: ಮಲ್ಲೇಶ್ವರದ ವೆಸ್ಟ್ ಆಪ್ ಕಾರ್ಡ್ ರಸ್ತೆಯಲ್ಲಿನ ಇಸ್ಕಾನ್ ದೇವಸ್ಥಾನಕ್ಕೆ ನೂರಾರು ಜನ ಭಕ್ತಾದಿಗಳು ಇಂದು ಬರುತ್ತಾರೆ. ಹೀಗಾಗಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಹಾಗೂ ನಿಧಾನ ವಾಹನ ಸಂಚಾರ ಇರಲಿದೆ. ಹೀಗಾಗಿ ಇಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ವೆಸ್ಟ್ ಅಪ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ವಿಜಯನಗರ, ನಂದಿನಿಲೇಔಟ್, ಮಹಾಲಕ್ಷ್ಮಿ ಲೇಔಟ್ ಕಡೆ ಹೋಗುವ ವಾಹನ ಸಂಚಾರರಿಗೂ ಮಾರ್ಗಸೂಚಿ ನೀಡಲಾಗಿದೆ.
ವೆಸ್ಟ್ ಆಪ್ ಕಾರ್ಡ್ ರಸ್ತೆಯ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ಮಹಾಲಕ್ಷ್ಮಿ ಮೆಟ್ರೋ ಮಾರ್ಗವಾಗಿ ಹೋಗುವ ವಾಹನ ಸವಾರರು ಸೋಪ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಸಾಗಿ. 10ನೇ ಕ್ರಾಸ್‌ನಲ್ಲಿ ಇಲ್ಲವೇ ಕೇತಮಾರನಹಳ್ಳಿ ಜಂಕ್ಷನ್‌ನಿಂದ ಬಲಕ್ಕೆ ತೆಗೆದುಕೊಂಡು 1ನೇ ಬ್ಲಾಕ್ ರಾಜಾಜಿನಗರ ಸಿಗ್ನಲ್‌ನಲ್ಲಿ ಕಾರ್ಡ್ ರಸ್ತೆಗೆ ಹೋಗಬಹುದಾಗಿದೆ. ವೆಸ್ಟ್ ಆಪ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ಮಹಾಲಕ್ಷ್ಮಿ ಮೆಟ್ರೋವರೆಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಕೃಷ್ಣರಾಜಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ, ರಾಮಮೂರ್ತಿನಗರ ಮುಖ್ಯರಸ್ತೆಯ ಕಲ್ಕೆರೆ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಇನ್ನು ಕೃಷ್ಣರಾಜಪುರದ ಮಾರ್ಗದಲ್ಲಿ ಹೋಗುವವರು ಜಿ.ಆರ್.ಟಿ. ಕ್ರಾಸ್ ಹಾಗೂ ಸರ್ಕಾರಿ ಕಾಲೇಜ್ ರಸ್ತೆಗಳ ಮೂಲಕವಾಗಿ ಹೋಗಬಹುದಾಗಿದೆ. ಕಲ್ಕೆರೆ ಕಡೆಗೆ ರಾಮಮೂರ್ತಿನಗರ ಹಳೆ ಪೋಸ್ಟ್ ಆಫೀಸ್ ರಸ್ತೆ ಮೂಲಕ ಹೋಗುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಇಲ್ಲಿನ 9ನೇ ಕ್ರಾಸ್ ರಸ್ತೆಯ 21ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ 17ನೇ ಮುಖ್ಯ ರಸ್ತೆಯ ಜಂಕ್ಷನ್ ಮಾರ್ಗದಲ್ಲೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಇಲ್ಲಿನ ಲೆಜೆಂಡ್ ಜಂಕ್ಷನ್ನ 16ನೇ ಅಡ್ಡರಸ್ತೆಯಲ್ಲೂ ವಾಹನ ಸಂಚಾರ ನಿಷೇಧ ಇರಲಿದೆ.
ಪರ್ಯಾಯ ಮಾರ್ಗ ವ್ಯವಸ್ಥೆ: ಆರ್.ವಿ.ಡೆಂಟಲ್ ಮಾರ್ಗವಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು 23ನೇ ಕ್ರಾಸ್ ತಿರುವು ಪಡೆದುಕೊಂಡು ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಆರ್.ವಿ ಡೆಂಟಲ್ ಕಡೆಯಿಂದ 8ನೇ ಮುಖ್ಯ ರಸ್ತೆ, 9ನೇ ಕ್ಲಾಸ್ ರಸ್ತೆ ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು ವಾಹನ ಸವಾರರು 21ನೇ ಮುಖ್ಯರಸ್ತೆಯ ಎಡ ತಿರುವು ತೆಗೆದುಕೊಂಡು 7ನೇ ಕ್ರಾಸ್ ರಸ್ತೆಯ ಮೂಲಕ ಸಾಗುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
8ನೇ ಮುಖ್ಯ ರಸ್ತೆ 9ನೇ ಕ್ರಾಸ್ ರಸ್ತೆ ಜಂಕ್ಷನ್ ಕಡೆಯಿಂದ ಆರ್.ವಿ. ಡೆಂಟಲ್ಸ್ ಕಡೆ ಬರುವ ವಾಹನ ಸವಾರರು 17ನೇ ಮುಖ್ಯ ರಸ್ತೆ ಜಂಕನ್‌ನಲ್ಲಿ ಬಲ ತಿರುವು ಪಡೆದು ಮುಂದಕ್ಕೆ ಹೋಗಬಹುದಾಗಿದೆ. ಬಂಗಾರಪೇಟೆ ಮುಖ್ಯ ರಸ್ತೆಯಿಂದ 15ನೇ ಕ್ರಾಸ್ ಕಡೆಗೆ ಬಲಕ್ಕೆ ಹೋಗಿ ಅಲ್ಲಿಂದ 2ನೇ ಮುಖ್ಯ ವೈಯಾಲಿಕಾವಲ್ ಕಡೆಗೆ ಲೆಫ್ಟ್‌ಗೆ ತೆಗೆದುಕೊಂಡು ಭಾಷ್ಯಂ ಸರ್ಕಲ್‌ನ ಮೂಲಕ ಹೋಗಬಹುದಾಗಿದೆ ಎಂದು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಮಾರ್ಗದಲ್ಲಿ ಸಾಗುವ ವಾಹನಗಳು ಭಾಷ್ಯಂ ಸರ್ಕಲ್‌ನಿಂದ ಬಂಗಾರಪೇಟೆ ಮುಖ್ಯರಸ್ತೆ ಮಾರ್ಗವಾಗಿ 2ನೇ ಮುಖ್ಯರಸ್ತೆ ಮೂಲಕ ಬಂದು 14ನೇ ಅಡ್ಡರಸ್ತೆಯ ಕಡೆಗೆ ಬಲಕ್ಕೆ ತೆಗೆದುಕೊಳ್ಳಬಹುದು. ಅಲ್ಲಿಂದ 9ನೇ ಮುಖ್ಯರಸ್ತೆಯ ಬಲಕ್ಕೆ ಬಂದು ನಂತರ ಎಡಕ್ಕೆ ತೆಗೆದುಕೊಂಡು ಜೆಡಿ ಪಾರ್ಕ್ ರಸ್ತೆಯ 16ನೇ ಅಡ್ಡರಸ್ತೆಗೆ ಹೋಗಬಹುದಾಗಿದೆ.
ಇಸ್ಕಾನ್ ಮಾರ್ಗ: ಇನ್ನು ಇಸ್ಕಾನ್ ದೇವಸ್ಥಾನದ ಕಡೆ ಬರುವ ಆಟೋ ಹಾಗೂ ಕ್ಯಾಬ್ ಚಾಲಕರು ಭಕ್ತಾದಿಗಳನ್ನು ಮಹಾಲಕ್ಷ್ಮಿ ಮೆಟ್ರೋದಿಂದ ಸೋಪ್ ಫ್ಯಾಕ್ಟರಿ ಕಡೆಗೆ ಹೋಗುವ ಮಾರ್ಗದಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಮಾಡಬಹುದಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.












Click it and Unblock the Notifications