Breaking: ಬೆಂಗಳೂರಲ್ಲಿ ಮಂಗಳವಾರ ಜೋರು ಮಳೆ: ಸಂಚಾರಕ್ಕೆ ಕಿರಿಕಿರಿ
ಬೆಂಗಳೂರು, ಅಕ್ಟೋಬರ್ 18: ರಾಜ್ಯ ರಾಜಧಾನಿಯಲ್ಲಿ ಮಂಗಳವಾರವು ಮಳೆ ತೀವ್ರಗೊಂಡಿದೆ. ಮಧ್ಯಾಹ್ನ ನಗರದ ವಿದ್ಯಾಪೀಠ, ಹುಳಿಮಾವು, ಯಲಹಂಕ, ಅಟ್ಟೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ದಾಖಲಾಗಿದೆ.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದರು ಮಳೆ ಮುನ್ಸೂಚನೆ ಇರಲಿಲ್ಲ, ಮಧ್ಯಾಹ್ನದ ನಂತರ ಸಂಪೂರ್ಣವಾಗಿ ಬದಲಾಯಿತು. ಎಲ್ಲೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾದ ಬೆನ್ನಲ್ಲೆ ಮೊದಲು ಜಿಟಿ ಜಿಟಿ ಮಳೆ ಆರಂಭವಾಯಿತು. ನಂತರ ನಗರದ ಅನೇಕ ಬಡಾವಣೆಗಳಲ್ಲಿ ಗುಡುಗು ಸಹಿತ ಜೋರಾಗಿ ಅಬ್ಬರಿಸಲು ಆರಂಭಿಸಿತು.
ಯಲಹಂಕ, ಹೆಬ್ಬಾಳ, ಜಯನಗರ, ನಾಗವಾರ, ವಿದ್ಯಾರಣ್ಯಪುರ, ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಕೋರಮಂಗಲ, ವಿಜಯನಗರ, ಹಂಪಿನಗರ, ನಾಯಂಡಹಳ್ಳಿ, ಬನಶಂಕರಿ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಕಾಲ ಒಂದೇ ಸಮನೇ ಮಳೆ ಸುರಿಯಿತು.

ಮಳೆಯಿಂದ ವಾಹನ ಸವಾರರು ತೊಂದರೆಗೀಡಾದರು. ಮೆಜೆಸ್ಟಿಕ್ ಬಸ್ ನಿಲ್ದಾಣ, ಸ್ಯಾಟ್‌ಲೈಟ್, ಜಯನಗರ, ಶಾಂತಿನಗರ ಟಿಟಿಎಂಸಿಗಳಲ್ಲಿ ಅಲ್ಲಲ್ಲಿ ಜನರು ಮುಂಜಾಗೃತಾ ದೃಷ್ಟಿಯಿಂದ ಕೊಡೆ ಹಿಡಿದು ಸಂಚರಿಸಿದ್ದು ಕಂಡು ಬಂತು. ಚಾಲುಕ್ಯ ವೃತ್ತ, ಟೌನ್‌ಹಾಲ್, ಕೆ.ಆರ್.ಮಾರುಕಟ್ಟೆ, ರಾಜಾಜಿನಗರ, ಸುಜಾತ, ಜಯನಗರದ ಮೆಟ್ರೋ ಪಿಲ್ಲರ್ ಕೆಳಭಾಗದ ಮುಖ್ಯರಸ್ತೆಗಳಲ್ಲಿ ರಸ್ತೆಯಲ್ಲೇ ನೀರು ನಿಂತಿತ್ತು. ಈ ಭಾಗದಲ್ಲಿ ಸಂಚಾರ ಸಮಸ್ಯೆ ಸೃಷ್ಟಿಯಾಗಿ ಸವಾರರಿಗೆ ಮಳೆ ಕಿರಿ ಕಿರಿ ನೀಡಿತು.
ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಆಯಿತು?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿರುವ ಸಂಜೆ 4 ಗಂಟೆವರೆಗಿನ ಮಳೆ ಮಾಹಿತಿ ಪ್ರಕಾರ, ವಿದ್ಯಾಪೀಠದಲ್ಲಿ ಅಧಿಕ 48 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಹೊರಮಾವು 32 ಮಿ.ಮೀ., ಎಚ್‌ಎಎಲ್ ವಿಮಾನ ನಿಲ್ದಾಣ 31 ಮಿ.ಮೀ., ಕಾಟನ್‌ಪೇಟೆ ಮತ್ತು ರಾಜಮಹಲ್ ಗುಟ್ಟಹಳ್ಳಿಯಲ್ಲಿ ತಲಾ 30 ಮಿ.ಮೀ., ಅಟ್ಟೂರು 26 ಮಿ.ಮೀ., ಯಲಹಂಕ 25 ಮಿ.ಮೀ., ಜಕ್ಕೂರು ಮತ್ತು ಹಗದೂರು 21 ಮಿ.ಮೀ., ಸಂಪಂಗಿರಾಮನಗರ 1921 ಮಿ.ಮೀ., ವನ್ನಾರ್‌ಪೇಟೆ 1921 ಮಿ.ಮೀ. ಹಾಗೂ ಸಾರಕ್ಕಿಯಲ್ಲಿ 1821 ಮಿ.ಮೀ. ಮಳೆ ದಾಖಲಾಗಿದೆ.
2 ದಿನದ ಮಳೆ ಮುನ್ಸೂಚನೆ
ನಗರದಲ್ಲಿ ಮುಂದಿನ ಎರಡು ಮೂರು ದಿನ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ನಗರದ ಬಹಳಷ್ಟು ಕಡೆಗಳಲ್ಲಿ ವ್ಯಾಪಕವಾಗಿ, ಇನ್ನು ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಸುರಿಯಲಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications