Bisi Bele Bath: ಬೆಂಗಳೂರಿನಲ್ಲಿ ಬಿಸಿ ಬಿಸಿ ಬಿಸಿಬೇಳೆ ಬಾತ್ ಸಿಗುವ ಬೆಸ್ಟ್ ಹೋಟೆಲ್‌ಗಳಿವು
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಾಗೂ ರುಚಿಕರ ಆಹಾರಗಳಲ್ಲಿ ಬಿಸಿಬೇಳೆ ಬಾತ್ ಕೂಡ ಒಂದು. ಹೆಸರಿಗೆ ತಕ್ಕಂತೆ ಬಿಸಿ ಬಿಸಿಯಾದ ಬಿಸಿಬೇಳೆ ಬಾತ್‌ನೊಂದಿಗೆ ಚಿಪ್ಸ್ ಅಥವಾ ಖಾರ ಸೇರಿಸಿಕೊಂಡು ತಿನ್ನುತ್ತಿದ್ದರೆ ಕುಳಿದಿದ್ದ ಜಾಗವೇ ಸ್ವರ್ಗವೆಸಿಸುತ್ತದೆ. ಬಿಸಿಬೇಳೆ ಬಾತ್ ಬೆಳಗ್ಗೆಯ ಉಪಹಾರಕ್ಕೂ ಸೈ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೂ ಸೈ. ಕೆಲವರಂತೂ ಇದರ ರುಚಿಗೆ ಮನಸೋತು ಮೂರು ಹೊತ್ತು ಕೂಡ ತಿನ್ನುವವರಿದ್ದಾರೆ.
ಬಿಸಿಬೇಳೆ ಬಾತ್ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಕ್ಕಿ, ಬೇಳೆ ಹಾಗೂ ತರಕಾರಿಗಳಿಂದ ತಯಾರಿಸುವ ಈ ಖಾದ್ಯ ಬೆಳೆಯುವ ಮಕ್ಕಳ ಹಾಗೂ ವಯಸ್ಸಾದವರ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬಿಸಿಬೇಳೆ ಬಾತ್ ಎಲ್ಲರ ಮನೆಯ ಉಪಹಾರದ ಮೆನುವುನಲ್ಲಿ ಒಂದು ದಿನವನ್ನು ಖಚಿತವಾಗಿ ಪಡೆದಿರುತ್ತದೆ.

ಬೆಂಗಳೂರು ಎಂದಾಕ್ಷಣ ಬಿಸಿಬೇಳೆ ಬಾತ್ ಎನ್ನುವವರಿದ್ದಾರೆ. ಯಾಕೆಂದರೆ ಬೆಂಗಳೂರಿನ ಬಿಸಿಬೇಳೆ ಬಾತ್ ದೇಶದ ಮೂಲೆಮೂಲೆಗೂ ಜನಪ್ರಿಯತೆ ಪಡೆದಿದೆ. ಬೆಂಗಳೂರಿನ ಬೆಸ್ಟ್ ಆಹಾರಗಳಲ್ಲಿ ಪಟ್ಟಿಯಲ್ಲಿ ಬಿಸಿಬೇಳೆ ಬಾತ್ ಅಗ್ರಸ್ಥಾನ ಪಡೆಯುತ್ತದೆ. ಮನೆಯಲ್ಲಿ ಮಾಡಿದ ಬಿಸಿಬೇಳೆ ಬಾತ್ ತಿಂದು ಬೇಸರವೆನಿಸಿದ್ದರೆ ಬೆಂಗಳೂರಿನ ಈ ಐದು ಹೋಟೆಲ್‌ಗಳಲ್ಲಿ ಬಿಸಿಬೇಳೆ ಬಾತ್ ಸವಿಯಿರಿ. ಬೆಂಗಳೂರಿನಲ್ಲಿ ಬಿಸಿಬೇಳೆ ಬಾತ್ ಸಿಗುವ ಬೆಸ್ಟ್ ಹೋಟೆಲ್‌ಗಳ ಪಟ್ಟಿ ಇಲ್ಲಿದೆ.
1. ಮಾವಳ್ಳಿ ಟಿಫನ್ ರೂಮ್
ಬೆಂಗಳೂರಿನಲ್ಲಿ ಎಂಟಿಆರ್ ಹೋಟೆಲ್ ಎಂದೇ ಜನಪ್ರಿಯತೆ ಪಡೆದಿರುವ ಮಾವಳ್ಳಿ ಟಿಫನ್ ರೂಮ್ ಹೋಟೆಲ್‌ಗೆ ಸುಧೀರ್ಘ ಇತಿಹಾಸವಿದೆ. 1920 ರಲ್ಲಿ ಗಣಪ್ಪಯ್ಯ ಮೈಯ್ಯ, ಪರಮೇಶ್ವರ ಮೈಯ್ಯ, ಮತ್ತು ಯಜ್ಞನಾರಾಯಣ ಮೈಯ್ಯ ಎನ್ನುವವರು ಉಡುಪಿಯಿಂದ ಬೆಂಗಳೂರಿಗೆ ಬಂದು ಆರಂಭಿಸಿದ ಈ ಸಾಮ್ರಾಜ್ಯ ಇಂದು ಬಹುದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ದಕ್ಷಿಣ ಭಾರತ ತಿಂಡಿಗಳಿಂದ ಮಾವಳ್ಳಿ ಟಿಫನ್ ರೂಮ್ ಬೆಂಗಳೂರಿನಲ್ಲಿ ಮನೆಮಾತಾಗಿದೆ.
ಇಡ್ಲಿ, ದೋಸೆ ಸೇರಿದಂತೆ ಮಾವಳ್ಳಿ ಟಿಫನ್ ರೂಮ್ ಹೋಟೆಲ್ ಬೆಳಗಿನ ಉಪಹಾರಕ್ಕೆ ಜನಪ್ರಿಯತೆ ಪಡೆದಿದ್ದು, ಇಲ್ಲಿ ಸಿಗುವ ಬಿಸಿಬೇಳೆ ಬಾತ್ ಕೂಡ ದಿ ಬೆಸ್ಟ್ ಆಗಿದೆ. ಸದಾ ಜನರಿಂದ ತುಂಬಿ ತುಳುವ ಈ ಹೋಟೆಲ್‌ನಲ್ಲಿ ಕಾದು ಬಿಸಿಬೇಳೆ ಬಾತ್ ಸವಿಯಬೇಕು. ಇಲ್ಲಿನ ರುಚಿ ನೀವು ಕಾದ ಸಮಯಕ್ಕೂ ನೀಡಿದ ಹಣಕ್ಕೂ ನ್ಯಾಯ ಒದಗಿಸುತ್ತದೆ. ಮಾವಳ್ಳಿ, ಲಾಲ್‌ಬಾಗ್ ರೋಡ್ ಹಾಗೂ ಬಸವನಗುಡಿಯಲ್ಲಿರುವ ಈ ಹೋಟೆಲ್ ಬೆಳಗ್ಗೆ 6:30ರಿಂದ 11 ಗಂಟೆವರೆಗೆ ಮಧ್ಯಾಹ್ನ 12:30ರಿಂದ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ.

2. ವುಡ್ಹೀಸ್ ಹೋಟೆಲ್
ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳಲ್ಲಿ ಒಂದಾಗಿರುವ ಜಯನಗರದ ವುಡ್ಹೀಸ್ ಹೋಟೆಲ್ ಒಂದೊಳ್ಳೆ ಬಿಸಿಬೇಳೆ ಬಾತ್ ತಿನ್ನಬೇಕು ಎಂದುಕೊಂಡವರಗೆ ಸೂಕ್ತವಾದ ಸ್ಥಳ. ಉತ್ತಮ ಗುಣಮಟ್ಟದ ಆಹಾರಕ್ಕೆ ವುಡ್ಹೀಸ್ ಹೆಸರುವಾಸಿಯಾಗಿದ್ದು, ಇಲ್ಲಿನ ವಾತಾವರಣವು ಆಹ್ಲಾದಕರವಾಗಿದೆ. ಇಲ್ಲಿ ಬಿಸಿಬೇಳೆ ಬಾತ್ ಜೊತೆಗೆ ಇತರ ದಕ್ಷಿಣ ಭಾರತದ ಉಪಹಾರವೂ ಕೂಡ ಲಭ್ಯವಿದ್ದು, ಎಲ್ಲವೂ ರುಚಿಯಲ್ಲಿ ಬೆಸ್ಟ್ ಆಗಿವೆ. ಜಯನಗರದ ಮೂರನೇ ಬ್ಲಾಕ್‌ನಲ್ಲಿರುವ ಈ ಹೋಟೆಲ್ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10:30 ವರೆಗೆ ತೆರೆದಿರುತ್ತದೆ.
3. ಮಿನಿ ಸಾಮ್ರಾಟ್ ಚಾಲುಕ್ಯ
ಮಿನಿ ಸಾಮ್ರಾಟ್ ಚಾಲುಕ್ಯ ಹೋಟೆಲ್ ಸಸ್ಯಹಾರಿಗಳಿಗೆ ಉತ್ತಮ ಆಯ್ಕ. ಇಲ್ಲಿನ ಆಹಾರವನ್ನು ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುವಷ್ಟು ರುಚಿಕರವಾಗಿರುತ್ತದೆ. ಇಲ್ಲಿನ ಆಹ್ಲಾದಕರ ವಾತಾವರಣ, ಸ್ವಚ್ಛತೆ, ಹಾಗೂ ಬಿಡಿಸುವ ಪದ್ಧತಿ ಗ್ರಾಹಕರನ್ನು ಆಕರ್ಷಿಸುತ್ತದೆ. ಇಲ್ಲಿನ ಬಿಸಿಬೇಳೆ ಬಾತ್ ಹೆಚ್ಚು ಜನಪ್ರಿಯವಾಗಿದ್ದು, ಇತರ ಆಹಾರಗಳು ಕೂಡ ರುಚಿಕರವಾಗಿರುತ್ತದೆ. ವಸಂತ ನಗರದಲ್ಲಿರುವ ಈ ಹೋಟೆಲ್ ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೆ ತೆರೆದಿರುತ್ತದೆ.
4. ಉಡುಪಿ ಶ್ರೀಕೃಷ್ಣ ಭವನ
ಬೆಂಗಳೂರಿನ ಸಸ್ಯಹಾರಿ ಹೋಟೆಲ್‌ಗಳಲ್ಲಿ ಉಡುಪಿ ಶ್ರೀಕೃಷ್ಣ ಭವನ ಜನಪ್ರಿಯವಾದದು. ಅತಿ ಹಳೆಯ ಹೋಟೆಲ್‌ಗಳಲ್ಲಿ ಒಂದಾಗಿರುವ ಉಡುಪಿ ಶ್ರೀಕೃಷ್ಣ ಭವನ ದಕ್ಷಿಣ ಭಾರತದ ಉಪಹಾರಗಳಿಗೆ ಹಾಗೂ ಮಧ್ಯಾಹ್ನನ ಊಟಕ್ಕೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಮಸಾಲೆ ದೋಸೆ, ಇಡ್ಲಿ, ಕೇಸರಿ ಬಾತ್ ಹಾಗೂ ಬಿಸಿಬೇಳೆ ಬಾತ್‌ಅನ್ನು ಮಿಸ್ ಮಾಡದೇ ಟ್ರೈ ಮಾಡಿ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಹೋಟೆಲ್ ಇದ್ದು, ಬಸವನಗುಡಿಯ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿರುವ ಬ್ರಾಂಚ್‌ಗೆ ಭೇಟಿ ನೀಡಿ ಮಿಸ್ ಮಾಡದೇ ಬಿಸಿಬೇಳೆ ಬಾತ್ ಸವಿಯಿರಿ.

5. ವೀಣಾ ಸ್ಟೋರ್ಸ್ ಮಲ್ಲೇಶ್ವರಂ
ಎಲ್ಲಾ ರೀತಿಯ ಉಪಹಾರಕ್ಕೂ ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಹೋಟೆಲ್ ಎಂದರೆ ಮಲ್ಲೇಶ್ವರಂನಲ್ಲಿರುವ ವೀಣಾ ಸ್ಟೋರ್ಸ್. ಶುದ್ಧ ಸಸ್ಯಹಾರವಾಗಿರುವ ಈ ಹೋಟೆಲ್‌ನಲ್ಲಿ ಯಾವಾಗಲೂ ಜನಸಂದಣಿಯನ್ನು ಕಾಣಬಹುದು. ತಮ್ಮ ರುಚಿಯಿಂದಲೇ ನೂರಾರು ಖಾಯಂ ಗ್ರಾಹಕರನ್ನು ಹೊಂದಿರುವ ಮಲ್ಲೇಶ್ವರಂನ ವೀಣಾ ಸ್ಟೋರ್ಸ್‌ಗೆ ಭೇಟಿ ನೀಡಿದರೆ ಇಡ್ಲಿ, ದೋಸೆ, ಖಾರಬಾತ್, ಉದ್ದಿನ ವಡೆ, ಚೌಚೌ ಬಾತ್ ಜೊತೆಗೆ ಬಿಸಿಬೇಳೆ ಬಾತ್ ಕೂಡ ಸೇವಿಸುವುದನ್ನು ಮಿಸ್ ಮಾಡಬೇಡಿ.












Click it and Unblock the Notifications