Tomato price in Bangalore: ನಿರಂತರವಾಗಿ ಸುರಿಯುತ್ತಿರುವ ಮಳೆ- ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಮತ್ತಷ್ಟು ದುಬಾರಿ, ಅಂಕಿಅಂಶ
ಬೆಂಗಳೂರು/ಕೋಲಾರ, ಜುಲೈ 27: ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಮತ್ತಷ್ಟು ದುಬಾರಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಟೊಮೆಟೊ ಬೆಲೆ ಕಳೆದ ವಾರಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದೆ.
ಬೆಂಗಳೂರಿನ ಬೀದಿ ಬದಿ ತರಕಾರಿ ವ್ಯಾಪಾರಿಗಳು ಕಳೆದ ವಾರಾಂತ್ಯದಲ್ಲಿ ಕೆಜಿಗೆ 110 ಅಥವಾ 120 ರೂಪಾಯಿಗೆ ಟೊಮೆಟೊ ಮಾರಾಟ ಮಾಡುತ್ತಿದ್ದರು. ಇದೀಗ ಪ್ರತಿ ಕೆಜಿಗೆ 140 ರೂಪಾಯಿ ಹೇಳುತ್ತಿದ್ದಾರೆ.

ನಿರಂತರ ಮಳೆಯೇ ಬೆಲೆ ಏರಿಕೆಗೆ ಕಾರಣ ಎಂದು ಮಾರಾಟಗಾರರು ಮತ್ತು ಕೃಷಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ನಡುವೆ ಟೊಮೆಟೊ ಕೊಯ್ಲು ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹೆಚ್ಚಿನ ಬೇಡಿಕೆ ಇದೆ. ಆದರೆ, ಪೂರೈಕೆ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದ ಪೂರೈಕೆಯಲ್ಲಿ ಕೊರತೆ ಇದೆ. ಕೋಲಾರ ಎಪಿಎಂಸಿಯಲ್ಲಿ ಬುಧವಾರ ಟೊಮೆಟೊ ಖರೀದಿ ದರದಲ್ಲಿ ಭಾರಿ ಏರಿಕೆಯಾಗಿದೆ ಎಂದು ಸಿಎಂಆರ್ ಟೊಮೇಟೊ ಮಂಡಿಯ ಸಿಆರ್ ಹರೀಶ್ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ತಿಳಿಸಿದ್ದಾರೆ.
2,000 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಬಾಕ್ಸ್‌ಗಳು ( ಹದಿನೈದು ಕೆಜಿ ಹೊಂದಿರುವ ಡಬ್ಬಿಗಳು ) ಕಳೆದ ವಾರ ಸ್ವಲ್ಪ ಅಗ್ಗವಾಗಿದ್ದವು. 1,400 ರಿಂದ 1,900 ರೂ.ಗೆ ಲಭ್ಯವಿದ್ದವು. ಆದರೆ, ಬುಧವಾರ ಉತ್ತಮ ಗುಣಮಟ್ಟದ ಟೊಮೆಟೊ 15 ಕೆಜಿ ಬಾಕ್ಸ್‌ಗೆ 2,100 ರೂ.ಗೆ ಮಾರಾಟವಾಗಿದೆ ಎಂದು ಹರೀಶ್ ಹೇಳಿದ್ದಾರೆ. ಕೋಲಾರದ ಎಪಿಎಂಸಿ ಆವರಣದಲ್ಲಿರುವ ತಮ್ಮ ಮಂಡಿಯಲ್ಲಿ ಹರೀಶ್ ಟೊಮೆಟೊ ಹರಾಜು ಮಾಡುತ್ತಾರೆ.

ಬೆಂಗಳೂರು ಎಪಿಎಂಸಿಯಲ್ಲಿ ಪ್ರತಿ ಕೆಜಿ ಟೊಮೆಟೊ ದರ 84-92 ರೂ.ಗಳಾಗಿದೆ. ಬೆಂಗಳೂರು ಗ್ರಾಮಾಂತರದಿಂದ ಟೊಮೆಟೊ ಉತ್ಪನ್ನವನ್ನು ಪಡೆಯಲಾಗುತ್ತದೆ. ಕೋಲಾರದಿಂದ ಬರುತ್ತಿರುವ ಟೊಮೆಟೊ ಬೆಲೆ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಬಿನ್ನಿಪೇಟೆ ಎಪಿಎಂಸಿ ಕಾರ್ಯದರ್ಶಿ ರಾಜಣ್ಣ 'ಟೈಮ್ಸ್ ಆಫ್ ಇಂಡಿಯಾ' ಗೆ ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕುಣಿಗಲ್, ರಾಮನಗರ, ಆನೇಕಲ್ ಮತ್ತು ಕನಕಪುರದಿಂದ ಟೊಮೆಟೊ ಪೂರೈಕೆಯಾಗುತ್ತಿದೆ. ಈ ಎಲ್ಲ ಕಡೆ ಎಡಬಿಡದೆ ಮಳೆಯಾಗುತ್ತಿದ್ದು, ಕಟಾವು ಕಷ್ಟಕರವಾಗಿದೆ. ಸಾಗಾಣಿಕೆ ವಿಳಂಬವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಮಾರುಕಟ್ಟೆ ದರದಲ್ಲಿ ಟೊಮೆಟೊಗಳನ್ನು ಖರೀದಿಸಬೇಕು. ಅವುಗಳನ್ನು ಉತ್ತರ ಭಾರತದ ನಗರಗಳಿಗೆ ಕಳುಹಿಬೇಕೆಂದು ಕೇಂದ್ರವು ಆದೇಶಿಸಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ದಕ್ಷಿಣ ರಾಜ್ಯಗಳಿಂದ ಟೊಮೆಟೊಗಳನ್ನು ಖರೀದಿಸುತ್ತಿವೆ. ಇವುಗಳನ್ನು ಉತ್ತರ ಭಾರತದಲ್ಲಿ ಶೇ 30 ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಬೆಲೆ ಏರಿಳಿತವನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಂದಿನ ಕೆಲ ದಿನಗಳಲ್ಲಿ ನಿರಂತರ ಮಳೆ ಸುರಿಯುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಮತ್ತಷ್ಟು ದುಬಾರಿಯಾಗಬಹುದು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮವನ್ನು ತೆರೆದುಕೊಳ್ಳಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ.












Click it and Unblock the Notifications