30 ವರ್ಷದಿಂದ ನೆಮ್ಮದಿ ಇರಲಿಲ್ಲ: ಜೈಲಿನಲ್ಲಿಯೇ ನೆಮ್ಮದಿ ಎಂದ ಹಲ್ಲೆಗೆರೆ ಶಂಕರ್
ಬೆಂಗಳೂರು, ಅ. 06: ನಾನೂ ಕಳೆದ ಮೂವತ್ತು ವರ್ಷದಿಂದ ನೆಮ್ಮದಿಯಾಗಿ ಇರಲಿಲ್ಲ. ಇನ್ಮುಂದೆ ನೆಮ್ಮದಿಯಾಗಿರಲಿದ್ದೇನೆ. ಇದಕ್ಕಿಂತಲೂ ಬೇರೆ ನೆಮ್ಮದಿ ಜಾಗವಿಲ್ಲ..! ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ಹಲ್ಲೆಗೆರೆ ಶಂಕರ್ ಮತ್ತು ಇಬ್ಬರು ಅಳಿಯಂದಿರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಹಲ್ಲೆಗೆರೆ ಶಂಕರ್ ಜೈಲಿನಲ್ಲಿ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ಮಾತಿದು.
ಬ್ಯಾಡರಹಳ್ಳಿಯ ತಿಗರಳಪಾಳ್ಯದ ಐಷಾರಾಮಿ ಮನೆಯಲ್ಲಿ ಶಂಕರ್ ಪುತ್ರ ಮಧುಸಾಗರ್, ಪತ್ನಿ ಭವಾನಿ, ಮಕ್ಕಳಾದ ಸಿಂಚನಾ, ಸಿಂಧೂರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. 9 ತಿಂಗಳ ಮಗುವನ್ನು ಸಿಂಧೂರಾಣಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆತ್ಮಹತ್ಯೆ ವೇಳೆ ಮಧು ಸಾಗರ್ ಮತ್ತು ಕುಟುಂಬ ಬರೆದಿಟ್ಟಿದ್ದ ಡೆತ್‌ನೋಟ್‌ಗಳು ಪೊಲೀಸರಿಗೆ ಸಿಕ್ಕಿದ್ದವು. ಮನೆ ಶೋಧ ನಡೆಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಚಿ. ರಾಜೀವ್ ಮತ್ತು ತಂಡ, ಸುದೀರ್ಘ ತನಿಖೆ ನಡೆಸಿದ್ದರು.

ಹಲ್ಲೆಗೆರೆ ಶಂಕರ್ ಮೊಬೈಲ್ ಹಾಗೂ ಲ್ಯಾಪ್ ಟಾಪ್ ವಶಪಡಿಸಿಕೊಂಡು ತನಿಖೆ ನಡೆಸಿದಾಗ ಹಲ್ಲೆಗೆರೆ ಶಂಕರ್ ಮತ್ತು ಅಳಿಯಂದಿರಾದ ಶ್ರೀನಾಥ್ ಮತ್ತು ಪ್ರವೀಣ್ ಅವರೇ ಕಾರಣ ಆಗಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಹಲ್ಲೆಗೆರೆ ಶಂಕರ್ ಮತ್ತು ಅವರ ಅಳಿಯಂದಿರನ್ನು ಬ್ಯಾಡರಹಳ್ಳಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜಾಮೀನು ಕೋರಿ ಹಲ್ಲೆಗೆರೆ ಶಂಕರ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿ ವಜಾ ಮಾಡಿದೆ. ಇದೀಗ ಶಂಕರ್ ಮತ್ತು ಆತನ ಆಳಿಯಂದರು ಇಬ್ಬರು ಜಾಮೀನು ಅರ್ಜಿ ಕೂಡ ವಜಾ ಆಗಿದೆ.
ಹೈಕೋರ್ಟ್ ಮೊರೆ ಹೊಗಲು ಚಿಂತನೆ: ಅಧೀನ ನ್ಯಾಯಾಲಯದಲ್ಲಿ ಶಂಕರ್ ಜಾಮೀನು ಅರ್ಜಿ ವಜಾ ಹಿನ್ನೆಲೆಯಲ್ಲಿ ಶಂಕರ್ ಮತ್ತು ಅಳಿಯಂದಿರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ. ಶಂಕರ್ ಪರ ವಕೀಲರು ನಿರೀಕ್ಷಣಾ ಜಮೀನು ಕೋರಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆಮ್ಮದಿ ಜೀವನವಂತೆ: ಇನ್ನು ಹಲ್ಲೆಗೆರೆ ಶಂಕರ್ ತನ್ನ ಮೂವರು ಮಕ್ಕಳು ಪತ್ನಿ, ಮೊಮ್ಮಗು ಕಳೆದುಕೊಂಡ ಬಗ್ಗೆ ಯಾವ ಪಶ್ಚಾತಾಪವೂ ಇಲ್ಲ. ಶಂಕರ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸದ ಬಳಿಕ " ನನಗೆ ಮೂವತ್ತು ವರ್ಷದಿಂದ ನೆಮ್ಮದಿ ಇರಲಿಲ್ಲ. ಇದೀಗ ನೆಮ್ಮದಿಯಾಗಿದ್ದೇನೆ" ನನ್ನ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಜೈಲಿನಲ್ಲಿ ನೆಮ್ಮದಿ ದಿನಗಳನ್ನು ಕಳೆಯುತ್ತೇನೆ. ನನ್ನ ಜೀವನದಲ್ಲಿ ಈಗ ನೆಮ್ಮದಿ ದಿನಗಳು ಸಿಕ್ಕಿವೆ" ಎಂದು ಹೇಳಿಕೊಂಡಿದ್ದಾನೆ.

ಹತ್ತು ಲಕ್ಷ ರೂ. ವಿಚಾರವಾಗಿ ಮಗನ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಶಂಕರ್‌ಗೆ ಅನೇಕ ಸಲ ಕರೆ ಮಾಡಿದರೂ, ಎತ್ತಿರಲಿಲ್ಲ. ಇನ್ನು ತನ್ನ ತಂದೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಮೃತ ಅವರ ಪುತ್ರ ಮಧು ಸಾಗರ್ ಡೈರಿಯಲ್ಲಿ ಉಲ್ಲೇಖಿಸಿದ್ದಾನೆ. ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ. ಇಡೀ ಕುಟುಂಬ ಆತ್ಮಹತ್ಯೆ ಮೊರೆ ಹೋಗಲು ಶಂಕರ್ ಅವರೇ ಕಾರಣ ಎಂಬುದಕ್ಕೆ ಮಹತ್ವದ ಸಾಕ್ಷಿಗಳು ಸಿಕ್ಕಿದ್ದವು. ಜತೆಗೆ ಸಾಂದರ್ಭಿಕ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ತಾನು ಸಾಚಾ, ನನ್ನ ಕುಟುಂಬ ಕಳೆದುಕೊಂಡ ನೋವಿನಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ ಹಲ್ಲೆಗೆರೆ ಶಂಕರ್ ಅಸಲಿ ಮುಖ ಬಯಲಾಗಿದ್ದು, ಸದ್ಯಕ್ಕೆ ಜೈಲಿನಲ್ಲಿದ್ದಾರೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications