ಈಶ್ವರಪ್ಪ ಅವರ ಈ ಟ್ವೀಟ್ ಬೆಂಬಲಿಗರ ಆಕ್ರೋಶವನ್ನು ಶಮನಗೊಳಿಸುತ್ತಾ?
ಬೆಂಗಳೂರು, ಆಗಸ್ಟ್ 27: ಖಾತೆ ಹಂಚಿಕೆ ಕುರಿತು ಬಿಜೆಪಿಯಲ್ಲಿ ಅಸಮಾಧಾನ ಬುಗಿಲೆದ್ದಿರುವಾಗ ಅದಕ್ಕೆ ನೀರೆರಚುವ ಕೆಲಸವನ್ನು ಈಶ್ವರಪ್ಪ ಮಾಡಿದ್ದಾರೆ.
''ಈಗ ನಮ್ಮೆಲ್ಲರ ದೃಷ್ಟಿ ರಾಜ್ಯದ ಅಭಿವೃದ್ಧಿ ಮೇಲೆ ಮಾತ್ರ ಇರಬೇಕು. ಅತಿವೃಷ್ಟಿ-ಅನಾವೃಷ್ಟಿಯಿಂದ ಬಳಲಿರುವ ಜನರಿಗೆ ಬೆಂಬಲವಾಗಿ ನಿಲ್ಲಬೇಕು. ಪಕ್ಷದ ವರಿಷ್ಠರು ನಿರ್ಧರಿಸಿ ಯೋಜಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ನಾವು ಕಾರ್ಯ ತತ್ಪರರಾಗಬೇಕು. ಯಾವುದೇ ಪ್ರತಿಭಟನೆ, ಅಸಮಾಧಾನಕ್ಕೆ ಆಸ್ಪದ ಕೊಡಬಾರದು'' ಎಂದು ಮನವಿ ಮಾಡಿದ್ದಾರೆ.
ಖಾತೆ ಹಂಚಿಕೆಯಲ್ಲಿ ಆರ್ ಅಶೋಕ್, ಜಗದೀಶ್ ಶೆಟ್ಟರ್, ಸಿಟಿ ರವಿ ಹಾಗೂ ಸೋಮಣ್ಣ ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ಇತ್ತ ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಿಡಿಕಾರಿದ್ದು, ಎಚ್ಚರಿಕೆಯನ್ನೂ ಕೂಡ ನೀಡಿದೆ.

ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಈ ಬಾರಿ ಅವರಿಗೆ ಮತ್ತೆ ಡಿಸಿಎಂ ಪೋಸ್ಟ್ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಿಡಿ ಕಾರಿದೆ.
ಇಂಧನ ಖಾತೆ ಕೇಳಿದ್ದ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪ ಟ್ವೀಟ್ ಮಾಡಿ ಸಮಾಧಾನಪಡಿಸಿದ್ದಾರೆ.












Click it and Unblock the Notifications