ಅ. 27ರಿಂದ ತಿಂಡಿಪೋತರ ಹಬ್ಬ: ರುಚಿ ನೋಡದ ತಿನಿಸುಗಳ ಆಹಾರೋತ್ಸವದ ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 25: ಆಹಾರ ಪ್ರಿಯರು ಸಂಭ್ರಮಿಸುವ ದೇಶ, ವಿದೇಶಗಳ ಭಿನ್ನ, ವಿಭಿನ್ನ ಖಾದ್ಯಗಳನ್ನು ಸವಿದು ಸಂತೃಪ್ತರಾಗಲು ಐ ನೆಟ್ ವರ್ತಿಂಗ್ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಅಕ್ಟೋಬರ್ 27 ರಿಂದ ಮೂರು ದಿನಗಳ ಕಾಲ ಅತಿ ದೊಡ್ಡ ಫ್ರೀಡಂ ಸನಫ್ಲವರ್ ಆಯಿಲ್ ಪ್ರಸ್ತುತಪಡಿಸುತ್ತಿರುವ ಸಸ್ಯಾಹಾರಿ ಆಹಾರ ಮೇಳ 'ತಿಂಡಿಪೋತರ ಹಬ್ಬ 2023' ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಡಿ ನರೇಶ್ ಬಾಬು ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಂಡಹಳ್ಳಿಯ ಪಂತರ ಪಾಳ್ಯದ ನಂದಿ ಲಿಂಕ್ ಮೈದಾನದಲ್ಲಿ ಅಕ್ಟೋಬರ್ 27, 28 ಮತ್ತು 29 ರಂದು ಹಿಂದೆಂದೂ ಕಂಡು ಕೇಳಿಯರಿಯದ, ರುಚಿ ನೋಡದ ತಿಂಡಿ, ತಿನಿಸುಗಳ ಆಹಾರೋತ್ಸವದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ. ಕೇವಲ ಸಸ್ಯಾಹಾರಿ ಭಕ್ಷ್ಯ ಬೋಜನಗಳ ಮಳಿಗೆಗಳಿರುವುದು ಇಲ್ಲಿ ವಿಶೇಷ. 600ಕ್ಕೂ ಹೆಚ್ಚು ಬಗೆಯ ವಿವಿಧ ಆಹಾರ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಮಾತನಾಡಿ, ನಂದಿ ಲಿಂಕ್ ಮೈದಾನದಲ್ಲಿ 80ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಸಾವಿರಕ್ಕೂ ಅಧಿಕ ಬಾಣಸಿಗರ ಸಸ್ಯಾಹಾರಿ ಖಾದ್ಯಗಳ ತಯಾರಿಕೆಯ ಕೈಚಳಕ ವೀಕ್ಷಿಸಿ, ಸವಿಯಲು ಇದು ಸುರ್ವಣಾವಕಾಶವಾಗಿದೆ ಎಂದು ತಿಳಿಸಿದರು.
ಆಹಾರ ಪ್ರಿಯರನ್ನು ಆಹಾರೋತ್ಸವವು ಪುಳಕಿತಗೊಳಿಸಲಿದೆ. ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಉಣ ಬಡಿಸುವ, ಕೆಲ ಮಳಿಗೆಗಳಲ್ಲಿ ಸಿದ್ಧಪಡಿಸಿ ಪ್ಯಾಕ್ ಮಾಡಿದ ಆಹಾರವನ್ನು ಸಹ ಗ್ರಾಹಕರಿಗೆ ವಿತರಿಸಲಾಗುವುದು. ಮೂರು ದಿನಗಳ ಈ ಹಬ್ಬದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ತಿಂಡಿಪೋತರ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಫ್ರೀಡಂ ಸನಫ್ಲವರ್ ಆಯಿಲ್ ಪ್ರಸ್ತುತಪಡಿಸುವ ತಿಂಡಿಪೋತರ ಹಬ್ಬ 2023 ಕಾರ್ಯಕ್ರಮದ ಆಯೋಜಕರಾದ ಡಿ.ಡಿ ಪ್ರಶಾಂತ್ ಮಾತನಾಡಿ, ಇದೊಂದು ಪರಿಸರ ಸ್ನೇಹಿ ಮತ್ತು ಶುಚಿತ್ವಕ್ಕೆ ಒತ್ತು ನೀಡುವ ಹಬ್ಬವಾಗಿದೆ. ಮೇಳಕ್ಕೆ ಆಗಮಿಸುವವರು ಹಾಡು, ಕುಣಿತ, ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ವಾರಾಂತ್ಯದಲ್ಲಿ ಇಷ್ಟವಾಗುವ ಆಹಾರವನ್ನು ಸೇವಿಸಿ ಮೋಜು -ಮಸ್ತಿಯಲ್ಲಿ ತೊಡಗಲು ಬೆಂಗಳೂರು ನಾಗರಿಗೆ ಇದು ಸುವರ್ಣಾವಕಾಶವಾಗಿದೆ. ಸಾಂಪ್ರಾಯಿಕ ಆಹಾರ, ಉತ್ತರ, ದಕ್ಷಿಣ ಭಾರತ, ಸಾಂಪ್ರದಾಯಿಕ, ದೇಶಿ ಅಡುಗೆಗಳ ರುಚಿ ನೋಡಬಹುದಾಗಿದೆ.
ಆರೋಗ್ಯಕ್ಕೆ ಪೂರಕವಾದ ಪೌಷ್ಟಿಕ ಆಹಾರವಷ್ಟೇ ಅಲ್ಲದೇ ವಿದೇಶಗಳ ತಿಂಡಿ - ತಿನಿಸುಗಳಿಗೂ ಪ್ರತ್ಯೇಕ ಮಳಿಗೆ ತೆರೆಯಲಾಗಿದೆ ಎಂದು ಹೇಳಿದರು. ಕಾರ್ ಪಾರ್ಕಿಂಗ್ ಗೆ ಉತ್ತಮ ವ್ಯವಸ್ಥೆಯನ್ನು ಮಾಡಲಾಗಿದ್ದು, ಆಹಾರ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ.












Click it and Unblock the Notifications