ಬೆಂಗಳೂರಿಗರಿಗೆ ಹೊಸ ತಲೆನೋವು.. ಹಾಲಿನ ಪ್ಯಾಕೆಟ್‌ಗಳು ಕ್ಷಣ ಮಾತ್ರದಲ್ಲೇ ಮಾಯ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಹೊಸ ಕಳ್ಳತನದ ಪ್ರಕರಣಗಳು ಸದ್ದು ಮಾಡತೊಡಗಿವೆ. ಇಲ್ಲಿವರೆಗೆ ಕಾರು, ಬೈಕು, ಒಡವೆ, ಫೋನು ಕಳ್ಳತನದ ಬಗ್ಗೆ ಕೇಳುತ್ತಿದ್ದ ಸಿಟಿ ಮಂದಿಗೆ ಹಾಲಿನ ಕಳ್ಳರು ನಿದ್ದೆಗೆಡಿಸಿದ್ದಾರೆ. ಖತರ್ನಾಕ್ ಕಳ್ಳರ ಕಣ್ಣು ಇದೀಗ ಹಾಲಿನ ಪ್ಯಾಕೆಟ್‌ಗಳ ಮೇಲೂ ಬಿದ್ದಿದೆ. ಕ್ಷಣಾರ್ಧದಲ್ಲೇ ಹಾಲಿನ ಪ್ಯಾಕೆಟ್‌ಗಳನ್ನು ಎಗರಿಸುವ ವಿಚಾರ ತಿಳಿದು ಗಾಬರಿಯಾಗಿದ್ದಾರೆ.
ಹೌದು, ಹಾಲಿನ ಬೂತ್‌ಗಳನ್ನೇ ಕಳ್ಳರು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಹಾಲಿನ ಬೂತ್‌ಗಳಿಗೆ ಮಧ್ಯರಾತ್ರಿ ಸಮಯದಲ್ಲಿ ಹಾಲಿನ ಪ್ಯಾಕೆಟ್‌ಗಳು ಪೂರೈಕೆಯಾಗುತ್ತವೆ. ಈ ವೇಳೆ ಜನಸಂಚಾರ ಕೂಡ ಇರುವುದಿಲ್ಲ. ಇನ್ನು ಈ ವೇಳೆ ಯಾರೂ ಬರೋದಿಲ್ಲ ಎಂದು ಬೂತ್ ಮಾಲೀಕರು ಕೂಡ ಹೆಚ್ಚಾಗಿ ಆ ಸಮಯದಲ್ಲಿ ಇರೋದಿಲ್ಲ.

ಇದನ್ನು ಕಂಡುಕೊಂಡ ಖದೀಮರು ಹಾಲಿನ ಬೂತ್ ಬಳಿ ಬರುವ ಹಾಲಿನ ಪ್ಯಾಕೆಟ್‌ಗಳ ಬುಟ್ಟಿಗಳನ್ನು ಎಗರಿಸಿಕೊಂಡು ಹೋಗಿದ್ದಾರೆ. ಈ ವಿಚಾರ ತಿಳಿದು ಹಾಲಿನ ಬೂತ್ ಮಾಲೀಕರು ಆಘಾತಕ್ಕೆ ಒಳಗಾಗಿದ್ದಾರೆ. ಇದು ಅನೇಕ ಬೂತ್‌ಗಳ ಬಳಿ ಇದೇ ರೀತಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳತನದ ವಿಡಿಯೋವೊಂದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದು ವೈರಲ್ ಆಗಿದೆ. ಕಳ್ಳರು ಹಾಲಿನ ಬೂತ್‌ಗಳನ್ನು ಗುರಿಯಾಗಿಸಿಕೊಂಡು ರಾತ್ರಿಯ ಕತ್ತಲೆಯ ಸಮಯದಲ್ಲಿ ಹಾಲನ್ನು ಕದಿಯುತ್ತಿದ್ದಾರೆ. ಇದರಿಂದ ಮಾಲೀಕರು ನಷ್ಟ ಎದುರಿಸುವಂತಾಗಿದ್ದು, ಹಾಲನ್ನು ಕೂಡ ಕಾಯಬೇಕಾದ ಸ್ಥಿತಿ ಬಂತಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ.

ದಿನನಿತ್ಯದ ಅತ್ಯಗತ್ಯವಾಗಿರುವ ಹಾಲನ್ನು ಬೂತ್‌ಗಳ ಬಳಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನೇ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ. ಇದರಿಂದ ಬೂತ್‌ನವರಿಗೆ ನಷ್ಟ ಎದುರಾದರೆ, ತಮ್ಮ ಅಗತ್ಯ ಡೈರಿ ಉತ್ಪನ್ನಗಳನ್ನು ಕಳೆದುಕೊಳ್ಳಬೇಕಾಗಿದೆ.
ಕಳ್ಳತನ ವರದಿಯಾದ ಬೆನ್ನಲ್ಲೇ ಬೂತ್ ಮಾಲೀಕರು ತಮ್ಮ ಮಳಿಗೆಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸೇರಿದಂತೆ ಭದ್ರತಾ ಕ್ರಮಗಳಿಗೆ ಮುಂದಾಗಿದ್ದಾರೆ. ಅಲ್ಲದೆ ಸ್ಟಾಕ್ ಕೂಡ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಹಾಲಿನ ಬೂತ್‌ವೊಂದರ ಬಳಿ ಕ್ರೇಟ್‌ಗಳಲ್ಲಿ ಇಟ್ಟಿದ್ದ ಹಾಲಿನ ಪ್ಯಾಕೆಟ್‌ಗಳನ್ನು ಬೈಕ್‌ನಲ್ಲಿ ಬಂದಿದ್ದ ಮೂವರು ಕಳ್ಳರು ಎಗರಿಸಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನ ಸುಬ್ರಹಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸಿಸಿಟಿವಿ ಆಧರಿಸಿ ಕಳ್ಳರ ಬೆನ್ನುಹತ್ತಿದ್ದಾರೆ.
ಕನಕಪುರ ರಸ್ತೆ ಕಲ್ಲಸಂದ್ರದ ಬಳಿಯ ಹಾಲಿನ ಬೂತ್ ಬಳಿ ಎಂದಿನಂತೆ ಹಾಲಿನ ಗಾಡಿ ಬಂದು ಮುಂಜಾನೆ ವೇಳೆ ಹಾಲಿನ ಪ್ಯಾಕೆಟ್‌ಗಳನ್ನು ಇಳಿಸಿ ಹೋಗಿತ್ತು. ಇದನ್ನೇ ಕಾಯುತ್ತಿದ್ದ ಕಳ್ಳರು ಕ್ರೇಟ್‌ಗಳಲ್ಲಿದ್ದ ಹಾಲನ್ನು ಕ್ಷಣಮಾತ್ರದಲ್ಲಿ ಕದ್ದೊಯ್ದಿದ್ದಾರೆ. ಈ ವಿಚಾರ ತಿಳಿದು ಸುಬ್ರಮಣ್ಯಪುರ ಪೊಲೀಸರು ಕಲ್ಲಸಂದ್ರ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.












Click it and Unblock the Notifications