ಬೆಂಗಳೂರಿನ ಭಾರೀ ಮಳೆಗೆ ಮುಳುಗುವ ಅಪಾಯದಲ್ಲಿರುವ ಪ್ರದೇಶಗಳು ಯಾವವು!
Recommended Video

ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ರಾತ್ರಿ ಹಲವು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿದ್ದಾರೆ. ಧಾರಾಕಾರ ಮಳೆಯಿಂದ ಹಲವು ಬಡಾವಣೆಗಳು ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ.
ಇನ್ನೂ ಒಂದು ವಾರಗಳ ಕಾಲ ರಾಜಧಾನಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮಳೆಯಿಂದ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಸಜ್ಜಾಗಬೇಕು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್ ಎನ್ಡಿಎಂಸಿ) ಹೇಳಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ರಾತ್ರಿ ಸುರಿದಂಥದೇ ಭಾರೀ ಮಳೆ ಮುಂದುವರಿದರೆ ಉದ್ಯಾನನಗರಿಯ ಹಲವು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ಕೆಎಸ್ಎನ್ಡಿಎಂಸಿ ಎಚ್ಚರಿಕೆ ನೀಡಿದ್ದು, ಫ್ಲಡ್ ಪಾಯಿಂಟ್ ಗಳನ್ನು ಈ ಕೆಳಗಿನ ಪ್ರದೇಶಗಳಲ್ಲಿ ಗುರುತಿಸಿದೆ.

ಜೆಪಿ ಪಾರ್ಕ್ ಮತ್ತಿಕೆರೆ
ಲಗ್ಗೆರೆ, ಯಶವಂತಪುರ ರೈಲ್ವೇ ಸ್ಟೇಶನ್ ಪ್ರದೇಶ, ಜಯಪ್ರಕಾಶ್ ನಾರಾಯಣ್ ಪಾರ್ಕ್(ಜೆಪಿ ಪಾರ್ಕ್ ಮತ್ತಿಕೆರೆ), ಎನ್ ಆರ್ ಗಾರ್ಡನ್, ಆರ್ ಆರ್ ನಗರ ಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಮುನಿರೆಡ್ಡಿ ಪಾಳ್ಯ
ಎಚ್ ಎಸ್ ಆರ್ ಲೇಔಟ್ ನ ನ್ಯಾಶ್ನಲ್ ಗೇಮ್ಸ್ ವಿಲೇಜ್, ಬೊಮ್ಮನಹಳ್ಳಿ ವಲಯದ ಮುನಿರೆಡ್ಡಿ ಪಾಳ್ಯ, ಮಾರುತಿ ನಗರ, ಬಿಸ್ಮಿಲ್ಲಾ ನಗರ, ಮಾಗಡಿ ಪೊಲೀಸ್ ಸ್ಟೇಶನ್ ಪ್ರದೇಶ ಸಹ ಜಲಾವೃತವಾಗಲಿವೆ.

ರುದ್ರಪ್ಪ ಗಾರ್ಡನ್
ಅಂತೆಯೇ ರುದ್ರಪ್ಪ ಗಾರ್ಡನ್, ದೊಮ್ಮಲೂರು, ದಾಸರಹಳ್ಳಿ ವಲಯದ ಕೆಲವು ಪ್ರದೇಶಗಳು ಸಹ ಜಲಾವೃತವಾಗುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಇಲ್ಲಿನ ಅಂಜನಾಪುರದಲ್ಲಿ 20 ಮಿ ಮೀ. ನಷ್ಟು ಮಳೆಯಾಗಿತ್ತು. ಹುಲಿಮಾವು ಕೆರೆ ಸೇರಿದಂತೆ ದಕ್ಷಿಣ ಬೆಂಗಳೂರು ಭಾಗದ ಹಲವೆಡೆ ಧಾರಾಕಾರ ಮಳೆಯಾಗಿತ್ತು.

ಒಂದು ವಾರ ಮಳೆ?
ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಬೆಂಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಮಳೆಯಾಗುತ್ತಿದೆ.












Click it and Unblock the Notifications