ಬೆಂಗಳೂರು ಹಸಿರು ಹೊದಿಕೆ ಹೆಚ್ಚಿಸಲು ಚಿಂತನೆ: ಅರ್ಬನ್ ಫಾರೆಸ್ಟ್ ನಿರ್ಮಿಸಬಹುದು: ಎಂಬಿ ಪಾಟೀಲ
ಬೆಂಗಳೂರು, ಅಕ್ಟೋಬರ್ 18: ನಗರೀಕರಣ, ಕೈಗಾರಿಕೀಕರಣಗಳಿಂದಾಗಿ ಬೆಂಗಳೂರಿನ ಹಸಿರು ಹೊದಿಕೆ ಪ್ರಮಾಣ ಕುಸಿಯುತ್ತಿದೆ. ಉದ್ಯಾನ ನಗರಿ ಎಂಬ ಹೆಗ್ಗಳಿಕೆ ಮಸುಕಾಗಿದೆ. ಆದರೆ, ಇಲ್ಲಿ ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ನಗರ ಅರಣ್ಯ (ಅರ್ಬನ್ ಫಾರೆಸ್ಟ್) ಬೆಳೆಸಲು ಯಥೇಚ್ಛ ಅವಕಾಶಗಳಿವೆ. ಈ ಸಂಬಂಧ 'ನಮ್ಮ ಬೆಂಗಳೂರು, ಹಸಿರು ಬೆಂಗಳೂರು' ಆಗಬೇಕು ಎಂಬುದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಆಶಯವಾಗಿದೆ.
ಬ್ರಿಗೇಡ್ ಫೌಂಡೇಷನ್ ನಗರದ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಇರುವ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್-2ರಲ್ಲಿ ಏರ್ಪಡಿಸಿದ್ದ, ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ʻಫ್ರಮ್ ಸ್ಯಾಪ್ಲಿಂಗ್ಸ್ ಟು ಎ ಸ್ಯಾಂಕ್ಚುರಿʼ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬೆಂಗಳೂರಿನ ಹಸಿರು ಹೆಚ್ಚಿಸುವ ಬಗ್ಗೆ ಮಾತನಾಡಿದರು.

ಸದ್ಯ ನಾವೆಲ್ಲರು ಕೃಷಿ, ಕೈಗಾರಿಕೆ ಮತ್ತು ಆಹಾರ ಈ ಮೂರೂ ವಲಯಗಳ ನಡುವೆ ಸಮತೋಲನ ಸಾಧಿಸಬೇಕಾಗಿದೆ. ಅವೆಲ್ಲವು ನಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗೆ ಮೂಲಭೂತ ಅಗತ್ಯಗಳಾಗಿವೆ. ಇವುಗಳಲ್ಲಿ ಯಾವುದನ್ನೂ ನಾವು ನಿಷೇಧಿಸುವುದು ಸಾಧ್ಯವಿಲ್ಲ. ಆದ್ದರಿಂದ ಮಿಯಾವಾಕಿ ಅರಣ್ಯದ ಮಾದರಿಯನ್ನು ನಾವು ಅಳವಡಿಸಿಕೊಂಡು, ಪರಿಸರವನ್ನು ಬೆಳೆಸುವ ಕೆಲಸವನ್ನೂ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ತವರು ಜಿಲ್ಲೆ ವಿಜಯಪುರದಲ್ಲಿ ಹಿಂದೆ ಮರಗಳಿಲ್ಲದೆ ಭಣಗುಡುತ್ತಿತ್ತು. ಹತ್ತು ವರ್ಷಗಳ ಹಿಂದೆ ಅಲ್ಲಿ ಕೇವಲ ಶೇಕಡ 0.17ರಷ್ಟು ಮಾತ್ರ ಅರಣ್ಯವಿತ್ತು. ಈಗ ಅಲ್ಲಿ ಸ್ವಪ್ರಯತ್ನದಿಂದ ಒಂದೂವರೆ ಕೋಟಿ ಗಿಡಗಳನ್ನು ನೆಡಲಾಗಿದೆ. ಅರಣ್ಯ ಪ್ರಮಾಣ ಈಗ ಶೇ.2ರಷ್ಟಾಗಿದೆ. ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಮಮದಾಪುರದಲ್ಲಿ ಸೌರವಿದ್ಯುತ್ ಮತ್ತು ಹನಿ ನೀರಾವರಿ ಮೂಲಕ ಅರಣ್ಯವನ್ನು ಸೃಷ್ಟಿಸಲಾಗಿದೆ.
ಇದರಿಂದಾಗಿ ಗಿಡಮರಗಳಿಂದ ತುಂಬಿರುವ ಎರಡು ಗುಡ್ಡಗಳೇ ಅಲ್ಲಿ ನಿರ್ಮಾಣವಾಗಿವೆ. ಈ ಮಾದರಿಯನ್ನು ಸ್ವತಃ ಅರಣ್ಯ ಇಲಾಖೆ ಅಳವಡಿಸಿಕೊಂಡಿದೆ. ವರ್ಷಕ್ಕೆ ಐದು ಕೋಟಿ ಗಿಡ ನೆಡುವ ಗುರಿ ಹಾಕಿಕೊಂಡಿದೆ. ಇದನ್ನು ನೋಡಲು ಬೇರೆಬೇರೆ ರಾಜ್ಯಗಳು ಮತ್ತು ವಿದೇಶಗಳಿಂದಲೂ ಆಸಕ್ತರು ಬರುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ಇದರ ಬಗ್ಗೆ ಸವಿವರವಾಗಿ ವರದಿ ಪ್ರಕಟಿಸಿದೆ ಎಂದು ಅವರು ತಿಳಿಸಿದರು.
ಕೃಷಿಯು ಇರಲಿ, ಕೈಗಾರಿಕೆಯು ಬರಲಿ
ನಮಗೆ ಕೃಷಿಯೂ ಬೇಕು, ಕೈಗಾರಿಕೆಯೂ ಬೇಕು. ಇತ್ತೀಚೆಗೆ ಲಂಡನ್‌ನಲ್ಲಿ ಕ್ಯೂ ಗಾರ್ಡನ್‌ಗೆ ಭೇಟಿ ಕೊಟ್ಟಿದ್ದಾಗ ಅಲ್ಲಿಯ ಮಾದರಿಗಳನ್ನು ವೀಕ್ಷಿಸಿದೆ. ಅದು ನಮ್ಮ ಲಾಲ್‌ಬಾಗ್‌ನಷ್ಟೇ ಇದ್ದರೂ, ಅತ್ಯುತ್ತಮ ವಿಧಾನಗಳನ್ನು ಅಲ್ಲಿ ಅಳವಡಿಸಿಕೊಂಡಿದ್ದಾರೆ. ಇದನ್ನೆಲ್ಲ ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವಿವರಿಸಿದ್ದೇನೆ. ಕ್ಯೂ ಗಾರ್ಡನ್‌ನಲ್ಲಿರುವ ಮಾದರಿಗಳನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬಹುದು. ಬೇರೆ ಯಾರೋ ಬಂದು ನಮ್ಮ ಪರಿಸರವನ್ನು ಸಂರಕ್ಷಿಸುತ್ತಾರೆ ಎಂದುಕೊಳ್ಳುವುದೇ ನಿಜವಾದ ಸಮಸ್ಯೆ ಎಂಬ ಪರಿಸರ ಚಿಂತ ರಾಬರ್ಟ್ ಸ್ವಾನ್‌ನ ಮಾತು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ತಿಳಿಸಿದರು.
ಬ್ರಿಗೇಡ್ ಸಮೂಹದವರು ವೈಟ್‌ಫೀಲ್ಡ್‌ನಲ್ಲಿ ಮಿಯಾವಾಕಿ ಅರಣ್ಯವನ್ನು ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ. ನಾನು ಒಂದು ದಿನ ಪರಿಸರಾಸಕ್ತನಾಗಿ ಭೇಟಿ ಕೊಡಲಿದ್ದೇನೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿ ಯೋಚಿಸುವುದಿಲ್ಲ. ವಿಜಯಪುರ ಜಿಲ್ಲೆಯೊಂದರಲ್ಲೇ ಒಂದೂವರೆ ಕೋಟಿ ಗಿಡಗಳನ್ನು ನೆಟ್ಟಿರುವಾಗ ರಾಜ್ಯದಲ್ಲಿ ಎಷ್ಟು ಕೋಟಿ ಗಿಡಗಳನ್ನು ನೆಡಬಹುದು ಎನ್ನುವುದು ತಿಳಿಯುತ್ತದೆ. ನಮ್ಮ ಜಿಲ್ಲೆಯಲ್ಲಿ ರೈತರಿಗೆ ಅವರು ಬಯಸುವಂತಹ ಗಿಡಗಳನ್ನೇ ಕೊಡಲಾಗುತ್ತಿದೆ. ಇದರ ಅಂಗವಾಗಿ ಪ್ರತೀವರ್ಷವೂ ವೃಕ್ಷಥಾನ್ ನಡೆಸುತ್ತಿದ್ದು, ಅದರಲ್ಲಿ ಹದಿನೈದು ಸಾವಿರ ಮಂದಿ ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದು ಪಾಟೀಲ ತಮ್ಮ ಅನುಭವ ಹಂಚಿಕೊಂಡರು.
ಪಾಟೀಲರ ಬಗ್ಗೆ ಮುನಿಯಪ್ಪ ಮೆಚ್ಚುಗೆ
ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ, ʻಮನಸ್ಸು ಮಾಡಿದರೆ ಎಂತಹ ಅದ್ಭುತವನ್ನು ಸಾಧಿಸಬಹುದು ಎನ್ನುವುದನ್ನು ಸಚಿವ ಎಂ ಬಿ ಪಾಟೀಲರು ವಿಜಯಪುರದಲ್ಲಿ ಮಾಡಿ ತೋರಿಸುತ್ತಿದ್ದಾರೆ. ಇವರಿಂದಾಗಿ, ವಿಜಯಪುರ ಈಗ ಹಸುರೀಕರಣ ಮತ್ತು ಜಲ ಸಂರಕ್ಷಣೆಯ ನಾಡಾಗಿದೆ. ಈ ಮೂಲಕ ಅವರು ತಮ್ಮನ್ನು ಚುನಾಯಿಸಿದ ಕ್ಷೇತ್ರದ ಋಣವನ್ನು ಶಾಶ್ವತವಾಗಿ ತೀರಿಸಿದ್ದಾರೆ.
ಎಂ.ಬಿ ಪಾಟೀಲ ಅವರು ಕೈಗಾರಿಕಾ ಸಚಿವರಾಗಿ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಮೂರು ಲಕ್ಷ ಕೋಟಿ ರೂ. ಬಂಡವಾಳ ತಂದಿದ್ದಾರೆ. ಇಂತಹ ಕೆಲಸ ಇಡೀ ಭಾರತದಲ್ಲೇ ಎಲ್ಲೂ ಆಗುತ್ತಿಲ್ಲ. ಅವರಿಗೆ ನಿಜಕ್ಕೂ ಉಜ್ವಲ ಭವಿಷ್ಯವಿದೆ. ಪರಿಸರ ಸಂರಕ್ಷಣೆಯ ಬಗ್ಗೆಯೂ ಅವರಿಗೆ ಸ್ಪಷ್ಟವಾದ ಚಿಂತನೆ ಇದೆʼ ಎಂದು ಕೊಂಡಾಡಿದರು.












Click it and Unblock the Notifications