• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ವಿದ್ಯುತ್ ಕಡಿತ ಇಲ್ಲ; ಕಲ್ಲಿದ್ದಲು ಪೂರೈಕೆಗಾಗಿ ಕೇಂದ್ರಕ್ಕೆ ಬೇಡಿಕೆ: ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ರಾಜ್ಯದ ವಿದ್ಯುತ್ ಉತ್ಪಾದನೆ, ಪೂರೈಕೆ ಪರಿಸ್ಥಿತಿ ಹಾಗೂ ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

"ವಿದ್ಯುತ್​ ಉತ್ಪಾದನೆ ಹಾಗೂ ಮಳೆಯಿಂದಾದ ಪರಿಣಾಮಗಳ ಕುರಿತು ಸಭೆ ನಡೆಸಿದ್ದೇನೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರ ಭೇಟಿ ಬಳಿಕ ಹೆಚ್ಚುವರಿ 2 ರೇಕ್ ಕಲ್ಲಿದ್ದಲು ಬರುತ್ತಿದೆ. ಇನ್ನೂ ಎರಡು ರೇಕ್ ಕಲ್ಲಿದ್ದಲು​ ಕೊಡುವುದಾಗಿ ಹೇಳಿದ್ದಾರೆ. ನಾವು ಹಣ ಪಾವತಿಸಿದ ತಕ್ಷಣ ಪೂರೈಕೆ ಪ್ರಕ್ರಿಯೆ ನಡೆಯುತ್ತದೆ. ರಾಜ್ಯದಲ್ಲಿ ವಿದ್ಯುತ್​ ಸ್ಥಗಿತ ಆಗದಂತೆ ನೋಡಿಕೊಳ್ಳುತ್ತೇವೆ," ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

"ರಾಜ್ಯದಲ್ಲಿ ಪ್ರಸ್ತುತ 98,863 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ತೆಲಂಗಾಣದ ಸಿಂಗರೇಣಿಯಿಂದ ಕಲ್ಲಿದ್ದಲು ತರಿಸುವ ಬಗ್ಗೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು."


"ರಾಜ್ಯದಲ್ಲಿ ಯಾವುದೇ ರೀತಿಯ ಪವರ್​ ಕಟ್ ಇಲ್ಲ. ಮುಂದೆಯೂ ರಾಜ್ಯದಲ್ಲಿ ಪವರ್​ ಕಟ್​ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಜೊತೆಗೂ ಮಾತಾಡುತ್ತಿದ್ದೇನೆ. 10-12 ರೇಕ್ ಕಲ್ಲಿದ್ದಲು​ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಎಸ್ಕಾಂ ಆರ್ಥಿಕ ಸಫಲತೆ ಕಾಣಬೇಕು," ಎಂದು ಅವರು ಹೇಳಿದ್ದಾರೆ.

"ಸಿದ್ದರಾಮಯ್ಯ ಖಾಸಗೀಕರಣದ ಭ್ರಮೆಯಲ್ಲೇ ಇರ್ತಾರೆ. ಸರ್ಕಾರ ಫೇಲ್ ಆಗಿಲ್ಲ, ಕಲ್ಲಿದ್ದಲು ಕೊರತೆ ಆಗುವುದಕ್ಕೆ ಬಿಡಲ್ಲ. ಈ ಬಾರಿ ಮಳೆ ಹೆಚ್ಚು ಆಗಿದ್ದರಿಂದ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಒಡಿಶಾದಲ್ಲಿ ಮಳೆ ಹೆಚ್ಚಾಗಿದ್ದರಿಂದ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಒಡಿಶಾದಿಂದ ಕಲ್ಲಿದ್ದಲು ಬರಲು ನಿಧಾನವಾಗುತ್ತಿದೆ. ಸಿದ್ದರಾಮಯ್ಯರ ಆರೋಪ ಆಧಾರ ರಹಿತವಾದದ್ದು," ಎಂದು ಕೃತಕ ಅಭಾವ ಸೃಷ್ಟಿಸಿ ಖಾಸಗೀಕರಣ ಮಾಡಬಾರದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.

"ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂದೆ ಸರ್ಕಾರ ಕೊಟ್ಟಿರುವ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಪ್ರಸ್ತಾವನೆ ನಮ್ಮ ಮುಂದಿದ್ದು, ಅದರ ಬಗ್ಗೆಯೂ ಕ್ರಮ ಜರುಗಿಸಲಾಗುವುದು. ಎಸ್ಕಾಂ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಿ, ಬಂಡವಾಳ ಹೂಡಿಕೆ ಪ್ರತ್ಯೇಕವಾಗಿ ಮಾಡಬೇಕು. ಹಣ ಪಾವತಿ ಬಾಕಿ ಉಳಿಸಿಕೊಳ್ಳಬಾರದು," ಎಂದು ಸೂಚಿಸಿರುವುದಾಗಿ ತಿಳಿಸಿದರು.

There Is No Power Cut In The State; Demand To Central Govt For Coal Supply Says CM Basavaraj Bommai

ಮಳೆಯಿಂದಾಗಿ 21 ಜನ ಸಾವನ್ನಪ್ಪಿದ್ದಾರೆ; ಪರಿಹಾರ ಭರವಸೆ
"ಅಕ್ಟೋಬರ್ 1ರಿಂದ ಈವರೆಗೂ ಮಳೆಯ ಕಾರಣದಿಂದ 21 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಮಳೆಯಿಂದ ಮನೆಗಳಿಗೆ ಹಾನಿಯಾದವರಿಗೂ ಪರಿಹಾರ ಕೊಡುತ್ತೇವೆ. ಬೆಳೆ ಹಾನಿಯಾದ ರೈತರಿಗೂ ಪರಿಹಾರ ನೀಡಲು ಸೂಚನೆ ಕೊಡಲಾಗಿದೆ," ಎಂದರು.

"ಅಕ್ಟೊಬರ್‌ನಲ್ಲಿ ನಿರಂತರವಾಗಿ ಮಳೆಯಾಗಿದ್ದು, 2- 3 ಜಿಲ್ಲೆಗಳನ್ನು ಬಿಟ್ಟರೆ ಶೇ.30ರಿಂದ 50ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್‌ನಿಂದ ಇಲ್ಲಿಯವರೆಗೂ 4,71,000 ಹೆಕ್ಟೇರ್ ಬೆಲೆ ಹಾನಿಯಾಗಿದ್ದು, 105 ಕೋಟಿ ರೂ.ಗಳ ಪರಿಹಾರವನ್ನು 1.17 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 738 ಕೋಟಿ ರೂ.ಗಳು ಲಭ್ಯವಿದೆ," ಎಂದು ಸಿಎಂ ಮಾಹಿತಿ ನೀಡಿದರು.

"ಅಕ್ಟೊಬರ್ 1ರಿಂದ 12ರೊಳಗೆ ಮರಣ ಹೊಂದಿದ 21 ಜನರಿಗೆ ಕೂಡಲೇ ಪರಿಹಾರ ನೀಡಲು ಸೂಚನೆ ನೀಡಲಾಗಿದ್ದು, ಹಾಗೂ ಮಳೆಯಿಂದ ಹಾನಿಗೊಳಗಾದವರಿಗೆ 10,000 ರೂ.ಗಳ ಎಕ್ಸ್ ಗ್ರೇಶಿಯಾ ಮೊತ್ತವನ್ನು ನೀಡಲು ಸೂಚಿಸಲಾಗಿದೆ. ಭಾಗಶಃ ಹಾನಿಗೊಳಗಾದ 2,500 ಮನೆಗಳಿಗೆ ಹಾಗೂ ಬೆಳೆ ಹಾನಿಗೂ ಕಳೆದ ವರ್ಷದಂತೆ ಎನ್‌ಡಿಆರ್‌ಎಫ್ ನಿಯಮಾವಳಿಗಳಂತೆ ಪರಿಹಾರ ನೀಡಲು ಸೂಚಿಸಲಾಗಿದೆ," ಎಂದು ಹೇಳಿದರು.

   ಬೆಂಗಳೂರು Airportಗೆ ಹೋಗಬೇಕು ಅಂದ್ರೆ ನೀವು Tractor ಹತ್ತಬೇಕು | Oneindia Kannada

   "2300 ವಿದ್ಯುತ್ ಕಂಬಗಳು ಬಿದ್ದಿದ್ದು, ರಸ್ತೆ, ಸೇತುವೆ, ಶಾಲಾ ಕಟ್ಟಡಗಳ ಹಾನಿಯನ್ನು ಮೌಲ್ಯಮಾಪನ ಮಾಡಿ ಪರಿಹಾರ ನೀಡಲು ಹಣ ಬಿಡುಗಡೆ ಸೂಚಿಸಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ಬಳಿಕ ತಿಳಿಸಿದರು.

   ಗೃಹ ಕಚೇರಿ ಕೃಷ್ಣಾದಲ್ಲಿ ಎಸ್​ಡಿಆರ್​ಎಫ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಮಳೆಯಿಂದಾದ ಹಾನಿ, ಬೆಳೆ ಹಾನಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಕೆ. ಗೋಪಾಲಯ್ಯ, ಭೈರತಿ ಬಸವರಾಜ್, ಮುನಿರತ್ನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪ್ರಸಾದ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಭಾಗಿಯಾಗಿದ್ದರು.

   English summary
   Chief Minister Basavaraj Bommai has meeting on Tuesday to discuss the state's power generation, supply situation and flooding in the state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X