Bengaluru Crime: ಕೋರಮಂಗಲದ ಒಂದೇ ದಿನ 9 ಮನೆಗೆ ಕನ್ನ ಹಾಕಿದ ಖದೀಮರು
ಬೆಂಗಳೂರು, ಮೇ 09: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡೂ ಹಂತದ ಮತದಾನಗಳು ಮುಕ್ತಾಯವಾಗಿದೆ. ಚುನಾವಣಾ ಮತದಾನ ಹಿನ್ನೆಲೆಯಲ್ಲಿ ಬಹುತೇಕ ಪೊಲೀಸರು ಚುನಾವಣಾ ಕರ್ತವ್ಯದಲ್ಲಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಇದೇ ಸಮಯದಲ್ಲಿ ಸಾಲು ಸಾಲು ಮನೆಗೆ ಕನ್ನ ಹಾಕಿದ್ದಾರೆ.
ಕೋರಮಂಗಲದಲ್ಲಿ ಮೇ 4ರಂದು ಒಂದೇ ರಾತ್ರಿಯಲ್ಲಿ ಒಂಬತ್ತು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಇಲ್ಲಿನ ನಿವಾಸಿಗಳು ತಮ್ಮ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ರಾತ್ರಿ ಗಸ್ತು ಕಡಿಮೆಯಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಒಂದೇ ದಿನ ಒಂಬತ್ತು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ.

ಈ ಬಗ್ಗೆ ಕೋರಮಂಗಲ 1ನೇ ಬ್ಲಾಕ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪದ್ಮಶ್ರೀ ಬಲರಾಮ್ ಮಾತನಾಡಿ, 'ಬೆಳಗಿನ ಜಾವ 1 ರಿಂದ 4.30 ರ ನಡುವೆ ಇಬ್ಬರು ವ್ಯಕ್ತಿಗಳು ಮನೆಗಳಿಗೆ ಕಳ್ಳತನವಾಗಿರುವ ಸ್ಥಳದ ಸುತ್ತ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ. ಅವರಲ್ಲಿ ಒಬ್ಬರು ಮನೆಯ ಕಾಂಪೌಂಡ್ ಗೋಡೆಯನ್ನು ಜಿಗಿಯುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಇನ್ನೊಬ್ಬರು ಹೊರಗೆ ಕಾವಲು ಕಾಯುತ್ತಿರುವುದು ರೆಕಾರ್ಡ್ ಆಗಿದೆ ಎಂದರು.
ಕಾಂಪೌಂಡ್ ಗೋಡೆ ಹಾರಿ ನಂತರ ಕಳ್ಳ ಶೂಗಳನ್ನು ಹುಡುಕಿ ಕದ್ದು ಪರಾರಿಯಾಗಿದ್ದಾನೆ. ಪ್ರತಿ ಮನೆಯಿಂದ ಐದರಿಂದ ಆರು ಜೋಡಿ ದುಬಾರಿ ಬೆಲೆಯ ಸ್ಪೋರ್ಟ್ಸ್ ಶೂಗಳು ಕಳ್ಳತನವಾಗಿವೆ. ಅಮೆರಿಕದಿಂದ ಆರ್ಡರ್ ಮಾಡಲಾಗಿದ್ದ 30,000 ರೂಪಾಯಿ ಬೆಲೆ ಬಾಳುವ ಚಪ್ಪಲಿಯೂ ಕಳ್ಳತನವಾಗಿವೆ ಎಂದು ತಿಳಿಸಿದೆ.
ಮತ್ತೊಂದು ಮನೆಯೊಂದರಲ್ಲಿದ್ದ ಎರಡು ದ್ವಿಚಕ್ರ ವಾಹನಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಈ ಸರಣಿ ಕಳ್ಳತನದ ಬಗ್ಗೆ ನಾವು ಪೊಲೀಸರಿಗೆ ಮತ್ತು ಸ್ಥಳೀಯ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ದೂರು ನೀಡಿದ್ದೇವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚುವರಿ 25 ಸಿಸಿಟಿವಿ ಕ್ಯಾಮೆರಾಗಳನ್ನು ವ್ಯವಸ್ಥೆಗೊಳಿಸಿ, ಪೊಲೀಸ್ ಗಸ್ತು ಹೆಚ್ಚಿಸುವ ಭರವಸೆ ನೀಡಿದ್ದಾರೆ ಎಂದು ಬಲರಾಮ್ ಹೇಳಿದರು.
ಇನ್ನು ಈ ಪ್ರಕರಣದ ಬಗ್ಗೆ ಕೋರಮಂಗಲ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿದೆ. ಆದರೆ ಕೆಲವು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದ ಕಾರಣ ಈ ಘಟನೆ ನಡೆದಿದೆ. ಸದ್ಯ ರಾಜ್ಯದಲ್ಲಿ ಚುನಾವಣೆ ಮುಗಿದಿದ್ದು, ಈ ಪ್ರದೇಶಗಳಲ್ಲಿ ರಾತ್ರಿ ಗಸ್ತು ತಿರುಗಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications