ಜೂಜಿಗಾಗಿ ಕಳ್ಳತನಕ್ಕಿಳಿದವನನ್ನ ಬಂಧಿಸಿದ ಬೆಂಗ್ಳೂರು ಪೊಲೀಸರು
ಬೆಂಗಳೂರು, ಫೆಬ್ರವರಿ, 08: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗಂತಾ ಪೊಲೀಸರೇನು ಸಮ್ನೆ ಕುಳಿತುಕೊಂಡಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಹೆಡೆಮುರಿ ಕಟ್ಟುವಂತಹ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಜೂಜಿಗಾಗಿ ಕಳ್ಳತನಕ್ಕೆ ಇಳಿದವನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೀದರ್‌ನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಸರಗಳವು ಮಾಡುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಕಿರಣ್ ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕಿರಣ್ ಆನ್‌ಲೈನ್ ರಮ್ಮಿ ಜೂಜಾಟಕ್ಕೆ ದಾಸನಾಗಿದ್ದ. ರಮ್ಮಿ ಆಟ ಆಡಲು ಹಣ ಇಲ್ಲದಿದ್ದದ್ದಕ್ಕೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಬೀದರ್‌ನಿಂದ ಬೆಂಗಳೂರಿಗೆ ಬಂದವನಿಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಕಳೆದ ಜನವರಿ 26ರಂದು ಜಯನಗರದ ಶಾಕಾಂಬರಿನಗರದಲ್ಲಿ ವೃದ್ದೆಯ ಸರ ಕಸಿದು ಪರಾರಿ ಆಗಿದ್ದ.
ಸರ ಎಗರಿಸುತ್ತಿದ್ದಂತೆ ಬೆಂಗಳೂರಿನಿಂದ ರೈಲಿನ ಮೂಲಕ ಬೀದರ್‌ಗೆ ತೆರಳಿದ್ದ. ಕಿರಣ್ ಕಳ್ಳತನದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ ಕದ್ದು ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಿರಣ್ ಪರಾರಿಯಾಗಿದ್ದ. ಬೆಂಗಳೂರಿನಲ್ಲಿ ಕದ್ದ ಸರವನ್ನು ಬೀದರ್‌ನಲ್ಲಿ ಅಡವಿಟ್ಟಿದ್ದ. ಇದರಿಂದ ಬಂದ ಹಣವನ್ನು ಕಿರಣ್ ಆನ್ ಲೈನ್ ರಮ್ಮಿ ಜೂಜಾಡಿದ್ದು, ಸದ್ಯ ಈತನನ್ನು ಜಯನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಣ ದೋಚಿದ ಕಳ್ಳರು: ಬೀದರ್‌ನಲ್ಲಿ ಇತ್ತೀಚೆಗಷ್ಟೇ ಕಿಡಿಗೇಡಿಗಳು ಎಸ್‌ಬಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ಸಿಬ್ಬಂದಿ ಮೇಲೆ ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿದ್ದರು. ಅಲ್ಲದೆ, ಈ ವೇಳೆ 93,00,000 ರೂಪಾಯಿ ಹಣ ದೋಚಿಕೊಂಡು ಪರಾರೊಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಜನವರಿ 17ರಂದು ಇಂತಹದ್ದೇ ಘಟನೆಯೊಂದು ಮಂಗಳೂರಿನಲ್ಲೂ ನಡೆದಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದೆ. ಹಾಡಹಗಲೇ 5 ಮಂದಿ ಬ್ಯಾಂಕ್‌ಗೆ ನುಗ್ಗಿದ್ದು, ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನ ದೋಚಿಕೊಂಡು ಪರಾರಿಯಾಗಿದ್ದರು.
ಈ 5 ಮಂದಿ ದರೋಡೆಕೋರರು ಫಿಯೇಟ್ ಕಾರಿನಲ್ಲಿ ಬಂದಿದ್ದು, ಅಲ್ಲಿನ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಿದ್ದಾರೆ. ಬಳಿಕ ಈ ತಂಡ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಪರಿಶೀಲನೆ ನಡೆಸಿದ್ದು, ಇದೀಗ ದರೋಡೆಕೋರರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬೀದರ್‌ನಲ್ಲಿ ಗುರುವಾರ (ಜನವರಿ 16) ಬೆಳಗ್ಗೆ ಎಟಿಎಂಗೆ ಹಣ ತುಂಬಿಸುವ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಮೂವರು ದರೋಡೆಕೋರರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಪ್ಪಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications