ಬಿಬಿಎಂಪಿ ಚುನಾವಣೆ ಫಿಕ್ಸ್: ರಾಜ್ಯ ಸರ್ಕಾರದ ತೀರ್ಮಾನ
ಬೆಂಗಳೂರು, ಸೆ. 05: ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನೂ ಮುಂದೂಡಲು ಸರ್ಕಾರ ಪ್ರಯತ್ನ ನಡೆಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಇದೀಗ ಬಿಬಿಎಂಪಿ ಚುನಾವಣೆ ಮಾಡುವ ಕುರಿತು ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.
Recommended Video
ಬಿಬಿಎಂಪಿ ಚುನಾವಣೆ ನಡೆಸಲು ಬಿಜೆಪಿಯಲ್ಲಿಯೇ ಒಮ್ಮತದ ಅಭಿಪ್ರಾಯ ಇರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ ಎಂಬ ಆರೋಪ ಸರ್ಕಾರದ ಮೇಲೆ ಬಂದಿತ್ತು. ಆದರೆ ಹೈಕೋರ್ಟ್ ಚುನಾವಣೆ ನಡೆಸಲು ಸೂಚಿಸುವ ಸಾಧ್ಯತೆಯಿದೆ. ಹೀಗಾಗಿ ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡು ಚುನಾವಣೆ ಮಾಡುವ ತೀರ್ಮಾನವನ್ನು ರಾಜ್ಯ ಬಿಜೆಪಿ ಸರ್ಕಾರ ತೆಗೆದುಕೊಂಡಿದೆ.
ಕೋವಿಡ್ ಸಂಕಷ್ಟದ ಹೊರತಾಗಿಯೂ ಕೇಂದ್ರ ಚುನಾವಣಾ ಆಯೋಗವು ಬೇರೆ ರಾಜ್ಯಗಳಲ್ಲಿ ಯಾವುದೇ ಉಪ ಚುನಾವಣೆಯನ್ನು ಮುಂದೂಡಿಲ್ಲ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಕೂಡ ಅದೇ ಮಾದರಿಯಲ್ಲಿ ಕೆಲಸ ಮಾಡಲಿದೆ. ಹೀಗಾಗಿ ಚುನಾವಣೆ ಎದುರಿಸಲು ಸಜ್ಜಾಗುವಂತೆ ರಾಜ್ಯ ಬಿಜೆಪಿ ಕೂಡ ಬೆಂಗಳೂರು ಬಿಜೆಪಿ ತನ್ನ ಸಂಸದರು, ಶಾಸಕರಿಗೆ ಸೂಚನೆ ನೀಡಿದೆ.
ಕೋವಿಡ್ ಸಂದರ್ಭದಲ್ಲಿಯೇ ಗ್ರಾಮ ಪಂಚಾಯಿತಿ ಚುನಾವಣೆಗೆ ಕರಡು ಮಾರ್ಗಸೂಚಿಯನ್ನು ರಾಜ್ಯ ಚುನಾವಣಾ ಆಯೋಗ ತಯಾರಿಸಿದೆ. ಇದು ಕೂಡ ಸರ್ಕಾರದ ಮೇಲೆ ಪರಿಣಾಮ ಬೀರಿದ್ದು, ಬಿಬಿಎಂಪಿ ಚುನಾವಣೆಯನ್ನು ಯಾವಾಗ ನಡೆಸಬೇಕು ಎಂಬುದರ ಕುರಿತು ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಲು ಕಾರಣವಾಗಿದೆ. ಹಾಗಾದರೆ ಬಿಬಿಎಂಪಿ ಚುನಾವಣೆ ಯಾವ ತಿಂಗಳಿನಲ್ಲಿ ನಡೆಯಲಿದೆ? ಇಲ್ಲಿದೆ ಮಾಹಿತಿ.

ಬಿಬಿಎಂಪಿ ವಾರ್ಡ್ ವಿಂಗಡನೆ
ಬಿಬಿಎಂಪಿ ವಾರ್ಡ್ ಮರು ವಿಂಗಡಣೆ, ಮರು ನಿಯೋಜನೆ ಬಳಿಕ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಸೆಪ್ಟೆಂಬರ್ 21ರಂದು ನಡೆಯಲಿರುವ ಮಳೆಗಾಲದ ವಿಧಾನ ಸಭೆ ಅಧಿವೇಶನದಲ್ಲಿಯೇ ವಿಧೇಯಕಕ್ಕೆ ಅನುಮೋದನೆ ಪಡೆದು ಚುನಾವಣೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಬಿಬಿಎಂಪಿ ವಿಧೇಯಕ ಸಂಬಂಧ ರಚಿಸಲಾಗಿರುವ ಜಂಟಿ ಸದನ ಸಮಿತಿ ಸಭೆಯ ಕುರಿತು ಮಾಹಿತಿ ಕೊಟ್ಟಿರುವ ಅವರು, ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಉದ್ದೇಶ ಸರ್ಕಾರಕ್ಕಿಲ್ಲ. 1970ನೇ ಬೆಂಗಳೂರು ನಗರ ಪಾಲಿಕೆ ವಿಧೇಯಕದಂತೆ ಇದುವರೆಗೆ ಆಡಳಿತ ನಡೆಸಿಕೊಂಡು ಬರಲಾಗಿದೆ. ಆದರೆ ಈಗ ದೆಹಲಿ, ಮುಂಬೈ ನಗರದ ಬಳಿಕ ಬೆಂಗಳೂರು ಮೂರನೇ ಅತಿದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆಯುಳ್ಳ ಮಹಾನಗರವಾಗಿದೆ.

ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ
ಸದ್ಯ ಬಿಬಿಎಂಪಿ ವಾರ್ಡ್ ವಿಂಗಡನೆ ಹಾಗೂ ಬಿಬಿಎಂಪಿ ವಲಯಗಳನ್ನು ಅವೈಜ್ಞಾನಿಕವಾಗಿ ರೂಪಿಸಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಈಗಿರುವ 8 ವಿಭಾಗಗಳಿಂದ 15 ವಲಯಗಳನ್ನಾಗಿ ವಿಂಗಡಿಸಬೇಕು. ಹೀಗಾಗಿ ಎರಡನ್ನೂ ಜನ ಸಂಖ್ಯೆ, ಭೌಗೋಳಿಕ ಪ್ರದೇಶದ ಮೂಲಕ ಆಧರಿಸಿ ವಾರ್ಡ್‌ಗಳು, ಆಡಳಿತ ವಿಕೇಂದ್ರೀಕರಣ ರೂಪಿಸಲು ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸಿದೆ.
ಈಗಿರುವ ವಾರ್ಡ್ ಗಳ ಮರು ವಿಂಗಡಣೆಯಿಂದಾಗಿ ಸುಗಮ ಆಡಳಿತಕ್ಕೆ ಅವಕಾಶವಾಗಲಿದೆ. ಪ್ರಸ್ತುತ ಕೆಲವು ವಾರ್ಡ್‌ಗಳಲ್ಲಿ ಜನಸಂಖ್ಯೆ 35 ರಿಂದ 45 ಸಾವಿರದಷ್ಟಿದೆ. ಗಾಂಧಿನಗರ, ಚಾಮರಾಜಪೇಟೆಯಂತಹ ಪ್ರದೇಶಗಳಲ್ಲಿ ಒಂದರಿಂದ ಎರಡು ಕಿ.ಮೀ. ವ್ಯಾಪ್ತಿಯಲ್ಲಿಯೇ ಅತ್ಯಂತ ಹೆಚ್ಚು ಜನ ದಟ್ಟಣೆಯಿದೆ. ಹಾಗೆ ಬೆಂಗಳೂರು ಹೊರ ವಲಯ, ಔಟರ್ ರಿಂಗ್ ರಸ್ತೆಯ ಪ್ರದೇಶಗಳಲ್ಲಿ 4 ರಿಂದ 6 ಕಿ.ಮೀ ವ್ಯಾಪ್ತಿಯಲ್ಲಿ ಜನಸಂಖ್ಯೆ 30 ರಿಂದ 32 ಸಾವಿರ ಇದೆ.
ಜೊತೆಗೆ ಹಲವಾರು ವಾರ್ಡ್‌ಗಳು ಎರಡು, ಮೂರು ವಿಧಾನಸಭಾ ಕ್ಷೇತಗಳಲ್ಲಿ ಹರಿದು ಹಂಚಿಹೋಗಿದೆ. ಹೀಗಾಗಿ ಅಭಿವೃದ್ದಿಗೆ, ಆಡಳಿತಕ್ಕೆ ಅನಾನುಕೂಲ ವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ತಂದು ನೂತನ ಕಾಯ್ದೆಯಂತೆ ಚುನಾವಣೆ ನಡೆಸುವುದು ಅಗತ್ಯ ಹಾಗೂ ಅನಿವಾರ್ಯ ಕೂಡ ಎಂಬುದನ್ನು ಜಂಟಿ ಸದನ ಪರಿಶೀಲನಾ ಸಮಿತಿ ಮನಗಂಡಿದೆ. ಅದು ಬೆಂಗಳೂರು ಶಾಸಕರಿಗೂ ಮನದಟ್ಟಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ವಾರ್ಡ್ ವಿಂಗಡನೆ ಕುರಿತು ಎಲ್ಲರ ಒತ್ತಾಯದ ಮೇರೆಗೆ ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ. ಸಮಿತಿಯು ನಿರಂತರ ಸಭೆಗಳನ್ನು ನಡೆಸಿ ಮಧ್ಯಂತರ ವರದಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಕಾಯ್ದೆಗೆ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಿದೆ ಎಂದರು.

ಸಂಪುಟದ ತೀರ್ಮಾನ
ಮೊನ್ನೆ ಸೆಪ್ಟೆಂಬರ್ 3 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 225 ವಾರ್ಡ್ ಗಳನ್ನು ಪುನನ್ ರಚನೆ ಮಾಡಿದ ಬಳಿಕ ಬಿಬಿಎಂಪಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಸೆಪ್ಟೆಂಬರ್ 4 ರಂದು ನಡೆದ ಜಂಟಿ ಪರಿಶೀಲನಾ ಸಭೆಯಲ್ಲಿ ಆಡಳಿತ ಪಕ್ಷ, ವಿಪಕ್ಷ ಹಾಗೂ ಜೆಡಿಎಸ್ ಶಾಸಕರು ವಾರ್ಡ್ ಮರು ವಿಂಗಡಣೆ ಮಾಡಿ ಚುನಾವಣೆ ನಡೆಸಲು. ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಏರಿಸಲು ಒಪ್ಪಿಗೆ ನೀಡಿದ್ದಾರೆ.
ಈ ಸಂಬಂಧ ಪ್ರತ್ಯೇಕ ಎರಡು ಉಪ ಸಮಿತಿಗಳನ್ನು ರಚಿಸಿದ್ದು ದಿನನಿತ್ಯ ಸಭೆ ಗಳನ್ನು ನಡೆಸಿ ಜಂಟಿ ಸದನ ಸಮಿತಿಗೆ ಮಾಹಿತಿ, ವರದಿ ನೀಡಲಿದೆ. ಜಂಟಿ ಪರಿಶೀಲನಾ ಸಮಿತಿಯು ಪ್ರತೀ ಮಂಗಳವಾರ ಸಭೆ ಸೇರಿ ಹಿಂದೆ ಬಿ.ಎಸ್. ಪಾಟೀಲ್ ಹಾಗೂ ಸಿದ್ದಯ್ಯ ಅವರ ನೇತೃತ್ವದ ಸಮಿತಿ ನೀಡಿದ ವರದಿ ಪ್ರಕಾರ ಬಿಬಿಎಂಪಿ ಮರು ವಿಂಗಡಣೆ, ಅಧಿಕಾರ ಹಂಚಿಕೆ, ಕಾರ್ಯಭಾರಗಳು, ಜವಾಬ್ದಾರಿಗಳನ್ನು ಮರುಹಂಚಿಕೆ ಮಾಡುವ ಮೂಲಕ ದಕ್ಷ ಹಾಗೂ ಪಾರದರ್ಶಕ, ಜನಪರ ಆಡಳಿತ ನೀಡಲು ತೀರ್ಮಾನಿಸಲಾಗಿದೆ ಎಂದರು.
ಇದೇ ಸೆಪ್ಟೆಂಬರ್ 21ರಂದು ಆರಂಭವಾಗಲಿರುವ ವಿಧಾನಸಭೆ ಮಳೆಗಾಲದ ಅಧಿವೇಶನದಲ್ಲಿ ಜಂಟಿ ಸದನ ಸಮಿತಿಯ ಮಧ್ಯಂತರ ವರದಿಯನ್ನು ಮಂಡಿಸಿ ಬಿಬಿಎಂಪಿ ವಿಧೇಯಕ ಅನುಮೋದನೆ ಪಡೆದು ಚುನಾವಣೆ ನಡೆಸಲು ತೀರ್ಮಾನಿಸಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಆ ಮೂಲಕ ಬಿಬಿಎಂಪಿ ಚುನಾವಣೆ ಮುಂದೂಡಲು ಸದನದ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕುವ ಜೊತೆಗೆ ಸಕಾಲದಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ನೂತನ ಕಾಯ್ದೆಯಿಂದಾಗುವ ಪ್ರಯೋಜನಗಳು
ನೂತನ ಕಾಯ್ದೆಯಿಂದ ಆಡಳಿತಾತ್ಮಕ ಹಾಗೂ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಹಲವು ಪ್ರಯೊಜನಗಳಾಗಲಿವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
* ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಮತ್ತು ಮರು ಹಂಚಿಕೆ
* 8 ವಲಯಗಳ ಬದಲಾಗಿ 15 ವಲಯಗಳ ರಚನೆ
* ಎರಡು ಅಥವಾ ಮೂರು ವಲಯಗಳನ್ನು ಸೇರಿಸಿ ಒಬ್ಬ ಐಎಎಸ್ ಅಧಿಕಾರಿ ನೇಮಕ
* ಮೇಯರ್ ಆಡಳಿತಾವಧಿಯನ್ನು 20 ಅಥವಾ 24 ತಿಂಗಳುಗಳಿಗೆ ಹೆಚ್ಚಳ
* ಸುಗಮ ಆಡಳಿತ, ಯೋಜನೆಗಳು, ಸೌಲಭ್ಯ ಕಲ್ಪಿಸಲು ಅನುಕೂಲ
* ದೆಹಲಿ, ಮುಂಬೈ, ಚೆನ್ನೈ ಮಾದರಿಯಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆ
* ಪ್ರತ್ಯೇಕ ಕಾನೂನು ಅಸ್ತಿತ್ವಕ್ಕೆ, ಆಡಳಿತ ವಿಕೇಂದ್ರೀಕರಣ
* ಸೆ 21ರಂದು ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಮಧ್ಯಂತರ ವರದಿ ಮಂಡನೆ
* ಈ ಅಧಿವೇಶನದಲ್ಲಿಯೇ ವಿಧೇಯಕಕ್ಕೆ ಅನುಮೋದನೆ, ಅದರಂತೆ ಚುನಾವಣೆ
* ಹೈಕೋರ್ಟ್‌ನಲ್ಲಿರುವ ಅರ್ಜಿ ಇತ್ಯರ್ಥಗೊಳಿಸಿ ಆದೇಶ ನೀಡುವ ವೇಳೆಗೆ ಬಿಬಿಎಂಪಿ ವಿಧೇಯಕ ಕಾಯ್ದೆ ಅನುಷ್ಠಾನ
* ಜನವರಿ ವೇಳೆಗೆ ಬಿಬಿಎಂಪಿಗೆ ನೂತನ ಕಾಯ್ದೆ ಅನ್ವಯ ಚುನಾವಣೆ.












Click it and Unblock the Notifications