ಬೆಂಗಳೂರಿನಲ್ಲಿ ಗಗನಕ್ಕೇರಿದ ಮನೆ ಬಾಡಿಗೆ: ಶೇ 35ರಷ್ಟು ಹೆಚ್ಚಳ, ಬಾಡಿಗೆದಾರರ ಪರದಾಟ
ಬೆಂಗಳೂರು, ಡಿಸೆಂಬರ್ 20: ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟಕ್ಕೆ ತುತ್ತಾಗಿದ್ದ ಬೆಂಗಳೂರು ಮಹಾನಗರ ಮತ್ತೆ ಮೊದಲಿನಂತೆ ಗದ್ದಲದ ವಾತಾವರಣಕ್ಕೆ ತೆರೆದುಕೊಂಡಿದೆ. ನಗರದಲ್ಲಿ ಪ್ರತಿದಿನ ಏರುತ್ತಿರುವ ಬೆಲೆಗಳು ಜನರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚು ಮಾಡಿವೆ. ದಿನಸಿ, ತರಕಾರಿ, ಪ್ರತಿನಿತ್ಯ ಉಪಯೋಗಿಸುವ ವಸ್ತುಗಳಲ್ಲದೇ ಮನೆಗಳ ಬಾಡಿಗೆಯೂ ಗಗನಕ್ಕೆ ತಲುಪಿದೆ. ದಿಢೀರನೇ, ಏರಿಕೆ ಕಂಡಿರುವ ಮನೆ ಬಾಡಿಗೆ ಬಹಳಷ್ಟು ಜನರ ಪರದಾಟಕ್ಕೆ ಕಾರಣವಾಗಿದೆ. ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯು ಬಾಡಿಗೆದಾರರನ್ನು ಮಾತನಾಡಿಸಿ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಶೇ 35 ರಷ್ಟು ಬಾಡಿಗೆ ಹೆಚ್ಚಳ
ಕೋವಿಡ್ ಸಮಯದಲ್ಲಿ, ಅಂದರೆ, 2021ರ ಜನವರಿಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದ ರಕ್ಷಾ(ಹೆಸರು ಬದಲಾಯಿಸಲಾಗಿದೆ) ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಗರದ ಬಿಟಿಎಂ ಲೇಔಟ್ ಪ್ರದೇಶದಲ್ಲಿ ಒಂದು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ಗೆ ಬಂದು ಬಾಡಿಗೆ ತೆಗೆದುಕೊಂಡಿದ್ದರು. ಒಪ್ಪಂದದ ಪ್ರಕಾರ, ಪ್ರತಿ ವರ್ಷ ಶೇ 5ರಷ್ಟು ಬಾಡಿಗೆ ಹೆಚ್ಚು ಮಾಡಬಹುದು. ಎರಡು ವರ್ಷ ಯಾವುದೇ ತೊಂದರೆ ಇಲ್ಲದೇ ವಾಸವಾಗಿದ್ದ ರಕ್ಷ ಅವರಿಗೆ ಶೇ 35 ರಷ್ಟು ಬಾಡಿಗೆ ಹೆಚ್ಚು ಕೊಡಲು ಮನೆಯ ಮಾಲೀಕ ತಿಳಿಸಿದ್ದಾರೆ. ಇದು ಡಿಸೆಂಬರ್‌ನಿಂದಲೇ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.

ಅಪಾರ್ಟ್‌ಮೆಂಟ್ ಖಾಲಿ ಮಾಡಬೇಕಾಗಿ ಬಂದಿದೆ
ಈ ಮೊದಲ ಒಪ್ಪಂದವು ತುಂಬಾ ಚೆನ್ನಾಗಿತ್ತು. ಪದವಿ ಪಡೆದಾಗಿನಿಂದ ಒಬ್ಬಂಟಿಯಾಗಿ ಬದುಕುವ ಕನಸು ಕಂಡಿದ್ದೇನೆ. ಈಗಿನ ಬಾಡಿಗೆ ಕಟ್ಟಲು ನನಗೆ ತೊಂದರೆ ಇರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ಇಷ್ಟೊಂದು ಬಾಡಿಗೆ ಕಟ್ಟುಲು ನನಗೆ ಸಾಧ್ಯವಾಗುವುದಿಲ್ಲ' ಎಂದು ರಕ್ಷಾ ಅಳಲು ತೋಡಿಕೊಂಡಿದ್ದಾರೆ.
'ಈಗ ನಾನು 12,000 ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಿದ್ದೇನೆ. ಆದರೆ, ಮುಂದಿನ ತಿಂಗಳಿನಿಂದ 16,000 ರೂಪಾಯಿ ಬಾಡಿಗೆ ಕಟ್ಟಬೇಕೆಂದು ಮಾಲೀಕ ಹೇಳಿದ್ದಾರೆ. ಇಷ್ಟೊಂದು ಬಾಡಿಗೆಯಿಂದ ನನಗೆ ತೊಂದರೆ ಆಗಬಹುದು ಎಂದು ಮಾಲೀಕರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ನನ್ನ ಮಾತನ್ನು ಒಪ್ಪಲಿಲ್ಲ. ಹೀಗಾಗಿ, ನಾನು ಅಪಾರ್ಟ್‌ಮೆಂಟ್ ಅನ್ನು ಖಾಲಿ ಮಾಡಬೇಕಾಗಿ ಬಂದಿದೆ' ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ರಕ್ಷಾ ಅವರಂತಹ ಇನ್ನೂ ಕೆಲವು ಬಾಡಿಗೆದಾರರು ಇದ್ದಾರೆ. ಕೋವಿಡ್ ನಂತರ ಬೆಂಗಳೂರಿನಲ್ಲಿ ಬೆಲೆ ಏರಿಕೆ ವ್ಯಾಪಕವಾಗಿ ಹೆಚ್ಚುತ್ತಿರುವುದು ಬಹುತೇಕರನ್ನು ಆತಂಕಕ್ಕೆ ದೂಡಿದೆ.

ರೂ 14,000 ಬದಲಿಗೆ, ರೂ 19,000 ಪಾವತಿಸಬೇಕಿದೆ
ಒಂದು ವರ್ಷದಿಂದ ಯಲಹಂಕ ಬಳಿ ವಾಸಿಸುತ್ತಿರುವ ಪ್ರತೀಕ್ ಬಿ (ಹೆಸರು ಬದಲಾಯಿಸಲಾಗಿದೆ) ಅವರ ಪರಿಸ್ಥಿತಿಯೂ ಇದೇ ಆಗಿದೆ.
'ಒಂದು ವರ್ಷದ ಹಿಂದೆ ನಾನು ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದೇನೆ. ಮಾಲೀಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಒಂದು ವರ್ಷದ ನಂತರ ಬಾಡಿಗೆ ಮೊತ್ತದಲ್ಲಿ ಶೇ.5 ರಷ್ಟು ಏರಿಕೆಯಾಗಲಿದೆ ಎಂದು ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಈ ತಿಂಗಳು ಬಾಡಿಗೆ ವಸೂಲಿ ಮಾಡಲು ಮಾಲೀಕರು ಬಂದಾಗ, ಡಿಸೆಂಬರ್‌ನಿಂದ ಬಾಡಿಗೆಯಲ್ಲಿ ಸುಮಾರು ಶೇ 35 ಹೆಚ್ಚಳವಾಗಲಿದೆ ಎಂದು ತಿಳಿಸಿದರು. ಈಗ ನಾನು ಮೊದಲಿನ ಬಾಡಿಗೆ ರೂ 14,000 ಬದಲಿಗೆ ರೂ 19,000 ಪಾವತಿಸಬೇಕಾಗುತ್ತದೆ' ಎಂದು ಸಂಕಷ್ಟ ಹಂಚಿಕೊಂಡಿದ್ದಾರೆ.
'ನಾವು ಮಾಲೀಕರೊಂದಿಗೆ ಮಾತುಕತೆ ನಡೆಸಲು ಯತ್ನಿಸಿದ್ದೇವೆ. ಶೇ 5 ಬದಲಿಗೆ ಶೇ 10 ಹೆಚ್ಚಳವನ್ನು ನೀಡುತ್ತೇವೆ ಎಂದು ತಿಳಿಸಿದ್ದೇವೆ. ಆದರೆ, ಅದಕ್ಕವರು ಒಪ್ಪಲೇ ಇಲ್ಲ. ನಾನು ಏಳು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದೇನೆ. ಆದರೆ ಈ ಹಿಂದೆ ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ. ಇದನ್ನು ಭರಿಸಲಾಗದ ಕಾರಣ ನಾನು ಈಗ ಫ್ಲಾಟ್ ಅನ್ನು ಖಾಲಿ ಮಾಡುತ್ತೇನೆ' ಎಂದು ಪ್ರತೀಕ್ ಹೇಳಿದ್ದಾರೆ.

ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿರುವ ಮಾಲೀಕರು
ಬಾಡಿಗೆ ಹೆಚ್ಚಳದ ನೆಪದಲ್ಲಿ ಮನೆ ತೆರವು ಮಾಡಬೇಕೆಂದು ಮಾಲೀಕರು ಒತ್ತಾಯಿಸುತ್ತಿದ್ದಾರೆ. ಅನೇಕರು ಕೈಗೆಟುಕುವ ದರದಲ್ಲಿ ವಾಸ್ತವ್ಯವನ್ನು ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ತಜ್ಞರು ಹೇಳುವಂತೆ, ಜನರು ಈಗ ತಮ್ಮ ಕೆಲಸದ ನಿಮಿತ್ತ ನಗರಕ್ಕೆ ಮರಳುತ್ತಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಇನ್ನಷ್ಟು ಹೆಚ್ಚಾಗಲಿದೆ. ಬಾಡಿಗೆ ನೀಡುತ್ತಿರುವವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.












Click it and Unblock the Notifications