ಕಾಶ್ಮೀರದಲ್ಲಿ ಉಗ್ರರ ದಾಳಿ; 'ಅಮಿತ್ ಶಾ ರಾಜೀನಾಮೆಗೆ ಆಗ್ರಹ'
ಬೆಂಗಳೂರು, ಏಪ್ರಿಲ್ 23: ಜಮ್ಮು-ಕಾಶ್ಮೀರದ ಪೆಹಲ್ಮಾನ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾಗಿದೆ ಎಂದು ಈ ಹೇಡಿ ಕೃತ್ಯವನ್ನು ಉಗ್ರವಾಗಿ ಖಂಡಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಕೇಂದ್ರ ಹಾಗೂ ಕಾಶ್ಮೀರ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಈ ಜವಾಬ್ದಾರಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರ ಮೃತದೇಹವನ್ನು ತರಲು ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ 40ಕ್ಕೂ ಅಧಿಕ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಯವರು ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಈಶ್ವರ್ ಖಂಡ್ರೆ ಅವರು ಹೇಳಿದರು.

ಸಚಿವ ಸಂತೋಷ್ ಲಾಡ್ ಅವರು ಘಟನಾ ಸ್ಥಳಕ್ಕೆ ಹೋಗಿದ್ದು, ನೊಂದವರಿಗೆ ಸಾಂತ್ವನ ಹೇಳಿದ್ದಾರೆ. ನೊಂದವರ ನೆರವಿಗೆ ನಿಂತಿದ್ದಾರೆ. ರಾಜ್ಯ ಸರ್ಕಾರ ಈ ನೋವಿನ ಸಂದರ್ಭದಲ್ಲಿ ನೊಂದವರ ಜೊತೆ ನಿಲ್ಲುತ್ತದೆ ಎಂದೂ ಹೇಳಿದರು. ಕೇಂದ್ರ ಸರ್ಕಾರ 370 ವಿಧಿ ರದ್ದತಿ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಸದ್ದಡಗಿಸಿದ್ದು, ಪ್ರವಾಸಕ್ಕೆ ಮುಕ್ತವಾಗಿದೆ, ಜನರು ನಿರ್ಭೀತಿಯಿಂದ ಕಾಶ್ಮೀರಕ್ಕೆ ಬನ್ನಿ ಎಂದು ಪದೇ ಪದೇ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿಗರೂ ಸೇರಿದಂತೆ ದೇಶ-ವಿದೇಶದ ಪ್ರವಾಸಿಗರು ಕೇಂದ್ರ ಸರ್ಕಾರದ ಹೇಳಿಕೆ ನಂಬಿ ಕಾಶ್ಮೀರಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.
ನೂರಾರು ಜನ ಪ್ರವಾಸಿಗರು ಇದ್ದ ಜಾಗದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ, ಸುರಕ್ಷತೆ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇದು ಕೇಂದ್ರ ಸರ್ಕಾರ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಹುಗಾರಿಕೆ ವೈಫಲ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಪದೇ ಪದೆ ಇಂತಹ ಭದ್ರತಾ ವೈಫಲ್ಯಗಳು ನಡೆಯುತ್ತಿರುವುದಕ್ಕೆ ನಾನು ಇಲ್ಲಿ ವಾಸ್ತವಾಂಶಗಳನ್ನು ನಿಮ್ಮ ಮುಂದೆ ಇಡಲು ಬಂದಿದ್ದೇನೆಯೇ ಹೊರತು, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಅಲ್ಲ. ಇಂತಹ ವಿಚಾರಗಳನ್ನು ನಾಳೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸರ್ವಪಕ್ಷ ಸಭೆ ಕರೆದರೆ ಅಲ್ಲಿ ನಾವು ಇಂತಹ ವಿಚಾರಗಳನ್ನು ಚರ್ಚೆ ಮಾಡುತ್ತೇವೆ. ಆದರೆ ಈಗ, ಇಲ್ಲಿ ಆ ವಿಚಾರವಾಗಿ ಚರ್ಚೆ ಮಾಡುವುದಿಲ್ಲ. ಸಧ್ಯಕ್ಕೆ ನಾವು ಜನರಿಗೆ ನೆರವಾಗಿ ಅವರಿಗೆ ಸಾಂತ್ವನ ಹೇಳಬಯಸುತ್ತೇವೆ ಎಂದರು.
ಪ್ರಧಾನಮಂತ್ರಿಗಳು ಅಬುಧಾಬಿಯಲ್ಲಿದ್ದಾಗ ಇಂತಹ ದಾಳಿಯಾಗಿರುವುದನ್ನು ಹೇಗೆ ನೋಡುತ್ತೀರಿ ಹಾಗೂ ಧರ್ಮದ ಹೆಸರು ಕೇಳಿ ಹತ್ಯೆ ಮಾಡಿರುವುದನ್ನು ಹೇಗೆ ನೋಡುತ್ತೀರಿ ಎಂದು ಕೇಳಿದಾಗ "ಇದು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುವ ಸಮಯ. ಸರ್ವಪಕ್ಷ ಸಭೆ ಕರೆದರೆ ಇಂತಹ ವಿಚಾರ ಚರ್ಚೆ ಮಾಡಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ತಿಳಿಸಿದರು.
ಅಮರನಾಥ ಯಾತ್ರೆ ವೇಳೆಯೂ ಇಂತಹ ದಾಳಿ ನಡೆದಿತ್ತು. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಅಮರನಾಥ ಯಾತ್ರೆಗೆ ತೆರಳುವ ಪ್ರವಾಸಿಗರಿಗೆ ಅಗತ್ಯ ಭದ್ರತೆ ಒದಗಿಸಿಕೊಡಬೇಕು. ಭಯೋತ್ಪಾದನೆ ಸವಾಲಿನ ಕುರಿತು ಸರ್ಕಾರ ಎಲ್ಲಾ ಪಕ್ಷಗಳ ಜತೆ ಚರ್ಚೆ ಮಾಡಬೇಕು. ಹೀಗಾಗಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಸಲಹೆ ಅಭಿಪ್ರಾಯ ಪಡೆಯಬೇಕು. ನಮ್ಮ ನಾಗರೀಕರನ್ನು ಭಯೋತ್ಪಾದಕರು ಹತ್ಯೆ ಮಾಡುವಾಗ ರಾಜಕೀಯ ಮಾಡುವುದು ಸರಿಯಲ್ಲ. ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸಲಿ, ಅಸಾಧ್ಯವಾಗದನ್ನು ತಿರಸ್ಕರಿಸಬಹುದು. ಸರ್ವಪಕ್ಷ ಸಭೆ ಮಾಡಿದಾಗ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications