ಉಗ್ರರ ಭೀತಿ: ಕೆಂಪೇಗೌಡ ವಿ. ನಿಲ್ದಾಣದಲ್ಲಿ ಕಟ್ಟೆಚ್ಚರ
ಬೆಂಗಳೂರು, ಮೇ.6: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ(ಬಿಸಿಎಎಸ್) ನೀಡಿರುವ ಸೂಚನೆಯಲ್ಲಿ ದಕ್ಷಿಣ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಹೈದರಾಬಾದ್, ಕೊಚ್ಚಿ, ಮಂಗಳೂರು, ಚೆನ್ನೈ ಹಾಗೂ ತಿರುವನಂತಪುರಂ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸ್ಥಳೀಯ ಪೊಲೀಸರಿಗೆ ಹೆಚ್ಚುವರಿ ಪಡೆಯನ್ನು ನಿಯೋಸುವಂತೆ ನಿರ್ದೇಶನ ನೀಡಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗಿ-ಬರುವ ಎಲ್ಲಾ ವಾಹನಗಳನ್ನು, ಪ್ರಯಾಣಿಕರನ್ನು ಸಂಪೂರ್ಣವಾಗಿ ತಪಾಸಣೆ ಒಳಪಡಿಸುವಂತೆ ಹೇಳಲಾಗಿದೆ.

ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಉಗ್ರರು ಕಾರು ಬಾಂಬ್ ದಾಳಿ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಇತ್ತೀಚಿಗೆ ಬಂಧಿತನಾದ ಶ್ರೀಲಂಕಾ ಮೂಲದ ಐಎಸ್ಐ ಏಜೆಂಟುಗಳಿಂದ ಈ ವಿಷಯ ಬಹಿರಂಗಗೊಂಡಿದೆ.
ಮೇ 1 ರ ಕಾರ್ಮಿಕ ದಿನಾಚರಣೆ ದಿನದಂದು ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ನ ಸ್ಲೀಪರ್ ಕೋಚ್ ಬೋಗಿಯೊಂದರಲ್ಲಿ ಬಾಂಬ್ ಇಟ್ಟು ಸ್ಪೋಟ ಮಾಡಿದ ಉಗ್ರರ ತಂಡವೇ ಈಗ ವಿಮಾನ ನಿಲ್ದಾಣ ಸ್ಫೋಟಕ್ಕೆ ಮಾರಕ ಯೋಜನೆ ಹಾಕಿಕೊಂಡಿದ್ದಾರೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಟಿಸಿಎಸ್ ಉದ್ಯೋಗಿ ಗುಂಟೂರು ಮೂಲದ ಸ್ವಾತಿ ಪರುಚರಿ ಬಲಿಯಾಗಿದ್ದರು.
ಬಿಸಿಎಎಸ್ ಸೂಚನೆಯಂತೆ ಸುಮಾರು 59ಕ್ಕೂ ಅಧಿಕ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಹೆಚ್ಚುವತಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್ ಎಫ್) ಪಡೆ ನಿಯೋಜಿಸಲಾಗಿದೆ. ಪಾಕಿಸ್ತಾನಿ ಬೆಂಬಲಿತ ಉಗ್ರರು ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ನುಸುಳಿಕೊಂಡು ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಬಿಸಿಎಎಸ್ ಪ್ರಾದೇಶಿಕ ಉಪ ಆಯುಕ್ತ ಶರತ್ ಶ್ರೀನಿವಾಸ್ ಹೇಳಿದ್ದಾರೆ.












Click it and Unblock the Notifications