ಬೆಂಗಳೂರು ದುಬಾರಿ ಸುರಂಗ ಹೂಡಿಕೆ ಮೂರ್ಖತನ, ಕಾಂಗ್ರೆಸ್ "ಕಿವಿ ಮೇಲೆ ಹೂವು" ಅಭಿಯಾನ: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನ ಟನಲ್ ರಸ್ತೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಟನಲ್ ರಸ್ತೆ ಯೋಜನೆಯ ಸಮರ್ಥನೆಗೆ ಟಾಂಗ್ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ನ 2023 ಕಿವಿ ಮೇಲೆ ಹೂವು ಅಭಿಯಾನ ಎಂದು ಟೀಕೆ ಎಂದು ಹೇಳಿದ್ದಾರೆ.
ಬೆಂಗಳೂರು 'ರಾಜಕೀಯ ಎಂಜಿನಿಯರಿಂಗ್' ಅಲ್ಲ, ವೈಜ್ಞಾನಿಕ ನಗರ ಯೋಜನೆಗೆ ಅರ್ಹವಾಗಿದೆ ಎನ್ನುವ ಸಾಲಿನೊಂದಿಗೆ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಸುದೀರ್ಘವಾಗಿ ಬರೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೆಂಗಳೂರು ಟನಲ್ ಯೋಜನೆ ಜಾರಿಗೆ ಸಂಬಂಧಿಸಿದಂತೆ The Institution of Engineers (India) ಬೆಂಬಲ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದು, ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಬೆಂಗಳೂರಿಗೆ, ವೈಜ್ಞಾನಿಕ ನಗರ ಯೋಜನೆ ಬೇಕೇ ಹೊರತು 'ರಾಜಕೀಯ ಎಂಜಿನಿಯರಿಂಗ್' ಅಲ್ಲ. ಸುರಂಗ ರಸ್ತೆ ಪರವಾಗಿ ಇರುವ ಈ ತಜ್ಞರ ಅನುಮೋದನೆಯನ್ನು ನೀಡಿದವರು ಕಾಂಗ್ರೆಸ್ ಪಕ್ಷದ ಒಬ್ಬ ವಕ್ತಾರರು - ರಾಜಕಾರಣಿ, ಆಶ್ಚರ್ಯಕರವಾಗಿ, ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗಗಳು ಮತ್ತು ಬಹು ಆಯಾಮದ ರಸ್ತೆಗಳನ್ನು ನಿರ್ಮಿಸುವುದು ಒಂದೇ ಮಾರ್ಗ ಎಂದು ಇದು ತೀರ್ಮಾನಿಸುತ್ತದೆ.
ಇದರಿಂದಲೇ ಗೊತ್ತಾಗುತ್ತದೆ, ನಗರ ಯೋಜನೆ ಮತ್ತು ಸಾರಿಗೆ ವಿಜ್ಞಾನದ ಬಗ್ಗೆ ಅರಿವಿನ ಕೊರತೆಯನ್ನು ಇದು ತೋರಿಸುತ್ತದೆ. ಸುರಂಗ ರಸ್ತೆಗಳ ವಿರೋಧಕ್ಕೆ ಯಾವುದೇ ಸಿವಿಲ್ ಎಂಜಿನಿಯರಿಂಗ್ ಅಸಾಧ್ಯತೆ ಕಾರಣವಲ್ಲ. ಇದಕ್ಕೆ ಕಾರಣವೆಂದರೆ - ಈ ಸುರಂಗಗಳು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸುವುದಿಲ್ಲ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಾರ್ವಜನಿಕ ಸಾರಿಗೆಗೆ ನೆರವಾಗದ - ಖಾಸಗಿ ವಾಹನಗಳ ವಿಐಪಿ ಕಾರಿಡಾರ್ ಮೇಲೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವುದು ಮೂಲಭೂತವಾಗಿ ತಪ್ಪು.
ಸಾರ್ವಜನಿಕ ಸಾರಿಗೆ ಅಧ್ಯಯನಗಳು ಪ್ರತಿ ಗಂಟೆಗೆ, ಪ್ರತಿ ದಿಕ್ಕಿಗೆ ಸುಮಾರು 70,000 ಜನರನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ತೋರಿಸಿದಾಗ, ಪ್ರತಿ ಗಂಟೆಗೆ, ಪ್ರತಿ ದಿಕ್ಕಿಗೆ ಕೇವಲ 1800 ಕಾರುಗಳನ್ನು ಮಾತ್ರ ಸಾಗಿಸುವ ದುಬಾರಿ ಸುರಂಗಗಳಲ್ಲಿ ಹೂಡಿಕೆ ಮಾಡುವುದು ಮೂರ್ಖತನ. ಸಣ್ಣ ಸಂಖ್ಯೆಯ ವಾಹನ ಮಾಲೀಕರಿಗೆ ಲಾಭ ಮಾಡಲು ಇಷ್ಟೊಂದು ದೊಡ್ಡ ಹಣವನ್ನು ಏಕೆ ಖರ್ಚು ಮಾಡಬೇಕು ಎಂಬುದಕ್ಕೆ ಟನಲ್ ಪರವಾದ ವಾದ ಮಾಡುವವರ ಬಳಿ ಉತ್ತರವಿಲ್ಲ.
ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲು, ಏಕೆ ಖಾಸಗಿ ಕಾರ್ ಮಾಲೀಕತ್ವಕ್ಕೆ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ವರದಿಯು ಪರಿಸರದ ಪ್ರಭಾವ, ಜಲವಿಜ್ಞಾನದ ಅಪಾಯಗಳು ಮತ್ತು ಭೂವೈಜ್ಞಾನಿಕ ಬೆದರಿಕೆಗಳನ್ನು ಸಹ ಅನುಕೂಲಕರವಾಗಿ ನಿರ್ಲಕ್ಷಿಸುತ್ತದೆ. ಲಾಲ್‌ಬಾಗ್ ಕಲ್ಲಿನ ರಚನೆಯು 3 ಶತಕೋಟಿ ವರ್ಷಗಳಷ್ಟು ಹಳೆಯದು - ಆದರೂ ಅದರ ಕೆಳಗೆ ಸುರಂಗ ನಿರ್ಮಿಸುವುದರ ಪರಿಣಾಮಗಳ ಬಗ್ಗೆ ಯಾವುದೇ ಗಂಭೀರ ಅಧ್ಯಯನ ನಡೆದಿಲ್ಲವೆಂಬುದು ಆತಂಕಕಾರಿ ವಿಷಯ.
ಆದ್ದರಿಂದಲೇ ನಾವು ಈ ಕೆಳಗಿನ ಸಂಸ್ಥೆಗಳಿಂದ ಸ್ವತಂತ್ರ ವೈಜ್ಞಾನಿಕ ಅಧ್ಯಯನಕ್ಕೆ ಒತ್ತಾಯಿಸಿದ್ದೇವೆ:
1. ರಾಷ್ಟ್ರೀಯ ಶಿಲಾ ಯಂತ್ರಶಾಸ್ತ್ರ ಸಂಸ್ಥೆ (National Institute of Rock Mechanics)
2. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (Geological Survey of India)
3. ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (National Institute of Hydrology)
4. ಕೇಂದ್ರೀಯ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ಸಂಸ್ಥೆ (Central Institute of Mining & Fuel Research)
ಆದರೆ ಸ್ವತಂತ್ರ ಮೌಲ್ಯಮಾಪನದ ಬದಲು, ಎಂಜಿನಿಯರ್ ವೇಷದಲ್ಲಿರುವ ಪಕ್ಷದ ಕಾರ್ಯಕರ್ತನಿಂದ ರಾಜಕೀಯ ಅನುಮೋದನೆಯನ್ನು ನಮ್ಮ ಕೈಗೆ ಕೊಡಲಾಗಿದೆ.
ಈ ವರದಿಯು ಯೋಜನೆಯ ವೆಚ್ಚದ ಬಗ್ಗೆಯೂ ಸುಳ್ಳು ಹೇಳಿದೆ. ಸುರಂಗದ ಪ್ರತಿ ಕಿಲೋಮೀಟರ್‌ಗೆ ವೆಚ್ಚ 440 ಕೋಟಿ ರೂ ಇರುತ್ತದೆ ಎಂದು ಅದು ಹೇಳುತ್ತದೆ. ಕಾಂಗ್ರೆಸ್ 'ತಜ್ಞ' ಕನಿಷ್ಠ ಒಮ್ಮೆಯಾದರೂ ಡಿಪಿಆರ್ (DPR) ಅನ್ನು ಓದಬಹುದಿತ್ತು. ಅಲ್ಲಿ ವೆಚ್ಚವನ್ನು ಪ್ರತಿ ಕಿಲೋಮೀಟರ್‌ಗೆ 1,000 ಕೋಟಿ ರೂ ಗಿಂತ ಹೆಚ್ಚು ಎಂದು ನಿಗದಿಪಡಿಸಲಾಗಿದೆ. ಆದರೆ ಸತ್ಯಗಳ ಬಗ್ಗೆ ಯಾರಿಗೆ ಚಿಂತೆ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮಂತಹ ಸಂಪನ್ಮೂಲ-ಸೀಮಿತ ದೇಶಕ್ಕೆ, ಪ್ರತಿ ರೂಪಾಯಿಯು ಹೆಚ್ಚು ಜನರನ್ನು, ಹೆಚ್ಚು ಪರಿಣಾಮಕಾರಿಯಾಗಿ, ಹೆಚ್ಚು ಸುರಕ್ಷಿತವಾಗಿ ಸಾಗಿಸಬೇಕು. ಕಾರುಗಳಿಗೆ ಸುರಂಗಗಳು ಸಂಚಾರ ದಟ್ಟಣೆಯನ್ನು ಪರಿಹರಿಸುವುದಿಲ್ಲ. ಮಾಸ್ ರಾಪಿಡ್ ಟ್ರಾನ್ಸ್‌ಪೋರ್ಟ್ ಸಂಚಾರ ಸಮಸ್ಯೆಯನ್ನು ಪರಿಹರಿಸುತ್ತದೆ. ಮುಖ್ಯಮಂತ್ರಿಗಳು ಅಸ್ತಿತ್ವದಲ್ಲಿಲ್ಲದ ಸಂಸ್ಥೆಯಿಂದ "ಡಮ್ಮಿ ವಿಶ್ವ ದಾಖಲೆ ಪ್ರಮಾಣಪತ್ರ"ವನ್ನು ಪಡೆದುಕೊಂಡ ನಂತರ, ಈಗ ನಮಗೆ ಡಿಸಿಎಂ ಅವರು ಕಾಂಗ್ರೆಸ್ ಪಕ್ಷದ ಎಂಜಿನಿಯರ್ ರಿಂದ "ಯೋಜನಾ ತಜ್ಞರ ಅನುಮೋದನೆ" ನೀಡಿದ್ದಾರೆ.
ಇದು ರಾಜ್ಯದ ಜನತೆಗೆ ಕಾಂಗ್ರೆಸ್‌ನ 2023 ರ "ಕಿವಿ ಮೇಲೆ ಹೂವು" ಅಭಿಯಾನದ ಸಂಪೂರ್ಣ ಮುಂದುವರಿದ ಭಾಗವಷ್ಟೇ ಎಂಬುದು ಸ್ಪಷ್ಟ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಕಿಡಿಕಾರಿದ್ದಾರೆ.












Click it and Unblock the Notifications