'ಟೀಮ್' ಸ್ವಚ್ಛತಾ ಕಾರ್ಯಕ್ಕೆ ರೈಲ್ವೆ ಪ್ರಶಂಸೆ
ಬೆಂಗಳೂರು, ನ. 15 : ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂದಿಸಿ ಸ್ವಚ್ಛ ಭಾರತ ಅಭಿಯಾನಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಬೆಂಗಳೂರಿನ 'ಟೀಮ್' ಎಂಬ 12 ಜನರ ತಂಡ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಸಿ ರೈಲ್ವೆ ಇಲಾಖೆಯ ಮೆಚ್ಚುಗೆಗೂ ಪಾತ್ರವಾಗಿದೆ.
ಅ.19ರಿಂದ ಪ್ರತಿ ಭಾನುವಾರ ಟೀಮ್ ಸದಸ್ಯರು ಬೆಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಟೀಮ್ ಸದಸ್ಯರ ಕಾರ್ಯವನ್ನು ನೋಡಿ ಮೆಚ್ಚುಗೆ ಸೂಚಿಸಿರುವ ರೈಲ್ವೆ ಇಲಾಖೆ ಇವರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ.

ಉದ್ಯಮಿಗಳು, ವಿದ್ಯಾರ್ಥಿಗಳು, ಬೇರೆ-ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 12 ಜನರು ಸೇರಿ 'ಟೀಮ್' ತಂಡ ಕಟ್ಟಿಕೊಂಡಿದ್ದಾರೆ. ವಾರವೆಲ್ಲಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಇವರು, ಭಾನುವಾರ ಬಂದರೆ ಪೊರಕೆ ಹಿಡಿದು ರೈಲು ನಿಲ್ದಾಣ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾರೆ. [ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]
ಟೀಮ್ ತಂಡದವರು ಮೊದಲು ಅ.19ರಂದು ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡರು ಅಂದು ಅವರಿಗೆ ಆಶ್ಚರ್ಯವಾಗಿತ್ತು, ಏಕೆಂದರೆ ಕೇವಲ ಎರಡು ಗಂಟೆಯಲ್ಲಿ ಅವರು ಸಂಗ್ರಹಿಸಿದ ಕಸ 15 ಬ್ಯಾಗ್. ಇದರಿಂದಾಗಿ ಪ್ರತಿ ಭಾನುವಾರ ಸ್ವಚ್ಛತಾ ಕೆಲಸವನ್ನು ಅವರು ಮುಂದುವರೆಸಿದ್ದಾರೆ.

ಎರಡನೇ ಭಾನುವಾರವೂ 'ಟೀಮ್' ಫ್ಲಾಟ್‌ಫಾರಂ ನಂ 5ರ ಕ್ಯಾಂಟೀನ್ ಸಮೀಪ ಸ್ವಚ್ಛತಾ ಕಾರ್ಯ ಕೈಗೊಂಡರು, ಕೊಳೆತ ಟೊಮೆಟೋ, ಬೂಸ್ಟ್ ಹಿಡಿದ ಬ್ರೆಡ್ ಮುಂತಾದವುಗಳನ್ನು ಸಂಗ್ರಹಿಸಿ ಫ್ಲಾಟ್‌ಫಾರಂ ಸ್ವಚ್ಚಗೊಳಿಸಿದ್ದಾರೆ. [ಸ್ವಚ್ಛ ಭಾರತಕ್ಕೆ ಮತ್ತೆ 9 ಜನರನ್ನು ಆಹ್ವಾನಿಸಿದ ಮೋದಿ]
ಅಂದಹಾಗೆ 'ಟೀಮ್' ತಂಡದಲ್ಲಿ ಅಮಿಶ್ ಕೊಠಾರಿ, ಅಭಿಷೇಕ್ ಕೊಠಾರಿ, ಮೊನಿಕಾ, ಪ್ರಿಯಾಂಕ, ಕಿರಣ್, ನಿಶಾಂತ್, ಯಶ್, ಪ್ರಿಯಾ ಓಸ್ವಾಲ್ ಮುಂತಾದವರಿದ್ದಾರೆ. ಟೀಮ್ ತಂಡದ ಕಾರ್ಯಕ್ಕೆ ನಮ್ಮ ಅಭಿನಂದನೆಗಳು.












Click it and Unblock the Notifications