ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಗ್ಗ ಕಟ್ಟಿ ಬರಿಗೈಯಲ್ಲಿ ಟ್ಯಾಕ್ಸಿ ಎಳೆದು ಭಾರೀ ಪ್ರತಿಭಟನೆ

By Prasad
|
Google Oneindia Kannada News

ಬೆಂಗಳೂರು, ಡಿ. 11 : "49 ರೂಗೆ, ಲೀಟರ್ ಡೀಸಲ್ಲೂ ಗಿಟ್ಟಲ್ಲ! ಬಂಡವಾಳ ಶಾಹಿಗಳೇ, ಅಗ್ಗದ ಟ್ಯಾಕ್ಸಿ ದರ ಸಮರ ನಿಲ್ಲಿಸಿ, ಗುಣಮಟ್ಟದ ಸೇವೆಗೆ ಕೈ ಜೋಡಿಸಿ. ಉದ್ಯಮ ವಿರೋಧಿ, ಅಪಾಯಕಾರಿ ಟ್ಯಾಕ್ಸಿ ದರ ಸಮರವನ್ನು ಕೊನೆಗಾಣಿಸಿ." ಇದು ಕರ್ನಾಟಕ ಟ್ಯಾಕ್ಸಿ ಮಾಲೀಕರು, ಚಾಲಕರು ಮತ್ತು ಆಪರೇಟರುಗಳ ಸಂಘದ ಆಗ್ರಹ.

ಗುರುವಾರ ನಗರದ ನಗರ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಚಾಲಕ ಮಾಲಕರು ಟ್ಯಾಕ್ಸಿಗೆ ಹುರಿ ಹಗ್ಗ ಕಟ್ಟಿ ಬರಿಗೈಯಲ್ಲಿ ಟ್ಯಾಕ್ಸಿ ಎಳೆದು ಪ್ರತಿಭಟನೆ ನಡೆಸಿದರು. ಸಹಸ್ರ ಸಂಖ್ಯೆಯಲ್ಲಿ ಟಾಕ್ಸಿ ಚಾಲಕ-ಮಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ನಗರದಲ್ಲಿ ಈಚೆಗೆ ಆರಂಭವಾಗಿರುವ ಟ್ಯಾಕ್ಸಿ ದರ ಸಮರ ಟ್ಯಾಕ್ಸೀ ಉದ್ಯಮಕ್ಕೇ, ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಇದನ್ನು ಪ್ರತಿಭಟಿಸಿ ಈ ಬೃಹತ್ ಪ್ರತಿಭಟನೆ ನಡೆಸಲಾಗಿದೆ ಎಂದು ಕರ್ನಾಟಕ ಟ್ಯಾಕ್ಸಿ ಮಾಲೀಕರು, ಚಾಲಕರು, ಮತ್ತು ಆಪರೇಟರುಗಳ ಸಂಘದ ಅಧ್ಯಕ್ಷ ಹಮೀದ್ ಅಕ್ಬರ್ ಅಲಿ ಹೇಳಿದ್ದಾರೆ.

ಕೇವಲ 49 ರೂಪಾಯಿಗೆ ಪ್ರಯಾಣಿಸಿ ಎಂದು ಗ್ರಾಹಕರಿಗೆ ಆಮಿಷ ಒಡ್ಡಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಂತೆ ಮಾಡುವುದು ಆಕರ್ಷಕ ಕೊಡುಗೆಯಂತೆ ಕಾಣಿಸಬಹುದು. ಆದರೆ ಇದರ ಹಿಂದಿನ ಸತ್ಯವನ್ನೂ ಅರಿತುಕೊಳ್ಳಬೇಕು. ಇದೊಂದು ಅತ್ಯಂತ ಅನಾರೋಗ್ಯಕರ ದರ ಸಮರ. ಖಾಸಗಿ ಟ್ಯಾಕ್ಸಿ ಕ್ಷೇತ್ರದಲ್ಲಿ 'ಹೂಡಿಕೆ ಹಣ' ಹೊಂದಿರುವವರ ಅಟ್ಟಹಾಸದಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಟ್ಯಾಕ್ಸಿ ಆಪರೇಟರ್‌ಗಳಿಗೆ ಹಾಗೂ ಟ್ಯಾಕ್ಸಿ ಚಾಲಕರು, ಮಾಲಕ ವರ್ಗದವರಿಗೆ ಬಹಳ ತೊಂದರೆ ಉಂಟಾಗಿದೆ.

ನಗರದ ಸುಮಾರು 500 ಆಪರೇಟರ್ ಮತ್ತು ಸಿಬ್ಬಂದಿಗೆ ಹಾಗೂ 12 ಸಾವಿರದಷ್ಟು ಚಾಲಕ, ಮಾಲೀಕರಿಗೆ ಇದರಿಂದ ಬಹಳ ತೊಂದರೆ ಉಂಟಾಗಿದೆ. ಸರ್ಕಾರ ಇಂತಹ ಅಪಾಯಕಾರಿ ದರ ಸಮರವನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲು ಈ ಪ್ರತಿಭಟನೆ ಹಮ್ಮಿಕೊಂಡಿದೆ. [ಕ್ಯಾಬ್ ಬ್ಯಾನ್ : ಟ್ಯಾಕ್ಸಿ ಚಾಲಕರು ಏನಂತಾರೆ?]

Taxi owners, drivers protest against unhealthy price war

ಆತಂಕಕಾರೀ ಬೆಳವಣಿಗೆ

ವಾಹನ ಮಾಲೀಕರೊಂದಿಗೆ ಹೂಡಿಕೆ ಹೊಂದಿರುವ ಕಂಪೆನಿಗಳು ಉಚಿತ ಮೊಬೈಲ್ ಫೋನ್, ಕಮಿಷನ್ ರಹಿತ ಟ್ಯಾಕ್ಸಿ ಟ್ರಿಪ್‌ನಂತಹ ಸೌಲಭ್ಯಗಳನ್ನು ನೀಡುವುದಾಗಿ ಅನೈತಿಕ ಭರವಸೆಗಳನ್ನು ನೀಡಿ ತಮ್ಮತ್ತ ಅಮಾಯಕ ವಾಹನ ಮಾಲೀಕರನ್ನು ಸೆಳೆಯುತ್ತಿದ್ದಾರೆ. ಬಳಿಕ ಅವರ ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ಇದರ ಹಿಂದೆ ಇದೆ. ಈಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹೊರವಲಯದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಟ್ಯಾಕ್ಸಿ ಮಾಲೀಕರನ್ನು ಸೆಳೆಯುವ ಬಹಿರಂಗ ಪ್ರಯತ್ನವೂ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗಿನ ಸ್ಪರ್ಧೆ "ವಿಕ್ಟಿಮೈಸ್ ಆಂಡ್ ಮೊನೊಪಲೈಸ್' ಮಾದರಿಯದು ಎನ್ನುತ್ತಾರೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಹರೀಶ್ ಕುಮಾರ್. [ದೆಹಲಿ ಅತ್ಯಾಚಾರಕ್ಕೆ ಯಾರು ಹೊಣೆ?]

Taxi owners, drivers protest against unhealthy price war

ಪ್ರಯಾಣಿಕರಿಗೆ ಮೋಸ ಸಂಭವ:

ಈ ದರ ಸಮರಕ್ಕೆ ಇಳಿದ ಟ್ಯಾಕ್ಸಿಗಳಿಗೆ ಕೇಳಿದ ಸಮಯಕ್ಕೆ ಟ್ಯಾಕ್ಸಿ ಒದಗಿಸುವ ಸಾಮರ್ಥ್ಯ ಇಲ್ಲದೆ ಪ್ರಯಾಣಿಕರನ್ನು ನಿರಾಸೆಗೊಳಿಸುವುದು ನಿಶ್ಚಿತ. ಇ-ವಾಲೆಟ್ ಎಂಬ ಪದ್ಧತಿ ಸೃಷ್ಟಿಸಿ ಪ್ರಯಾಣಿಕರಿಂದ ಮುಂಚಿತವಾಗಿ ಒಂದು ಮೊತ್ತದ ಹಣ ಪಡೆದು ನಂತರ ಈ ಪ್ರಯಾಣಿಕರಿಗೆ ಕೇಳಿದ ಸಮಯಕ್ಕೆ ವಾಹನ ಒದಗಿಸದೆ ಕುಂಟು ನೆಪ ಹೇಳಿ ಅವರನ್ನು ಮೋಸಗೊಳಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಬೆಂಗಳೂರು ಕ್ಯಾಬ್ಸ್‌ನ ಚಂದ್ರಶೇಖರ್.

Taxi owners, drivers protest against unhealthy price war

ಜವಾಬ್ದಾರಿಯಿಂದ ನುಣುಚುವ ಪ್ರಯತ್ನ:

ಟ್ಯಾಕ್ಸಿ ದರ ಸಮರದಿಂದಾಗಿ ವ್ಯವಸ್ಥೆ ರಹಿತ ವ್ಯವಹಾರ ಆರಂಭವಾಗುತ್ತದೆ. ಅದರಿಂದ ಭಾರಿ ಗೊಂದಲ ಉಂಟಾಗಿ ಬಹಳ ದೊಡ್ಡ ವರ್ಗಕ್ಕೆ ನಷ್ಟ ಉಂಟಾಗಲಿದೆ. ನಷ್ಟದಿಂದ ಒತ್ತಡ, ಒತ್ತಡದಿಂದ ಅನಾರೋಗ್ಯ, ಅನಾರೋಗ್ಯದಿಂದ ಅಧಿಕ ವೆಚ್ಚ, ಅಧಿಕ ವೆಚ್ಚದಿಂದ ಸಾಲ, ಸಾಲಗಾರರ ನಿರ್ದಯ ಸುಲಿಗೆಗೆ ಸಿಕ್ಕ ಕುಟುಂಬ ಬೀದಿಪಾಲು... ಸಮಸ್ಯೆಯ ವಿಷ ವರ್ತುಲವೇ ಸುತ್ತಿಕೊಳ್ಳತೊಡಗಿದೆ ಎಂದು ಸಂಘದ ಗೌರವಾಧ್ಯಕ್ಷ ಟಿ ಪ್ರಭಾಕರ್ ಸೇರಿದಂತೆ ಹಲವು ಟ್ಯಾಕ್ಸಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

Taxi owners, drivers protest against unhealthy price war

ಅಂದು ಅಧಿಕ ಸುಲಿಗೆ, ಇಂದು ರಿಯಾಯಿತಿ ಕೊಡುಗೆ :
ಇದೀಗ ರಿಯಾಯಿತಿಯಲ್ಲಿ ಟ್ಯಾಕ್ಸಿ ಸೇವೆ ಒದಗಿಸುತ್ತಿರುವವರು ಇತ್ತೀಚಿನವರೆಗೂ ಅಧಿಕ ಹಣವನ್ನು ಗ್ರಾಹಕರಿಂದ ಸುಲಿಯುತ್ತಿದ್ದವರು. ಹಿಂದೆ 10 ಕಿ.ಮೀ. ಪ್ರಯಾಣಕ್ಕೆ 250 ರೂಪಾಯಿ ದರ ನಿಗದಿಯಾಗಿದ್ದರೆ, ಇಂದಿನ ಈ ರಿಯಾಯಿತಿ ಕೊಡುಗೆಯಿಂದಾಗಿ 133 ರೂಪಾಯಿಗೆ ಅದೇ ಸೇವೆ ಒದಗಿಸುತ್ತಿದ್ದಾರೆ. ಈ ಆಮಿಷವೆಲ್ಲ ಎಷ್ಟು ದಿನ?

ಒಂದು ಬಾರಿ ಗ್ರಾಹಕರನ್ನು ಮತ್ತು ಟ್ಯಾಕ್ಸಿ ಮಾಲೀಕರನ್ನು, ಚಾಲಕರನ್ನು ಸೆಳೆದ ಬಳಿಕ ಅವರ ನಿಜಬಣ್ಣ ಬಯಲಿಗೆ ಬರುವುದು ನಿಶ್ಚಿತ. ಅಷ್ಟು ಹೊತ್ತಿಗೆ ಸಾಂಪ್ರದಾಯಿಕ ಟ್ಯಾಕ್ಸಿ ಮಾಲೀಕರು, ಚಾಲಕರು ಬಹಳ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಯಾವುದೇ ಹೊಣೆಗಾರಿಕೆ ಹೊರಲು ಸಿದ್ಧರಿಲ್ಲದ ಇಂತಹ ಕಂಪೆನಿಗಳು ಗೋಪ್ಯ ಕಾರ್ಯತಂತ್ರವನ್ನು ಸರ್ಕಾರ ತಕ್ಷಣ ತಿಳಿದುಕೊಂಡು ಈ ಅಪಾಯಕಾರಿ ದರ ಸಮರಕ್ಕೆ ತೆರೆ ಎಳೆಯಬೇಕು ಎಂಬುದು ಸಂಘದ ಎಲ್ಲ ಪದಾಧಿಕಾರಿಗಳ ಒತ್ತಾಯ.

English summary
Taxi owners, drivers, operators protested in Bengaluru against unhealthy price war by pulling the taxi by hand. They say that some taxi operators are stealing the bread and butter by reducing the fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X