ಬೆಳ್ಳಂದೂರು ಕೆರೆ ನೊರೆ ಸಮಸ್ಯೆ ಬಗೆಹರಿಸಿ : ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 02 : ಬೆಳ್ಳಂದೂರು ಕೆರೆಯ ನೊರೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳೇನು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ನಗರ ಪ್ರದಕ್ಷಿಣೆಯ ಪ್ರಗತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಇದುವರೆಗೂ ನಡೆಸಿದ ನಗರ ಪ್ರದಕ್ಷಿಣೆಗಳ ಸಂದರ್ಭದಲ್ಲಿ ತಾವು ನೀಡಿದ ಸೂಚನೆ ಮತ್ತು ಆದೇಶದ ಜಾರಿ ಬಗ್ಗೆ ಅಧಿಕಾರಿಗಳಿಂದ ಸಮಗ್ರವಾಗಿ ಮುಖ್ಯಮಂತ್ರಿಗಳು ಮಾಹಿತಿ ಪಡೆದು ಕೊಂಡರು. [ಸಿಎಂ ಗಮನ ಸಳೆದ ಬೆಳ್ಳಂದೂರು ಕೆರೆ]

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸುಮಾರು 40 ಪುಟಗಳ ವರದಿಯನ್ನು ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಜಿ.ಕುಮಾರ ನಾಯಕ್ ಅವರು ಸಲ್ಲಿಸಿದರು. [ಬೆಳ್ಳಂದೂರು ಕೆರೆ ಶುದ್ಧ ಮಾಡಲು ಸಹಿ ಹಾಕಿ]
ಕೆರೆಯ ಸಮಸ್ಯೆ ಬಗೆಹರಿಸಿ : ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಬೆಳ್ಳಂದೂರು ಕೆರೆ ನೊರೆಯಿಂದ ಉಂಟಾಗಿರುವ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ಸೂಚನೆ ನೀಡಿದರು. ಇದಕ್ಕೆ ವಿವರಣೆ ನೀಡಿದ ಅಧಿಕಾರಿಗಳು, ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕೆ ಮೂರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.[ರಸ್ತೆಗೆ ಬಂತು ಬೆಳ್ಳಂದೂರು ಕೆರೆ ನೊರೆ]
ನೊರೆಯ ಮೇಲೆ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ನೊರೆ ಹಾರಿ ಬರದಂತೆ ತಡೆಯಲು ಮೆಷ್ ಅಳವಡಿಸಲಾಗುತ್ತಿದೆ. ಜೊತೆಗೆ ಕೋಡಿ ಜಾಗದಲ್ಲಿ ಕೊಳಚೆ ನೀರು ಸುಮಾರು 6 ಅಡಿ ಎತ್ತರದಿಂದ ಬೀಳುತ್ತಿದೆ. ಇದರಿಂದ ನೊರೆ ಹೆಚ್ಚಾಗುತ್ತಿದೆ. ಕೋಡಿಯ ಎತ್ತರವನ್ನು ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಹರಿದು ಬರುತ್ತಿದೆ. ಇದನ್ನು ತಡೆಯಲು ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು 4 ಕಡೆ ಸ್ಥಾಪಿಸಲಾಗುತ್ತಿದೆ. ಇದಕ್ಕೆ 350 ಕೋಟಿ ರೂ. ವೆಚ್ಚವಾಗಲಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 100 ಕೋಟಿ ರೂ. ಒದಗಿಸಲಿದೆ. ಉಳಿದ ಅನುದಾನವನ್ನು ಕೇಂದ್ರದ ಅಮೃತ್ ಯೋಜನೆಯಲ್ಲಿ ಕೋರಲಾಗುವುದು ಎಂದು ಅಧಿಕಾರಿಗಳು ಹೇಳಿದರು.












Click it and Unblock the Notifications