ಬೆಂಗಳೂರಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಶುರು, ಏನಿದು ?
ಬೆಂಗಳೂರಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಶುರುವಾಗಿದೆ. ಈ ಅಭಿಯಾನವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಇದೀಗ ಸ್ವಚ್ಛ ಸರ್ವೇಕ್ಷಣ್ - 2024 ಅಭಿಯಾನದಡಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಸ್ವಚ್ಛ ಸರ್ವೇಕ್ಷಣ್ 2024 ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ. ನಮ್ಮ ನಗರದ ಸ್ವಚ್ಛತೆಯ ಗುಣಮಟ್ಟವನ್ನು ಸುಧಾರಿಸಲು ಜನರು ಭಾಗವಹಿಸುವಿಕೆ ಅತಿಮುಖ್ಯವಾಗಿದೆ.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು(ಎಂಒಎಚ್‌ಯುಎ) ಸ್ವಚ್ಛ ಸರ್ವೇಕ್ಷಣೆಯನ್ನು ನಡೆಸುತ್ತಿದೆ. ಇದು 15ನೇ ಫೆಬ್ರವರಿ 2025 ರಿಂದ 31ನೇ ಮಾರ್ಚ್ 2025 ರವರೆಗೆ ನಮ್ಮ ದೇಶದಾದ್ಯಂತ ಇರುವಂತಹ ಎಲ್ಲಾ ನಗರಗಳಲ್ಲಿಯೂ ಆಯೋಜಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ ವತಿಯಿಂದ ವಾರ್ಷಿಕವಾಗಿ ಕೈಗೊಳ್ಳಲಾಗುತ್ತಿರುವ ದೇಶದ ಅತೀದೊಡ್ಡ ಸ್ವಚ್ಚತೆಯ ಸಮೀಕ್ಷೆಯಾದ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಗರದ ಕುರಿತು ಸಾರ್ವಜನಿಕರ ಅಭಿಪ್ರಾಯಗಳನ್ನು ವಿವಿಧ ವೇದಿಕೆಗಳಿಂದ ಪ್ರತಿವರ್ಷ ಸಂಗ್ರಹಿಸಲಾಗುತ್ತಿದೆ.
ಸ್ವಚ್ಛ ಸರ್ವೇಕ್ಷಣ್ 2024ರ ಒಂದು ಪ್ರಮುಖ ಅಂಶವೆಂದರೆ ನಗರದಲ್ಲಿ ಮತ್ತು ನಿರ್ದಿಷ್ಟವಾಗಿ ನಿಮ್ಮ ನೆರೆಹೊರೆಯಲ್ಲಿ ಸ್ವಚ್ಛತೆಯನ್ನು ಸಾಧಿಸುವಲ್ಲಿ ನಿಮ್ಮ ನಗರವು ಸಾಧಿಸಿದ ಪ್ರಗತಿಯ ಕುರಿತು ಜನರಿಂದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವುದೇ ಆಗಿದೆ. ಪ್ರಸ್ತುತ ಸಾಲಿನ ಸ್ವಚ್ಛ ಸರ್ವೇಕ್ಷಣ್-2024 ಸಮೀಕ್ಷೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಅದರಂತೆ, ವೆಬ್ ಲಿಂಕ್ ಹಾಗೂ ಮೊಬೈಲ್ ಅಫ್ಲಿಕೇಶನ್ ಲಿಂಕ್‌ಗಳ ಮೂಲಕ ನಗರದ ಎಲ್ಲಾ ಸಾರ್ವಜನಿಕರು ತಮ್ಮ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಬಹುದಾಗಿದೆ.
ಸಾರ್ವಜನಿಕರು ಕೆಳಗೆ ನೀಡಿರುವ ಲಿಂಕ್‌ನ ಮೂಲಕ ಪೋರ್ಟಲ್ ಗೆ ಭೇಟಿ ನೀಡಿ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಯ ವಿವರ:
* ವೆಬ್ ಪೋರ್ಟಲ್‌ಲಿಂಕ್: https://sbmurban.org/feedback
* ಗೆಟ್ ಸ್ಟಾರ್ಟ್(Get Start) ಮೇಲೆ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಭಾಷೆಯನ್ನು ಆಯ್ಕೆಮಾಡಿ
& ಪ್ರಮುಖ ವಿವರಗಳಾದ ರಾಜ್ಯ, ಜಿಲ್ಲೆ, ನಗರ, ಸ್ಥಳದ ಹೆಸರು ಸೇರಿದಂತೆ ಇನ್ನಿತರೆ ವಿಷಯಗಳನ್ನು ಭರ್ತಿ ಮಾಡಿ ಮತ್ತು ಸಮೀಕ್ಷೆಯನ್ನು ಪ್ರಾರಂಭಿಸಿ(Start Survey) ಮೇಲೆ ಕ್ಲಿಕ್ ಮಾಡಿ
* 10 ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ನಂತರ ಸ್ವೀಕರಿಸಿದ OTP ಅನ್ನು ನಮೂದಿಸುವ ಮೂಲಕ ಫಾರ್ಮ್ಅನ್ನು ಸಲ್ಲಿಸಿ.
ವೆಬ್ ಪೋರ್ಟಲ್ ಲಿಂಕ್: https://sbmurban.org/feedback
ಮೊಬೈಲ್ ಅಪ್ಲಿಕೇಶನ್ಸ್: Swachhata-MoHUA ಹಾಗೂ SS2024 VoteForYourCity
ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಗರದ ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ನೀಡುವುದು ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಸ್ವಚ್ಚತೆಯ ಸಮೀಕ್ಷೆಯಲ್ಲಿ ಭಾಗವಹಿಸಿ ಸಹಕರಿಸುವಂತೆ BSWML ನ CEO ಹಾಗೂ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ನೋಡಲ್ ಅಧಿಕಾರಿಯಾದ ಡಾ. ಕೆ. ಹರೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಚ್ಛ ಸರ್ವೇಕ್ಷಣ್ ರ‍್ಯಾಂಕಿಂಗ್‌ನಲ್ಲಿ ಜನರ ಅಭಿಪ್ರಾಯ ಸಹ ಕೌಂಟ್ ಆಗಲಿದೆ.












Click it and Unblock the Notifications