Supreme Court: ಕೋಲ್ಕತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ; ಮಂಗಳವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು ದೇಶಾದ್ಯಂತ ಆಕ್ರೋಶ ಹುಟ್ಟುಹಾಕಿದೆ. ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಮಂಗಳವಾರ ವಿಚಾರಣೆ ನಡೆಸಲಿದೆ.
ಈಗಾಗಲೇ ಕೋಲ್ಕತಾ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ಪೊಲೀಸರಿಗೆ ಭಾನುವಾರದವರೆಗೆ ಗಡುವು ಕೊಟ್ಟಿದ್ದರೂ, ಸಿಬಿಐಗೆ ತನಿಖೆಯನ್ನು ವರ್ಗಾಯಿಸುವಂತೆ ಆದೇಶ ನೀಡಿತ್ತು.

ಕೊಲೆಯಾದ ವೈದ್ಯೆಯ ಮೃತದೇಹವನ್ನು ನೋಡಲು ಅವಕಾಶ ಕೊಡಲು ತಡ ಮಾಡಿದ್ದು, ಪೋಸ್ಟ್ ಮಾರ್ಟ್‌ಮ್ ವರದಿ ಮತ್ತು ನಾಗರಿಕ ಸ್ವಯಂ ಸೇವಕನನ್ನು ಶೀಘ್ರದಲ್ಲೇ ಬಂಧಿಸಿ, ಪ್ರಕರಣವನ್ನು ಕ್ಲೋಸ್ ಮಾಡುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪೊಲೀಸರು ನಡೆದುಕೊಂಡ ರೀತಿ ಬಗ್ಗೆ ಪ್ರಶ್ನೆಗಳನ್ನು ಮಾಡಲಾಗಿದೆ.
ವೈದ್ಯೆಯ ಗಾಯದ ಪ್ರಮಾಣವನ್ನು ನೋಡಿದಾಗ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆತುರದಲ್ಲಿ ಶವವನ್ನು ಸುಟ್ಟುಹಾಕಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬಂದಿದ್ದು, ಕೋಲ್ಕತ್ತಾ ಪೊಲೀಸರು ಅದನ್ನು ನಿರಾಕರಿಸಿದ್ದಾರೆ.
ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ಪ್ರಕರಣದಲ್ಲಿ ತಪ್ಪು ಮಾಡಿದವರನ್ನು ರಕ್ಷಣೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ. ಆಗಸ್ಟ್ 15 ರಂದು ಆಸ್ಪತ್ರೆ ಮೇಲೆ ಪುಂಡರ ಗುಂಪೊಂದು ದಾಳಿ ಮಾಡಿ ದಾಂಧಲೆ ನಡೆಸಿದ್ದರು. ದಾಳಿಕೋರರು ತುರ್ತು ಚಿಕಿತ್ಸಾ ವಿಭಾಗವನ್ನು ಧ್ವಂಸಗೊಳಿಸಿದ್ದು, ಇದು ಸಾಕ್ಷ್ಯವನ್ನು ಅಳಿಸುವ ಮತ್ತೊಂದು ಪ್ರಯತ್ನ ಎಂದು ಬಿಜೆಪಿ ಆರೋಪಿಸಿದೆ.
ಸಾಕ್ಷಿಗಳನ್ನು ತಿರುಚಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಕೊಲೆಯಾದ ವೈದ್ಯೆಯ ದೇಹದ ಅಂಗಗಳನ್ನು ಪೊಲೀಸರು ಬದಲಾಯಿಸಿದ್ದಾರೆ ಎಂದು ಹೇಳಿದ್ದು, ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಆಗಸ್ಟ್ 9 ರಂದು ಮುಂಜಾನೆ 31 ವರ್ಷದ ವೈದ್ಯೆ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು.
36 ಗಂಟೆಗಳ ಪಾಳಿಯ ಬಳಿಕ, ಎರಡನೇ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದ ವೈದ್ಯೆ ವಿಶ್ರಾಂತಿ ಪಡೆಯಲು ಖಾಲಿ ಸೆಮಿನಾರ್ ಕೋಣೆಗೆ ತೆರಳಿದ್ದರು. ಆಸ್ಪತ್ರೆಗೆ ಆನ್-ಕಾಲ್ ರೂಮ್ ಇರಲಿಲ್ಲ, ವೈದ್ಯೆ ಅಲ್ಲಿ ವಿಶ್ರಾಂತಿ ಪಡೆಯಲು ಹೋಗಿದ್ದರು ಎಂದು ತಿಳಿದುಬಂದಿದೆ. ಮರುದಿನ ಬೆಳಗ್ಗೆ ಆಕೆ ಶವವಾಗಿ ಪತ್ತೆಯಾಗಿದ್ದು, ದೇಹದ ಮೇಲೆ ಅನೇಕ ಗಾಯದ ಗುರುತುಗಳು ಇದ್ದವು.
ಆರೋಪಿಯೊಬ್ಬನ ಬಂಧನ
ಪ್ರಕರಣದಲ್ಲಿ ಪ್ರಮುಖ ಶಂಕಿತ ಸಂಜೋಯ್ ರಾಯ್ ಎನ್ನುವನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆತ ಕೋಲ್ಕತಾ ಪೊಲೀಸ್ ಇಲಾಖೆಯ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ನೆಲೆಸಿದ್ದು ಎಲ್ಲಾ ಕಡೆಗೂ ಓಡಾಡುತ್ತಿದ್ದ ಎಂದರು.
ವೈದ್ಯೆಯನ್ನು ಕೊಲೆಮಾಡಿರುವ ಕೋಣೆಯೊಳಗೆ ಸಂಜೋತ್ ರಾಯ್ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ಮಹಿಳೆಯ ಶವದ ಪಕ್ಕದಲ್ಲಿ ಬ್ಲೂಟೂತ್ ಹೆಡ್‌ಸೆಟ್ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಆತನ ಕುತ್ತಿಗೆಯಲ್ಲಿ ಇರುವುದು ಕಂಡುಬಂದಿದೆ. ಇದು ಆತನ ಫೋನ್‌ನೊಂದಿಗೆ ಕನೆಕ್ಟ್ ಆಗಿರುವುದು ಕೂಡ ಕಂಡುಬಂದಿದೆ.












Click it and Unblock the Notifications