Lemon Price in Bengaluru : ತರಕಾರಿಗಳು ಬಿಡಿ, ನಿಂಬೆ ಹಣ್ಣಿನ ದರದಲ್ಲಿ ಭಾರೀ ಏರಿಕೆ!
ಬೆಂಗಳೂರು, ಏಪ್ರಿಲ್ 05; ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿ ಜನರನ್ನು ತಟ್ಟಿದೆ. ತಂಪಾದ ನಿಂಬೆ ಹಣ್ಣಿನ ಜ್ಯೂಸ್ ಕುಡಿಯೋಣ ಅಂದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ. ನಿಂಬೆ ಹಣ್ಣಿನ ದರದಲ್ಲಿ ಭಾರೀ ಏರಿಕೆಯಾಗಿದ್ದು, ಜ್ಯೂಸ್ ದರಗಳು ಹೆಚ್ಚಾಗುವ ಸಾಧ್ಯತೆ ಇದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಂಬೆ ಹಣ್ಣಿನ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸುಡುತ್ತಿರುವ ಬೇಸಿಗೆಯ ನಡುವೆ ನಿಂಬೆ ಹಣ್ಣಿಗೆ ಬೇಡಿಕೆಯೂ ಹೆಚ್ಚಾಗಿದ್ದು, ದರವೂ ಏರಿಕೆಯಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ 10 ರೂ.ಗೆ 3-4 ನಿಂಬೆ ಹಣ್ಣು ಸಿಗುತ್ತಿತ್ತು. ಈಗ ಬೆಂಗಳೂರು ನಗರದ ಹಲವು ಕಡೆ ಒಂದು ನಿಂಬೆ ಹಣ್ಣಿನ ಬೆಲೆ 6-7 ರೂ. ಆಗಿದೆ. 20 ರೂ. ನೀಡಿದರೆ ಮೂರು ಲಿಂಬೆ ಹಣ್ಣು ಸಿಗುವುದು ಕಷ್ಟವಾಗಿದೆ.

"ಸಗಟು ಮಾರುಕಟ್ಟೆಯಲ್ಲಿ ಒಂದು ಸಾವಿರ ಹಣ್ಣಿನ ದರ 2,500 ರಿಂದ 3 ಸಾವಿರ ರೂ. ಇರುತ್ತದೆ. ಈಗ 5,500 ರಿಂದ 6 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಇದರಿಂದಾಗಿ ಒಂದು ನಿಂಬೆ ಹಣ್ಣಿನ ದರ 6 ರಿಂದ 7 ರೂ. ಆಗಿದೆ" ಎಂದು ತ್ಯಾಗರಾಜನಗರದ ತರಕಾರಿ ವ್ಯಾಪಾರಿ ಸುಧಾಕರ್ ಹೇಳಿದ್ದಾರೆ.
"6 ಅಥವ 7 ರೂ. ನೀಡಿದರೂ ದೊಡ್ಡ ಗಾತ್ರದ ನಿಂಬೆ ಹಣ್ಣುಗಳು ಸಿಗುತ್ತಿಲ್ಲ. ಚಿಕ್ಕ ನಿಂಬೆ ಹಣ್ಣಿಗೆ ಈ ದರವಿದೆ. ದರ ಏರಿಕೆಗೆ ನಿಖರವಾದ ಕಾರಣ ತಿಳಿದು ಬರುತ್ತಿಲ್ಲ. 15 ದಿನಗಳಿಂದ ದರ ಏರುತ್ತಲೇ ಇದೆ" ಎನ್ನುತ್ತಾರೆ ಸುಧಾಕರ್.
ನಿಂಬೆ ಹಣ್ಣು ಬಹುಉಪಯೋಗಿ. ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅನೇಕ ಶುಭ ಸಮಾರಂಭಗಳಿದ್ದು, ಮತ್ತಷ್ಟು ಬೇಡಿಕೆ ಉಂಟಾಗುವ ನಿರೀಕ್ಷೆ ಇದೆ. ಆದ್ದರಿಂದ ದರದಲ್ಲಿಯೂ ಏರಿಕೆಯಾಗಬಹುದು.
"ಹವಾಮಾನ ಬದಲಾವಣೆಯಿಂದಾಗಿ ಈ ಬಾರಿ ನಿಂಬೆ ಹೂ ಕಡಿಮೆ ಬಂದಿತ್ತು. ಭಾರೀ ಇಬ್ಬನಿ ಸುರಿದ ಕಾರಣ ಹೂಗಳು ಸಹ ಉದುರಿ ಹೋಗಿವೆ. ಆದ್ದರಿಂದ ಇಳುವರಿ ಕಡಿಮೆಯಾಗಿ ಬೆಲೆ ಗಗನಕ್ಕೆ ಹೋಗಿರಬಹುದು" ಎಂದು ಶಿವಮೊಗ್ಗದ ತೋಟದಲ್ಲಿ ನಿಂಬೆ ಹಣ್ಣು ಬೆಳೆಯುವ ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ವಿಜಯಪುರದಲ್ಲಿ ಉತ್ತಮ ಗುಣಮಟ್ಟದ ಒಂದು ಮೂಟೆ ನಿಂಬೆ ಹಣ್ಣು 10 ಸಾವಿರದ ತನಕ ಮಾರಾಟವಾಗಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿಯೂ ಸಹ ಇಷ್ಟು ದರ ಸಿಕ್ಕಿರಲಿಲ್ಲ ಎಂದು ರೈತರು ಹೇಳುತ್ತಾರೆ.
ಇಂಡಿ, ಚಡಚಣ, ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ ಸೇರಿದಂತೆ ಹಲವು ಕಡೆ ನಿಂಬೆ ಹೆಚ್ಚಾಗಿ ಬೆಳೆಯುತ್ತಾರೆ. ರೈತರ ಜಮೀನಿಗೆ ತೆರಳಿ ನಿಂಬೆ ಹಣ್ಣನ್ನು ಖರೀದಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯದಲ್ಲಿಯೂ ನಿಂಬೆ ಹಣ್ಣಿನ ದರದಲ್ಲಿ ಏರಿಕೆಯಾಗಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಿಂಬೆ ಹಣ್ಣಿನ ದರ ಕೆಜಿಗೆ 200 ರೂ. ತನಕ ಇದೆ. 50 ರಿಂದ 60 ರೂ. ಇರುತ್ತಿದ್ದ ದರ 200 ತನಕ ತಲುಪಲು ಕಾರಣವೇನು? ಎಂದು ವ್ಯಾಪಾರಿಗಳು ಆಲೋಚಿಸುತ್ತಿದ್ದಾರೆ.
ಅಕಾಲಿಕ ಮಳೆ, ರೋಗ ಬಾಧೆ, ಉತ್ಪಾದನೆ ಕುಸಿತ ಕಂಡಿರುವ ಪರಿಣಾಮ ಇತರ ಎಲ್ಲಾ ತರಕಾರಿಗಳಿಗಿಂತ ನಿಂಬೆ ಹಣ್ಣಿನ ಬೆಲೆಗಳು ಏರಿಕೆಯಾಗಿವೆ. ಕೋವಿಡ್ ಪರಿಸ್ಥಿತಿ ಬಳಿಕ ಮೊದಲ ಬಾರಿಗೆ ನಿಂಬೆ ಹಣ್ಣಿನ ದರದಲ್ಲಿ ಏರಿಕೆಯಾಗಿದ್ದು, ರೈತರಿಗೆ ಸಂತಸ ತಂದಿದೆ. ಏಪ್ರಿಲ್ 15ರ ಬಳಿಕ ಮತ್ತು ಮೇ ತಿಂಗಳಿನಲ್ಲಿ ದರದಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.












Click it and Unblock the Notifications