ಶಾಸಕರ ವಿದೇಶ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್
ಬೆಂಗಳೂರು, ಮೇ 6- ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು, ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಕೈಗೊಳ್ಳಬಾರದೆಂದು ಪಕ್ಷದ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ.
ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಸಚಿವರು, ಶಾಸಕರಿಗೆ ಎಐಸಿಸಿ ಈ ಗಂಭೀರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಜನಪ್ರತಿನಿಧಿಗಳ ಇತ್ತೀಚಿನ ವಿದೇಶ ಪ್ರವಾಸಗಳು ಮೋಜಿನ ಪ್ರವಾಸಗಳಾಗಿವೆ. ಅಧ್ಯಯನ ನೆಪದಲ್ಲಿ ವಿದೇಶಗಳಿಗೆ ತೆರಳಿ ಅನಗತ್ಯ ಕಾಲಹರಣ ಮಾಡುವುದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಿತ್ತರವಾಗುವ ಹಿನ್ನೆಲೆಯಲ್ಲಿ ಎಐಸಿಸಿ ಈ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕು. ಪ್ರವಾಸಗಳನ್ನು ಮೊಟಕುಗೊಳಿಸಬೇಕು. ಈ ಬಗ್ಗೆ ಪಕ್ಷದ ಶಾಸಕರುಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಎಐಸಿಸಿ ಮಾಹಿತಿ ರವಾನಿಸಿದೆ. (ಜೀವಸೆಲೆಗಾಗಿ ಹಾಹಾಕಾರ; ಹಾಲು ಉತ್ಪಾದನೆ ಕುಸಿತ)

ರಾಜ್ಯದಲ್ಲಿ ಮುಂಗಾರು ವಿಳಂಬವಾಗುವ ಸಾಧ್ಯತೆಯಿದೆ. ಬರದ ಛಾಯೆ ಆವರಿಸಿದೆ. ಸಾವಿರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ. ಜನ-ಜಾನುವಾರುಗಳು ತತ್ತರಿಸುತ್ತಿವೆ. ಜನಪ್ರತಿನಿಧಿಗಳು ಖುದ್ದು ಕ್ಷೇತ್ರದಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಮೂಲಕ ಸಾಮಾನ್ಯ ಜನರಿಗೆ ಉದ್ಯೋಗ ಒದಗಿಸಿ ಅವರ ಬದುಕಿಗೆ ನೆರವಾಗಬೇಕು ಎಂದು ಹೇಳಿದೆ.
ಈ ಸೂಚನೆಯನ್ನು ಹೊರತುಪಡಿಸಿ ವಿದೇಶಿ ಪ್ರವಾಸ ಕೈಗೊಳ್ಳುವ ಸಚಿವರು ಮತ್ತು ಪಕ್ಷದ ಶಾಸಕರುಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಕಟ್ಟೆಚ್ಚರ ನೀಡಿರುವ ಅಂಶವೂ ಬೆಳಕಿಗೆ ಬಂದಿದೆ. (ಮಂಡ್ಯದ ರಮ್ಯಾ ಎಲ್ಲಿ ದಣಿವಾರಿಸಿಕೊಳ್ತಿದ್ದಾರೆ?)
ಬರದ ನಡುವೆಯೂ ಶಾಸಕ ತನ್ವೀರ್ ಸೇಠ್ ನೇತೃತ್ವದ 15 ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ವೀರ್ ಸೇಠ್ ನೇತೃತ್ವದ ವಿಧಾಸಭೆ ಭರವಸೆಗಳ ಸಮಿತಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸವನ್ನು ಕೈಬಿಟ್ಟಿತ್ತು.
ಜನ್ಮ ದಿನ ಆಚರಣೆ ಬೇಡವೆಂದ ಡಿಕೆಶಿ:

ರಾಜ್ಯದಲ್ಲಿ ತೀವ್ರ ಬರಗಾಲವಿರುವುದರಿಂದ ಡಿ. 15ರಂದು ತಮ್ಮ ಜನ್ಮ ದಿನಾಚರಣೆ ಆಚರಿಸುವುದು ಬೇಡ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಜನ್ಮ ದಿನದಂದು ಕಾಸಗಿ ಕಾರ್ಕ್ರಮದ ನಿಮಿತ್ತ ಕುಟುಂಬ ಸದಸ್ಯರೊಂದಿಗೆ ತೆರಳುವುದರಿಂದ ಕೇಂದ್ರ ಸ್ಥಾನದಲ್ಲಿ ಲಭ್ಯವಿರುವುದಿಲ್ಲ ಎಂದೂ ಡಿಕೆಶಿ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.












Click it and Unblock the Notifications