Summer: ಬಿಸಿಲಿನಿಂದ ರಕ್ಷಣೆಗೆ ಪೌರ ಕಾರ್ಮಿಕರಿಗೆ ವಿಶೇಷ ಕಿಟ್ ವಿತರಣೆ; ಹೀಟ್-ಹೆಲ್ತ್ ಪ್ರೋಟೋಕಾಲ್ ಜಾರಿ
Bengaluru Summer: ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಹೀಗೆ ಎಲ್ಲ ಕಾಲದಲ್ಲೂ ಬೆಂಗಳೂರು ಸ್ವಚ್ಛತೆಗಾಗಿ ಪೌರ ಕಾರ್ಮಿಕ ದುಡಿಯುತ್ತಲೇ ಇರುತ್ತಾರೆ. ಅವರ ಆರೋಗ್ಯ ಕಾಳಜಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) 'ಹೀಟ್-ಹೆಲ್ತ್ ಪ್ರೋಟೋಕಾಲ್ ಕಾರ್ಯಕ್ರಮ ಜಾರಿ ಮಾಡಿದೆ. ಅದರಡಿಯಲ್ಲಿ ನಗರದ ಪೌರಕಾರ್ಮಿಕರಿಗೆ ತರಬೇತಿ ಹಾಗೂ ಕೂಲಿಂಗ್ ಕಿಟ್ ವಿತರಿಸಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ ಸಿ40 ಸಂಸ್ಥೆಗಳ ಸಹಯೋಗದಲ್ಲಿ, ನಗರದ ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೀಟ್-ಹೆಲ್ತ್ ಪ್ರೋಟೋಕಾಲ್ ಜಾರಿಗೆ ತರಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಮಾಹಿತಿ ನೀಡಿದರು.

ಕಿಟ್‌ನಲ್ಲಿ ಏನೇನಿದೆ?
ಯಲಹಂಕ ನ್ಯೂಟೌನ್‌ನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ತರಬೇತಿ ಹಾಗೂ ಕೂಲಿಂಗ್ ಕಿಟ್ (ಟೆಂಪರೇಚರ್ ಮತ್ತು ಹಿಮಿಡಿಟಿ ಚೆಕ್ಕರ್, ನೆಕ್ ಕಾಲರ್ ಫ್ಯಾನ್, ನೀರು ಕುಡಿಯಲು ಬಾಟಲ್, ಟೋಪಿ, ಹ್ಯಾಂಡ್ ಸ್ಲೀವ್ಸ್) ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಆಶಾ ಕಾರ್ಯಕರ್ತರು, ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ (DWCC) ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಬಿಸಿಲಿನ ಪರಿಣಾಮಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
ಪೈಲಟ್ ಹಂತದಲ್ಲಿ ನಾಗವಾರ (ವಾರ್ಡ್ 23) ಮತ್ತು ಎಚ್‌ಬಿಆರ್ (ವಾರ್ಡ್ 24) ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕೂಲಿಂಗ್ ಕಿಟ್‌ಗಳನ್ನು ನೀಡಲಾಯಿತು. ಬೇಸಿಗೆಯಲ್ಲಿ ರಣ ಬಿಸಿಲಿನ ಕಾವು ಹೆಚ್ಚುತ್ತಿದ್ದು ಆರೋಗ್ಯ ಕಾಳಜಿ ವಹಿಸುವಂತೆ ಸಲಹೆ ನೀಡಲಾಯಿತು.
ಎಲ್ಲ ಪೌರ ಕಾರ್ಮಿಕರಿಗೂ ಕಿಟ್ ಶೀಘ್ರ: ಆಯುಕ್ತರು
ಇದೇ ವೇಳೆ ಮಾತನಾಡಿದ ಆಯುಕ್ತರು, ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಪ್ರಸ್ತುತ ಪೈಲಟ್ ಹಂತದಲ್ಲಿ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪೌರಕಾರ್ಮಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಹೆಚ್ಚಿನ ಶ್ರಮ ವಹಿಸಬೇಕು. ಬಿಸಿಲು, ಮಳೆ, ಚಳಿ ಎನ್ನದೇ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಸೂಚಿಸಿದರು. 'ಸರ್ಕಾರದ ಕೆಲಸ ದೇವರ ಕೆಲಸ' ಎಂಬ ಮನೋಭಾವದಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಇನ್ನೂ ತರಬೇತಿ ಕಾರ್ಯಕ್ರಮದಲ್ಲಿ ಬಿಸಿಲಿನ ಆರೋಗ್ಯದ ಮೇಲೆ ಬೀರುವ ಪರಿಣಾಮ, ತಾಪಮಾನ ಅಂದಾಜು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ನಗರದ ಸ್ವಚ್ಛತೆ ನಿರ್ವಹಿಸುವ ಪೌರ ಕಾರ್ಮಿಕರ ಆರೋಗ್ಯ ಕಾಳಜಿ ನಮ್ಮ ಆದ್ಯತೆ ಎಂದು ಅಧಿಕಾರಿಗಳು ಹೇಳಿದರು.














Click it and Unblock the Notifications