ವಿಧಾನಸೌಧದ ಮುಂದೆ ಆತ್ಮಹತ್ಯೆ ಹೈಡ್ರಾಮ
ಬೆಂಗಳೂರು, ಫೆ.21 : ನಿವೃತ್ತ ಎಸಿಪಿಯೊಬ್ಬರು ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ಕಿರುಕುಳ ನೀಡುತ್ತಿದ್ದು, ನಮಗೆ ನ್ಯಾಯ ದೊರೆಯದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಒಂದೇ ಕುಟುಂಬದ 6 ಮಂದಿ ಕೈಯಲ್ಲಿ ಪೆಟ್ರೋಲ್ ಟ್ಯಾಂಕ್ ಹಿಡಿದು ವಿಧಾನಸೌಧದ ಮುಂದೆ ಕಾರಿನಲ್ಲಿ ಕುಳಿತಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಅವರ ಮನವೊಲಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 9.15ರ ಸುಮಾರಿಗೆ ಕಾರಿನಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದೆ ಆಗಮಿಸಿರುವ ತುಮಕೂರು ಮೂಲದ 6 ಮಂದಿ ಕಾರಿನಲ್ಲಿ ಪೆಟ್ರೋಲ್ ಕ್ಯಾನ್ ಕೈಯಲ್ಲಿ ಹಿಡಿದು ಕುಳಿತಿದ್ದು, ತಮಗೆ ನ್ಯಾಯ ದೊರೆಯದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸಹ ಆಗಮಿಸಿದರು.

ತುಮಕೂರಿನ ಕೆ.ಆರ್.ಬಡಾವಣೆ ನಿವಾಸಿಗಳಾದ ಎಸ್.ದಾಕ್ಷಾಯಿಣಿ, ಆಕೆಯ ಪತಿ ಕೆ.ಮಹೇಶ್ ಹಾಗೂ ಮಕ್ಕಳಾದ ವಿದ್ಯಾ ಮತ್ತು ಚಂದನ್ ಆತ್ಮಹತ್ಯೆಗೆ ಯತ್ನಿಸಿದವರು. ಇವರ ಮನವೊಲಿಸಲು ಪೊಲೀಸರು ಯಶಸ್ವಿಯಾಗಿದ್ದು, ಅವರನ್ನು ಕಾರಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. [ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು]
ಕಾರಿನಲ್ಲಿದ್ದ ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ಮಾಡುವ ಸಾಧ್ಯತೆ ಇದೆ. ಶುಕ್ರವಾರ ಮುಂಜಾನೆ ವಿಧಾನಸೌಧದ ಮುಂದೆ ನಡೆದ ಆತ್ಮಹತ್ಯೆ ಯತ್ನದ ಪ್ರಕರಣದಿಂದ ಸ್ಥಳದಲ್ಲಿ ಕೆಲವು ನಿಮಿಷ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಏನಿದು ಪ್ರಕರಣ : ತುಮಕೂರಿನ ಅರಕೆರೆ ಗ್ರಾಮದ ದಾಕ್ಷಾಯಿಣಿ, ಕೆ.ಮಹೇಶ್ ದಂಪತಿ ಕೆ.ಆರ್.ಬಡಾವಣೆಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ದಾಕ್ಷಾಯಿಣಿ ಸೋದರರಾದ ಕಾಂತರಾಜು ಮತ್ತು ಸೋಮಶೇಖರ್ ಅರಕೆರೆಯಲ್ಲಿ ಆಸ್ತಿ ಮಾಡೋಣ ಎಂದು, ದಾಕ್ಷಾಯಿಣಿ ಮತ್ತು ಮಹೇಶ್ ರಿಂದ 45 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬುದು ಆರೋಪ.
ಸೋದರರ ವಂಚನೆ ಕುರಿತು 2010ರಲ್ಲಿ ತುಮಕೂರು ಸಿವಿಲ್ ಕೋರ್ಟ್‌ನಲ್ಲಿ ದಾಕ್ಷಾಯಿಣಿ ದೂರು ನೀಡಿದ್ದರು. ಆದರೆ, ತುಮಕೂರು ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ನಗರದಲ್ಲಿ ಎಸಿಪಿಯಾಗಿ ನಿವೃತ್ತವಾಗಿರುವ ಸುಬ್ಬಣ್ಣ ಮಧ್ಯಪ್ರವೇಶಿಸಿ ದೂರನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಪೊಲೀಸರು ಸಂಧಾನ ನಡೆಸುತ್ತಾರೆ ಎಂದು ದಾಕ್ಷಾಯಿಣಿ ಅವರು ದೂರು ವಾಪಸ್ ಪಡೆದಿದ್ದಾರೆ.
ಆದರೆ, ಎಸಿಪಿ ಮತ್ತು ಪೊಲೀಸರು ಸೋದರರರಿಂದ ಹಣಪಡೆದು, ಈಗ ದಾಕ್ಷಾಯಿಣಿ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ. 2013ರ ಫೆ.21ರಂದು ದಾಕ್ಷಾಯಿಣಿ ಕುಟುಂಬ ಮಾಧ್ಯಮಗಳ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ನಂತರ ಶೀಘ್ರವೇ ವಿವಾದ ಇತ್ಯರ್ಥಪಡಿಸುವುದಾಗಿ ಸುಬ್ಬಣ್ಣ ಭರವಸೆ ನೀಡಿದ್ದರು.
ಈಗ ನಿವೃತ್ತಿಯಾಗಿರುವ ಸುಬ್ಬಣ್ಣ ಅವರು ನನಗೂ ನಿಮ್ಮ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ, ಎಂದು ದಂಪತಿಗಳನ್ನು ವಂಚಸುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ದಾಕ್ಷಾಯಿಣಿ ಕುಟುಂಬದವರು ಆರೋಪಿಸಿದ್ದಾರೆ. ಆದ್ದರಿಂದ ಪೊಲೀಸರಿಂದ ನಮಗೆ ರಕ್ಷಣೆ ಕೊಡಿ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಶುಕ್ರವಾರ ವಿಧಾನಸೌಧ ಮುಂದೆ ಬಂದಿದ್ದರು.
ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು : ಜೂನ್ 19 2013ರಂದು ಇದೇ ಕಟುಂಬ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಂತರ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಎಲ್ಲರ ಜೀವ ಉಳಿದಿತ್ತು.












Click it and Unblock the Notifications