ಬೆಂಗಳೂರು ಸಬ್ ಅರ್ಬನ್ ರೈಲು ಕಾಮಗಾರಿ ಮಾ.31ಕ್ಕೆ ಆರಂಭ
ಬೆಂಗಳೂರು, ಮಾರ್ಚ್ 09: ಬೆಂಗಳೂರು ಸಬ್ ಅರ್ಬನ್ ರೈಲು ಕಾಮಗಾರಿ ಯಾವಾಗ ಆರಂಭ? ಎಂಬುದು ನಗರದ ಲಕ್ಷಾಂತರ ಜನರ ಪ್ರಶ್ನೆ. ನಗರದಲ್ಲಿನ ವಾಹನ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಯೋಜನೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದರೂ ಕಾಮಗಾರಿಗೆ ಚಾಲನೆ ಸಿಕಿಲ್ಲ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ಆರ್. ರಾಥೋಡ್ ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ವಸತಿ, ಮೂಲ ಸೌಲಭ್ಯ ಖಾತೆ ಸಚಿವರಾದ ವಿ. ಸೋಮಣ್ಣ ಉತ್ತರ ನೀಡಿದ್ದಾರೆ. ಮಾರ್ಚ್ 31ಕ್ಕೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.
"ಯೋಜನೆ ಕಾಮಗಾರಿಗೆ ನಾವು ಟೆಂಡರ್ ಕರೆದಿದ್ದೇವೆ. ತಾಂತ್ರಿಕ ಬಿಡ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾರ್ಚ್ 31ರ ವೇಳೆಗೆ ಉಪ ನಗರ ರೈಲು ಯೋಜನೆ ಕಾರಿಡಾರ್ -2 ಚಿಕ್ಕಬಣಾವರ-ಬೈಯಪ್ಪನಹಳ್ಳಿ ಮಾರ್ಗದ ಕಾಮಗಾರಿ ವರ್ಕ್ ಆರ್ಡರ್ ನೀಡಲಾಗುತ್ತದೆ" ಎಂದು ಸಚಿವರು ತಿಳಿಸಿದರು.

ಬೆಂಗಳೂರು ಉಪ ನಗರ ರೈಲು ಯೋಜನೆಗೆ ಒಪ್ಪಿಗೆ ಸಿಕ್ಕಿ 500 ದಿನಗಳು ಕಳೆದಿವೆ. ಆದರೆ ಸರ್ಕಾರ ಏಕೆ ಯೋಜನೆ ವಿಳಂಬ ಮಾಡುತ್ತಿದೆ? ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದರು.
ಸಚಿವ ಸೋಮಣ್ಣ ಇದಕ್ಕೆ ಉತ್ತರ ನೀಡಿ, "ಭೂ ಸ್ವಾಧೀನದ ಸಮಯದಲ್ಲಿ ಉಂಟಾದ ಗೊಂದಲದಿಂದ ಯೋಜನೆ ತಡವಾಯಿತು. ಯೋಜನೆಯ ಶಂಕು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಲಿದ್ದೇವೆ" ಎಂದು ಹೇಳಿದರು.
"ಭೂ ಸ್ವಾಧೀನ, ಮಾರ್ಗಗಳ ಸ್ಥಳಾಂತರ, ಮಾರ್ಗದ ನಕ್ಷೆ ಈಗಾಗಲೇ ಅಂತಿಮಗೊಂಡಿದೆ. ಕಾರಿಡಾರ್ 2 ಕಾಮಗಾರಿ ಆರಂಭಿಸಲು ಅಗತ್ಯವಿರುವ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ" ಎಂದು ವಿ. ಸೋಮಣ್ಣ ಉತ್ತರ ನೀಡಿದರು.
ಬೆಂಗಳೂರು ಉಪ ನಗರ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆಗೆ ತಲಾ ಶೇ 20ರಷ್ಟು ಅನುದಾನ ನೀಡುತ್ತಿವೆ ಉಳಿದ ಅನುದಾನವನ್ನು ಸಾಲದ ರೂಪದಲ್ಲಿ ಪಡೆದು ಯೋಜನೆ ಜಾರಿಗೊಳಿಸಲಾಗುತ್ತಿದೆ.
ಉಪ ನಗರ ರೈಲು ಯೋಜನೆ; ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. ಕಾರಿಡಾರ್-2 ಚಿಕ್ಕಬಾಣಾವರ-ಬೈಯಪ್ಪನಹಳ್ಳಿ ಮಾರ್ಗದ ಉದ್ದ 25.01 ಕಿ. ಮೀ. ಇದೆ.
ಈ ಮಾರ್ಗದಲ್ಲಿ ಚಿಕ್ಕಬಾಣಾವರ, ಶೆಟ್ಟಿಹಳ್ಳಿ, ಜಾಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ನಾಗವಾರ, ಬಾಣಸವಾಡಿ, ಬೈಯಪ್ಪನಹಳ್ಳಿ ನಿಲ್ದಾಣಗಳಿವೆ.
ಉಳಿದಂತೆ ಕಾರಿಡಾರ್ 1 ಬೆಂಗಳೂರು ನಗರ-ದೇವನಹಳ್ಳಿ (41.40 ಕಿ. ಮೀ.), ಕಾರಿಡಾರ್ 3 ಕೆಂಗೇರಿ-ಬೈಯಪ್ಪನಹಳ್ಳಿ ( 36.12 ಕಿ. ಮೀ). ಕಾರಿಡಾರ್ 4 ಹೀಗಲಿಗೆ-ರಾಜಾನಕುಂಟೆ (46.24 ಕಿ. ಮೀ.) ಇದೆ.
2018ರಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಉಪ ನಗರ ರೈಲು ಯೋಜನೆ ಪ್ರಸ್ತಾವನೆ ಸಿದ್ಧಪಡಿಸಿತ್ತು. 23,093 ಕೋಟಿ ರೂ. ಯೋಜನೆ ಇದಾಗಿತ್ತು. ಬಳಿಕ ಯೋಜನೆ ವೆಚ್ಚವನ್ನು ಪರಿಷ್ಕರಣೆ ಮಾಡಲಾಯಿತು. ಪರಿಷ್ಕೃತ ಅಂದಾಜು ವೆಚ್ಚ 19,000 ಕೋಟಿ ರೂ.ಗಳು.
ಇಡೀ ಉಪ ನಗರ ರೈಲು ಯೋಜನೆಯ ಕಾಮಗಾರಿ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 103 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಒಟ್ಟು 57 ನಿಲ್ದಾಣಗಳಿವೆ.
2014ರ ರೈಲ್ವೆ ಬಜೆಟ್‌ನಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಪ್ರಸ್ತಾಪ ಮಾಡಲಾಯಿತು. 2017ರಲ್ಲಿ ರೈಲ್ವೆ ಮಂಡಳಿ ಅಧಿಕೃತ ಡಿಪಿಆರ್ ಸಿದ್ದಪಡಿಸಲು ಒಪ್ಪಿಗೆ ನೀಡಿತು. 2019ರಲ್ಲಿ ರೈಟ್ಸ್ ಸಂಸ್ಥೆ ಸರ್ಕಾರಕ್ಕೆ ವಿಸ್ತೃತ ಯೋಜನೆ ವರದಿ ಸಲ್ಲಿಕೆ ಮಾಡಿತು. ಬಳಿಕ ವೆಚ್ಚ ಕಡಿತಕ್ಕೆ ಸೂಚನೆ ನೀಡಲಾಯಿತು. 2020ರ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗೆ ಬಳಿಕ ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯೂ ಸಿಕ್ಕಿತು.












Click it and Unblock the Notifications