New Year celebrations: ಹೊಸ ವರ್ಷಾಚರಣೆಗೆ ಏನೆಲ್ಲ ರೂಲ್ಸ್ ಜಾರಿ? ಕಮೀಷನರ್ ಮಾಹಿತಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿರುವ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಮಹತ್ವದ ಸೂಚನೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಈ ಬಾರಿ ಹೊಸ ವರ್ಷಾಚರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 31ರಂದು ರಾತ್ರಿ ಒಂದು ಗಂಟೆಯ ಒಳಗಾಗಿ ನಗರದ ಎಲ್ಲ ರೆಸ್ಟೋರೆಂಟ್, ಹೋಟೆಲ್ ಮತ್ತು ಪಬ್ಗಳನ್ನು ಬಂದ್ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಅಂದು ಫ್ಲೈಓವರ್‌ಗಳ ಮೇಲೆಯೂ ಕೆಲವರು ಹುಚ್ಚಾಟ ಮೆರೆಯುವ ಸಾಧ್ಯತೆ ಇರುವುದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಸೇತುವೆ ಸೇರಿದಂತೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

ಪಾರ್ಟಿಗಳ ಹೆಸರಲ್ಲಿ ಡ್ರಗ್ಸ್ ಸೇವನೆ ಮಾಡುವವರ ಬಗ್ಗೆಯೂ ಹದ್ದಿನಕಣ್ಣಿಡಲಾಗಿದೆ. ಈ ಸಂಬಂಧ ಈಗಾಗಲೇ ಮೂವರು ವಿದೇಶಿ ಡ್ರಗ್ ಪೆಡ್ಲರ್‌ಗಳು ಸೇರಿದಂತೆ 70 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹೊಸವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ. ಅಂದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಒನ್‌ವೇ ಸಂಚಾರಕ್ಕೆ ಮಾತ್ರವೇ ಅವಕಾಶವಿರುತ್ತೆ. ಇನ್ನು ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಕೂಡ ಬಂದ್ ಆಗಲಿದೆ. ಸಾರ್ವಜನಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯಬಹುದು ಎಂದು ಹೇಳಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಹೊರವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, ಸೇರಿದಂತೆ ಹಲವೆಡೆ ಜನ ಹೆಚ್ಚಾಗಿ ಸೇರುವುದರಿಂದ ಈ ಭಾಗಗಳಲ್ಲಿ ಸಿಸಿಟಿವಿ, ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಶ್ವಾನದಳದ ತಪಾಸಣೆಯೂ ಇರುತ್ತದೆ. ಭದ್ರತೆಗಾಗಿ ಇಲ್ಲಿ ಬ್ಯಾರಿಕೇಡ್, ಅಗ್ನಿಶಾಮಕ ದಳ ವಾಹನ ಕೂಡ ಇರುತ್ತದೆ ಎಂದು ಕಮೀಷನರ್ ಹೇಳಿದ್ದಾರೆ.
ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯು ಗುಜರಾತ್‌ನ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 4 ಅಂತರರಾಜ್ಯ ವ್ಯಕ್ತಿಗಳನ್ನು ಬಂಧಿಸಿದೆ. ಇವರು ಡೇಟಾ ಕಳ್ಳತನ ಮತ್ತು ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ (ಸಿಐಬಿ) ಫಾರ್ಮ್‌ಗಳನ್ನು ನಕಲಿ ಸೃಷ್ಟಿ ಮಾಡಿ, ಕಂಪನಿಯ ಖಾತೆಯಿಂದ 17 ಮ್ಯೂಲ್ ಖಾತೆಗಳಿಗೆ ₹12.5 ಕೋಟಿ ರೂಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳು ₹1.28 ಕೋಟಿ ನಗದು, ನಕಲಿ ಸಿಐಬಿ ಫಾರ್ಮ್‌ಗಳು, 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಖಾತೆಗಳಲ್ಲಿನ ₹55 ಲಕ್ಷವನ್ನು ಫ್ರೀಜ್ ಮಾಡಿದ್ದಾರೆ. ಎಚ್ಚರವಾಗಿರಿ! ನಿಮ್ಮ ಡೇಟಾವನ್ನು ರಕ್ಷಿಸಿ, ಮತ್ತು ಸೈಬರ್ ಅಪರಾಧಗಳನ್ನು 1930 ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಕಮೀಷನರ್ ದಯಾನಂದ್ ಹೇಳಿದ್ದಾರೆ.












Click it and Unblock the Notifications