ಬೆಂಗಳೂರು: ರಾಜಕಾಲುವೆ ಒತ್ತುವರಿ ಜಾಗದಲ್ಲಿ ಮನೆ ತೆರವಿಗೆ ಹೈಕೋರ್ಟ್ ತಡೆ
ಬೆಂಗಳೂರು,ಸೆ.14. ರಾಜಕಾಲುವೆ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುನ್ನೇಕೊಳಾಲಿನ ವೀರಪ್ಪರೆಡ್ಡಿ ಬಡಾವಣೆಯಲ್ಲಿರುವ ಎನ್. ಅನೀಲ್ ಎಂಬುವವರ ಮನೆ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮನೆ ಮಾಲೀಕ ಎನ್.ಅನೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರಿಗೆ ನೋಟಿಸ್ ನೀಡದೇ ಅವರ ಮನೆಯನ್ನು ತೆರವುಗೊಳಿಸಬಾರದು ಎಂದು ಬಿಬಿಎಂಪಿಗೆ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲರು, ಕಳೆದ ಮೂರು ತಿಂಗಳ ಹಿಂದೆ ಮುನ್ನೇಕೊಳಲಿನ ವೀರಪ್ಪರೆಡ್ಡಿ ಬಡಾವಣೆಯ ಸರ್ವೇ ನಡೆಸಿದ್ದ ಬಿಬಿಎಂಬಿ ಕಂದಾಯ ವಿಭಾಗದ ಅಧಿಕಾರಿಗಳು ಸರ್ವೇ ನಂಬರ್ 35(1ಬಿ)ರಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಅದು ಖಾಸಗಿ ಸ್ವತ್ತು ಎಂದು ತಿಳಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಸೆ.13ರಂದು ಸರ್ವೇ ನಂ 35(1ಬಿ) ಅನ್ನು ಸರ್ವೇ ನಡೆಸಿದ್ದು, ನಿವೇಶನದಲ್ಲಿ ಮನೆ ನಿರ್ಮಾಣವಾಗಿರುವ ಜಾಗದಲ್ಲಿ ಶೇ.60 ರಷ್ಟು ಭಾಗ ರಾಜಕಾಲುವೆ ಒತ್ತುವರಿಯಾಗಿದೆ ಎಂಬುದಾಗಿ ಗುರುತಿಸಿದ್ದಾರೆ ಎಂದು ತಿಳಿಸಿದರು.
ವಾಸ್ತವವಾಗಿ ಅರ್ಜಿದಾರರು ಕಳೆದ 50 ವರ್ಷದ ಹಿಂದೆ ಈ ನಿವೇಶನ ಖರೀದಿ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಈವರೆಗೂ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಆರೋಪವಿಲ್ಲ. ಆದರೆ, ಇದೇ ಸೆ.13ರಂದು ನಡೆಸಿದ ಸರ್ವೇಯಲ್ಲಿ ಮಾತ್ರ ಒತ್ತುವರಿ ಆರೋಪ ಮಾಡಲಾಗಿದೆ. ಈ ಕುರಿತು ಅರ್ಜಿದಾರರು ಪ್ರಶ್ನಿಸಿದರೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಹಾಗಾಗಿ, ಮನೆಯನ್ನು ಬಿಬಿಎಂಪಿ ತೆರವುಗೊಳಿಸುವ ಸಾಧ್ಯತೆಯಿದೆ ಎಂಬ ಆತಂಕ ಅರ್ಜಿದಾರರಲ್ಲಿ ಮೂಡಿರುವುದಾಗಿ ತಿಳಿಸಿದರು.
ಆ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ನೋಟಿಸ್ ನೀಡದೆ ಅವರ ಮನೆಯನ್ನು ತೆರವುಗೊಳಿಸಬಾರದು ಎಂದು ಬಿಬಿಎಂಪಿಗೆ ಸೂಚಿಸಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿತು.
ಕನ್ನಡ ಬಳಕೆಗೆ ಅಭಿಯಾನ:
ಕರ್ನಾಟಕ ಹೈಕೋರ್ಟ್‌ನಲ್ಲಿ ಇಂಗ್ಲೀಷ್ ಜೊತೆಗೆ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಅನುಷ್ಠಾನ ಮಾಡುವಂತೆ ಒತ್ತಾಯಿಸಿ ವಕೀಲರು ಹಾಗೂ ಕನ್ನಡ ಗೆಳೆಯರ ಬಳಗದ ಪದಾಧಿಕಾರಿಗಳು ಬುಧವಾರ ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಅಭಿಯಾನ ನಡೆಸಿದರು.
'ಹಿಂದಿ ದಿವಸ' ವಿರೋಧಿಸಿ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಅಭಿಯಾನಲ್ಲಿ ವಕೀಲರಿಗೆ ಕರಪತ್ರ ಹಂಚಿಕೆ ಮಾಡುವ ಮೂಲಕ ಹೈಕೋರ್ಟ್‌ನಲ್ಲಿ ಕನ್ನಡ ಅನುಷ್ಠಾನದ ಕುರಿತು ಅರಿವು ಮೂಡಿಸಲಾಯಿತು.
ಈ ವೇಳೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್, ಆಂಗ್ಲ ಭಾಷೆಯ ಜತೆಗೆ ಕನ್ನಡವೂ ಸಂವಿಧಾನಾತ್ಮಕ ಭಾಷೆಯಾಗಿದೆ. ಆದರೆ, ಹೈಕೋರ್ಟ್‌ನಲ್ಲಿ ಇಂಗ್ಲೀಷ್ ಅಧಿಕೃತ ಭಾಷೆಯಾಗಿದೆ. ಇಂಗ್ಲೀಷ್‌ನಲ್ಲಿ ಮಾತ್ರ ವಾದ ಮಂಡನೆಗೆ ಅವಕಾಶವಿದೆ. ಹಾಗಾಗಿ, ವಕೀಲರು ಹಾಗೂ ಕಕ್ಷಿದಾರರಿಗೆ ಕನ್ನಡ ಭಾಷೆಯಲ್ಲಿ ವಾದ ಮಂಡನೆ ಅವಕಾಶ ಕಲ್ಪಿಸಬೇಕಿದೆ. ಕನ್ನಡದಲ್ಲಿಯೇ ವಾದ ಮಂಡನೆಗೆ ಅವಕಾಶ ದೊರೆತಲ್ಲಿ ಸಾಮಾನ್ಯ ಜನತೆಗೆ ಸರಳವಾಗಿ ಅರ್ಥವಾಗಲಿದೆ. ಈ ನಿಟ್ಟಿನಲ್ಲಿ ಸಂವಿಧಾನದ 348ನೇ ವಿಧಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.












Click it and Unblock the Notifications