ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ: ಯುವತಿಯರಿಗೆ ಗಾಯ
ಬೆಂಗಳೂರು: ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಜೆಜೆ ನಗರದಲ್ಲಿ ಈ ಘಟನೆ ಸಂಭವಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತುರ್ತು ಕಾರ್ಯ ಪ್ರವೃತ್ತರಾಗಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಪ್ರಕರಣದ ಹಿನ್ನೆಲೆ ಏನು ಹಾಗೂ ಯಾವ ಕಾರಣಕ್ಕೆ ಈ ಘಟನೆ ನಡೆಯಿತು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳು ಓಂ ಶಕ್ತಿಯೇ, ಆದಿಪರಾಶಕ್ತಿಯೇ.. ಓಂ ಶಕ್ತಿ, ಜಯ ಶಕ್ತಿ ಎಂದು ಶಕ್ತಿ ದೇವಿಯ ಜಪ ಮಾಡಿಕೊಂಡು ಹೋಗುವ ಸಂದರ್ಭದಲ್ಲಿಯೇ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಭಾನುವಾರ ರಾತ್ರಿ 8.30 ಗಂಟೆಯಸುಮಾರಿಗೆ ಬೆಂಗಳೂರಿನ ಜೆಜೆ ನಗರದ ವಿಎಸ್ ಗಾರ್ಡನ್ ಬಳಿ ಈ ಘಟನೆ ಸಂಭವಿಸಿದೆ. ಕಲ್ಲು ತೂರಾಟದಿಂದ ಮಾಲಾಧಾರಿ ಯುವತಿಯರಿಗೆ ಗಾಯವಾಗಿದೆ. ಹಲವರ ತಲೆಯಿಂದ ರಕ್ತಸ್ರಾವವಾಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇನ್ನು ಈ ಕಲ್ಲೆಸೆತದಲ್ಲಿ ಇಬ್ಬರು ಯುವತಿಯರ ತಲೆಗೆ ಗಾಯಗಳಾಗಿವೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ ಏನು
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಕ್ತರು ಓಂ ಶಕ್ತಿಯ ಮಾಲೆ ಧರಿಸುತ್ತಾರೆ. ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ಹಾಗೂ ಭಕ್ತಿಯ ಸಾಲುಗಳನ್ನು ಹೇಳಿಕೊಂಡು ಹೋಗುತ್ತಾರೆ. ಬೆಂಗಳೂರಿನ ಜೆಜೆ ನಗರದಲ್ಲೂ ಭಾನುವಾರ ರಾತ್ರಿ ಓಂ ಶಕ್ತಿ ಮಾಲಾಧಾರಿಗಳು ದೇವಸ್ಥಾನಕ್ಕೆ ಹೋಗುತ್ತಿದ್ದರು ಈ ಸಂದರ್ಭದಲ್ಲಿ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಮಾಡಿದ ಬೆನ್ನಲ್ಲೇ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಸ್ಟೇಷನ್ ಬಳಿ ಬಂದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಈ ಕೃತ್ಯವನ್ನು ಅನ್ಯ ಕೋಮಿನವರು ಬೇಕಂದೇ ಮಾಡಿದ್ದಾರೆ. ನಾವು ನಡೆದುಕೊಂಡು ಹೋಗುವಾಗ ನಮ್ಮನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಾಲಾಧಾರಿಗಳು ಆರೋಪಿಸಿದ್ದಾರೆ.
2 ವಿಶೇಷ ತಂಡ ರಚನೆ, ಎಫ್‌ಐಆರ್ ದಾಖಲು
ಇನ್ನು ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇಬ್ಬರು ಇನ್ಸ್ಪೆಕ್ಟರ್ಗಳ ತಂಡ ಪ್ರಕರಣದ ತನಿಖೆ ಕೈಗೊಂಡಿದೆ. ಆರೋಪಿಗಳನ್ನು ಅರೆಸ್ಟ್ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ತಿಳಿಸಿದ್ದಾರೆ. ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರಿನನ್ವಯ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂಜಾಗ್ರತಾ ಕ್ರಮ: ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆದ ಬೆನ್ನಲ್ಲೇ ಪೊಲೀಸರು ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಘಟನೆಯ ನಂತರ ಭಾನುವಾರ ರಾತ್ರಿಯಿಂದಲೇ 2 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲೂ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆಯ ಸಂದರ್ಭದಲ್ಲಿ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದರು ಎನ್ನುವುದು ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.












Click it and Unblock the Notifications