ದೀಪಾವಳಿ ವಿಶೇಷ, ರಾಕೆಟ್ ನಂತೆ ಮೇಲೇರಿದೆ ಬಸ್ ಟಿಕೆಟ್ ರೇಟ್
Recommended Video

ಬೆಂಗಳೂರು, ಅಕ್ಟೋಬರ್ 17: ದೀಪಾವಳಿ, ಬಲಿ ಪಾಡ್ಯಮಿ ಹಬ್ಬದ ಆಚರಣೆ ವಾರದ ಮಧ್ಯ ಭಾಗದಲ್ಲಿ ಬಂದು, ಹಬ್ಬಕ್ಕೆ ಮುಂಚೆ ಹಾಗೂ ನಂತರ ಒಂದೆರಡು ದಿನ ರಜಾ ಹಾಕಿಕೊಂಡರೆ ಸ್ವಂತ ಊರಿಗೋ ಪ್ರವಾಸಕ್ಕೋ ಬಸ್ಸಿನಲ್ಲಿ ಹೋಗಿಬರಬಹುದು ಎಂದು ಯೋಜನೆ- ಯೋಚನೆ ಇಟ್ಟುಕೊಂಡವರಿಗೆ ಬಹಳ ನಿರಾಸೆ ತರುವಂಥ ಸುದ್ದಿ ಇದು.
ಏಕೆಂದರೆ, ಕೆ ಎಸ್ಆರ್ ಟಿಸಿಯ ಐರಾವತ ಬಸ್ ಟಿಕೆಟ್ ಅಕ್ಟೋಬರ್ 17ನೇ ತಾರೀಕಿಗೆ ಬಹುತೇಕ ಮಾರಾಟವಾಗಿದೆ. ಇನ್ನು ದರದ ವಿಚಾರಕ್ಕೆ ಬಂದರೆ ಖಾಸಗಿಯವರಿಗಿಂತ ಅದೆಷ್ಟೋ ಉತ್ತಮ ಎಂಬಂತೆ ಇದೆ. ಆದರೆ ಖಾಸಗಿ ಬಸ್ ಸೇವೆ ನೀಡುವವರು ಮಾಮೂಲಿ ಟಿಕೆಟ್ ದರಕ್ಕಿಂತ ಕನಿಷ್ಠ 250 ರುಪಾಯಿ ಯಿಂದ 550 ರುಪಾಯಿವರೆಗೆ ಏರಿಕೆ ಮಾಡಿದ್ದಾರೆ.

ಮಂಗಳವಾರ ರಾತ್ರಿಗೆ ಟಿಕೆಟ್ ಗಳು ಲಭ್ಯವಿದ್ದರೂ ದರ ವಿಪರೀತ ಹೆಚ್ಚಿದೆ. ಹಬ್ಬದ ದಿನಗಳಲ್ಲಿ ಇದು ತುಂಬ ಮಾಮೂಲು ಎಂಬ ಧೋರಣೆ ಕಾಣುತ್ತಿದೆ. ಟಿಕೆಟ್ ಬುಕ್ ಮಾಡುವ ಏಜೆಂಟರೊಬ್ಬರಿಗೆ ಒನ್ಇಂಡಿಯಾ ಕನ್ನಡ ಕರೆ ಮಾಡಿದಾಗ, ಬೆಂಗಳೂರಿನಿಂದ ತೀರ್ಥಹಳ್ಳಿಗೆ ಮಂಗಳವಾರ ರಾತ್ರಿಗೆ 900 ರುಪಾಯಿ ಹೇಳಿದರು. ಬುಧವಾರ ರಾತ್ರಿಗಾದರೆ 850 ರುಪಾಯಿಯಂತೆ.

ಅದೇ ತೀರ್ಥಹಳ್ಳಿಗೆ ಬೆಂಗಳೂರಿನಿಂದ ರೆಡ್ ಬಸ್ ವೆಬ್ ಸೈಟ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದರೆ, 1000, 950, 1200, 1100 ರುಪಾಯಿ ದರವನ್ನು ತೋರಿಸಿತು. ಅದರಲ್ಲೂ ಬಹುತೇಕ ಬಸ್ ಗಳಲ್ಲಿ ಟಿಕೆಟ್ ಗಳು ಈಗಾಗಲೇ ಬುಕ್ ಆಗಿವೆ.

ಒಂದೇ ಊರಿಗೆ ತೆರಳಬೇಕಾದ ನಾಲ್ಕೈದು ಮಂದಿ ಇದ್ದರೆ ಕಾರು ಬುಕ್ ಮಾಡಿಕೊಂಡು ಹೋಗುವುದೇ ಉತ್ತಮ ಎಂಬಂತಿದೆ ಬಸ್ಸುಗಳ ಟಿಕೆಟ್ ದರ. ಯಾವುದೇ ಹಬ್ಬದ ಸಂದರ್ಭದಲ್ಲಿ, ವಾರಾಂತ್ಯಕ್ಕೋ ಅಥವಾ ಸರಣಿ ರಜಾ ದಿನಗಳಲ್ಲಿ ಬಸ್ಸುಗಳ ಟಿಕೆಟ್ ದರ ಏಕಾಏಕಿ ದುಪ್ಪಟ್ಟಾಗುತ್ತದೆ.
ಈ ಹಿಂದೆ ತಿಳಿಸಿದ ಉದಾಹರಣೆಯೇ ಹೇಳುವುದಾದರೆ, ಬೆಂಗಳೂರಿನಿಂದ ತೀರ್ಥಹಳ್ಳಿಗೆ ಉಳಿದ ದಿನಗಳಲ್ಲಿ 550ರಿಂದ 650 ರುಪಾಯಿ ದರವಿರುತ್ತದೆ. ಆದರೆ ಈಗ 1200ರ ವರೆಗೆ ಏರಿಕೆ ಮಾಡಲಾಗಿದೆ.












Click it and Unblock the Notifications