ಬೆಂಗಳೂರಿನಲ್ಲಿ ಮತ್ತಷ್ಟು ಸಿಸಿ ಕ್ಯಾಮೆರಾ ಕಣ್ಗಾವಲು
ಬೆಂಗಳೂರು, ಜು.15: ಸರಗಳ್ಳತನ ಸೇರಿದಂತೆ ಅಪರಾಧ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ ಸೆಂಟ್ರಲ್ ವಿಭಾಗದಿಂದ ಸಿಸಿ ಕ್ಯಾಮೆರಾ ಅಳವಡಿಸುವ ಪ್ರಕ್ರಿಯೆ ಆರಂಭವಾಗಲಿದ್ದು 18 ಸ್ಥಳಗಳನ್ನು ಗುರುತಿಸಲಾಗಿದೆ. 15 ದಿನದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಎಚ್.ಔರಾದ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಚಾರ ಪೊಲೀಸರು ಅಳವಡಿಸಿರುವ ಸಿಸಿ ಕ್ಯಾಮೆರಾ ಹೊರತುಪಡಿಸಿ, 8.5 ಕೋಟಿ ರೂ. ವೆಚ್ಚದಲ್ಲಿ ಈ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಜನನಿಬಿಡ ಪ್ರದೇಶ, ಉದ್ಯಾನ, ಹೆಚ್ಚು ಸರಗಳವು ನಡೆದಿರುವ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದರು.[ಚಿಕ್ಕಣ್ಣ ಗಾರ್ಡನ್ ಸಿಸಿಟಿವಿ ಕಣ್ಗಾವಲಿನಲ್ಲಿದೆ]
ಇದಕ್ಕಾಗಿ ಪ್ರತ್ಯೇಕ ನಿಯಂತ್ರಣಾ ಕೊಠಡಿಯನ್ನು ಆಯುಕ್ತರ ಕಚೇರಿ ಸಮೀಪ ತೆರೆಯಲಿದ್ದು, ಈ ಸಿಸಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಲು ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ ಎಂದರು.

ಸಿಬ್ಬಂದಿ ನೇಮಕ: ಜನವರಿ ವೇಳೆಗೆ ನಗರಕ್ಕೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. 2500 ಸಾವಿರ ಸಿಬ್ಬಂದಿ ನೇಮಕಕ್ಕೆ 1 ಲಕ್ಷ ಅರ್ಜಿಗಳು ಬಂದಿದೆ. ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಯುತ್ತಿದೆ. ಜು. 30ರ ವೇಳೆಗೆ ದೈಹಿಕ ಪರೀಕ್ಷೆ ಮುಕ್ತಾಯವಾಗಲಿದ್ದು, ಸೆಪ್ಟಂಬರ್ ವೇಳೆಗೆ ಲಿಖಿತ ಪರೀಕ್ಷೆ ನಡೆದು, ಜನವರಿ ವೇಳೆಗೆ ಎಲ್ಲಾ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದರು.
ಟ್ರಾಫಿಕ್ ಪೊಲೀಸರಿಗೆ ಸನ್ಮಾನ: ಉತ್ತಮವಾಗಿ ಕಾರ್ಯನಿರ್ವಹಿಸಿದ 25 ಟ್ರಾಫಿಕ್ ಪೊಲೀಸರಿಗೆ 'ಹಾಡಿ ಹೊಗಳದ ಟ್ರಾಫಿಕ್ ಸಿಗ್ನಲ್ ಹೀರೋಗಳು' ಸನ್ಮಾನ ಕಾರ್ಯಕ್ರಮ ಜು.17 ರಂದು ನಡೆಯಲಿದೆ. ದಿ ವರ್ಲ್ಡ್ ಪೀಸ್‌ಕೀಪರ್‍ಸ್ ಮೂವ್‌ಮೆಂಟ್ ಹಾಗೂ ಬಿ- ಪ್ಯಾಕ್, ಬೆಂಗಳೂರು ಸಂಚಾರ ಪೊಲೀಸರ ಸಹಯೋಗದೊಂದಿಗೆ ಇಮೇಲ್, ಫೇಸ್‌ಬುಕ್ ಮೂಲಕ ಸಾರ್ವಜನಿಕರ ಅಭಿಪ್ರಾಯ ಪಡೆದು 25 ಟ್ರಾಫಿಕ್ ಪೊಲೀಸರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾರ ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.[ಟ್ರಾಫಿಕ್ ಸಿಗ್ನಲ್ ಹೀರೋಗಳ ಹೆಸರನ್ನು ನೀವೇ ಸೂಚಿಸಿ]
ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಯೋಕಾನ್ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಮ್ದಾರ್ ಷಾ, ದಿ ವರ್ಲ್ಡ್ ಪೀಸ್‌ಕೀಪರ್‍ಸ್ ಮೂವ್‌ಮೆಂಟ್‌ನ ಸಿಇಒ ಅನಿಲ್ ಶೆಟ್ಟಿ, ಬಿ ಪ್ಯಾಕ್ ಸಿಇಒ ರೇವತಿ ಅಶೋಕ್ ಉಪಸ್ಥಿತರಿದ್ದರು.












Click it and Unblock the Notifications