ರಾಜ್ಯಾದ್ಯಂತ ಹೊತ್ತಿಕೊಳ್ಳಲಿದೆಯಾ ಎಲ್ ಇಡಿ ಬಲ್ಬ್?
ಬೆಂಗಳೂರು, ಸೆಪ್ಟೆಂಬರ್, 30 : ರಾಜ್ಯಾದ್ಯಂತ ಎದುರಾದ ವಿದ್ಯುತ್ ತೊಂದರೆ ನಿವಾರಿಸುವ ಸಲುವಾಗಿ ಎಲ್ ಇಡಿ ಬಲ್ಬ್ ಬಳಕೆ ಕಡ್ಡಾಯಗೊಳಿಸಲು ಸರ್ಕಾರ ಚಿಂತೆ ನಡೆಸಿದ್ದು, ಈ ನಿಟ್ಟಿನಲ್ಲಿ ಪ್ರತಿ ಕುಟುಂಬಕ್ಕೂ 10 ಎಲ್ ಇಡಿ ಬಲ್ಬ್ ಒದಗಿಸಲಾಗುವುದು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ.
ನಗರದ ವಿಧಾನಸೌಧದಲ್ಲಿ ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿ ದೀಪ, ಮನೆ, ಹಾಗೂ ಸರ್ಕಾರಿ ಕಚೇರಿಗಳಲ್ಲಿ ಎಲ್ ಇಡಿ ಬಲ್ಬ್ ಬಳಕೆ ಕಡ್ಡಾಯ ಮಾಡುವುದರಿಂದ ಪ್ರತಿನಿತ್ಯ 800 ರಿಂದ 900 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ. 400 ರೂ ಬೆಲೆ ಇರುವ ಎಲ್ ಇಡಿ ಬಲ್ಬ್ ನ್ನು 100 ರೂಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.[ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

ಎಲ್ ಇಡಿ ಬಲ್ಬ್ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿರ್ಣಯಕ್ಕೆ ಕೇಂದ್ರ ಸರ್ಕಾರವು ಸಮ್ಮತಿ ಸೂಚಿಸಿದೆ. ಅಲ್ಲದೇ ರಾಜ್ಯದಲ್ಲಿ ಪ್ರಸ್ತುತ 7500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, 6152 ಮೆಗಾವ್ಯಾಟ್ ಮಾತ್ರ ಲಭ್ಯವಿದೆ. ಕೊರತೆ ಇರುವ 1350 ಮೆಗಾವ್ಯಾಟ್ ವಿದ್ಯುತ್ ಅನ್ನು ಖರೀದಿ ಮಾಡುವ ಅನಿವಾರ್ಯತೆ ಇದ್ದು, ಇದಕ್ಕೆ ಸರ್ಕಾರದ ಅನುಮತಿಯೂ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ 1500 ವಿದ್ಯುತ್ ನೀಡಬೇಕೆಂದು ಮನವಿ ಮಾಡಿದ್ದೆವು. ಇದೀಗ ಕೇವಲ 200 ಮೆಗಾವ್ಯಾಟ್ ಮಾತ್ರ ಒದಗುತ್ತಿದೆ. ತಮಿಳುನಾಡು 80, ಆಂಧ್ರಪ್ರದೇಶ 100, ಕೇರಳ 20 ಮೆಗಾವ್ಯಾಟ್ ನೀಡುತ್ತಿದೆ. ರಾಜ್ಯಕ್ಕೆ 2388 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಆದರೆ ನಮಗೆ ದೊರೆಯುತ್ತಿರುವುದು 1187 ಮೆಗಾವ್ಯಾಟ್. ಇದನ್ನು ಸರಿದೂಗಿಸಲು ಸೂಕ್ತ ಕ್ರಮವನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದರು.












Click it and Unblock the Notifications