ಬಿಬಿಎಂಪಿ ವಿಭಜನೆ : ಕಾಂಗ್ರೆಸ್ ಸಮಿತಿಯ ಶಿಫಾರಸುಗಳು
ಬೆಂಗಳೂರು, ಜುಲೈ 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 3 ಅಥವ 5 ಪಾಲಿಕೆಯಾಗಿ ವಿಭಜನೆ ಮಾಡುವುದು ಸೂಕ್ತ ಎಂದು ಕೆಪಿಸಿಸಿ ರಚನೆ ಮಾಡಿದ್ದ ಸಮಿತಿಯು ವರದಿ ನೀಡಿದೆ. ಪಕ್ಷದ ಹಿರಿಯ ನಾಯಕ ಬಿ.ಎಲ್.ಶಂಕರ್ ನೇತೃತ್ವದ ಸಮಿತಿ ತನ್ನ ಅಂತಿಮ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ನೀಡಿದೆ.
ಗುರುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಬಿ.ಎಲ್.ಶಂಕರ್ ಮತ್ತು ಇತರ ಸದಸ್ಯರು 29 ಪುಟಗಳ ವರದಿಯನ್ನು ನೀಡಿದರು. ಸುಗಮವಾದ ಆಡಳಿತಕ್ಕಾಗಿ ಪಾಲಿಕೆಯನ್ನು ವಿಭಜನೆ ಮಾಡುವುದು ಅನಿವಾರ್ಯವಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. [ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]

ಪಾಲಿಕೆಯ ಹಳೆಯ 100 ವಾರ್ಡ್ ಹೊಂದಿರುವ ಕೇಂದ್ರ ಪಾಲಿಕೆ, ಉತ್ತರ ಭಾಗದ ಪ್ರದೇಶಗಳನ್ನು ಒಟ್ಟಾಗಿಸಿ ನಾರ್ತ್ ಫೆರಿಫೆರಲ್ ಹಾಗೂ ದಕ್ಷಿಣದ ಪ್ರದೇಶಗಳನ್ನು ಸೇರಿಸಿ ಸೌತ್ ಫೆರಿಫೆರಲ್ ರಚನೆ ಮಾಡಬಹುದು ಎಂದು ವರದಿ ಶಿಫಾರಸು ಮಾಡಿದೆ. ಐದು ಭಾಗಗಳಾಗಿ ವಿಭಜನೆ ಮಾಡಿದರೂ ಉತ್ತಮ ಎಂದು ಅಭಿಪ್ರಾಯಪಟ್ಟಿದೆ. [ಪಾಲಿಕೆ ವಿಭಜನೆ ಸುಳಿವು ಕೊಟ್ಟ ಸಿಎಂ]
ಬಿಬಿಎಂಪಿ ಪುನಾರಚನೆ ಮಾಡುವ ಬಗ್ಗೆ ರಚಿಸಲಾದ ಸಮಿತಿಯಲ್ಲಿ ಬಿ.ಎಲ್.ಶಂಕರ್, ಮಾಜಿ ಮೇಯರ್‌ಗಳಾದ ಪಿ.ಆರ್.ರಮೇಶ್, ಎಂ.ರಾಮಚಂದ್ರಪ್ಪ, ಕೆ.ಚಂದ್ರಶೇಖರ್, ಜೆ.ಹುಚ್ಚಪ್ಪ, ನಾರಾಯಣಸ್ವಾಮಿ, ಕೆ.ಸಿ.ವಿಜಯಕುಮಾರ್ ಮುಂತಾದವರಿದ್ದರು.
ಸಮಿತಿಯ ಪ್ರಮುಖ ಶಿಫಾರಸುಗಳು
* ಪಾಲಿಕೆಯನ್ನು 3 ಅಥವ 5 ಭಾಗಗಳಾಗಿ ವಿಂಗಡೆನೆ ಮಾಡಬಹುದು
* ಪಾಲಿಕೆಯ ಎಂಟು ವಲಯಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕು
* ಪ್ರತಿ ವಲಯಕ್ಕೆ 2 ಕಸ ಸಂಸ್ಕರಣಾ ಘಟಕ ಸ್ಥಾಪನೆ
* ವಾರ್ಡ್ ಮಟ್ಟದಲ್ಲೇ ಕಸ ವಿಂಗಡನೆ ಮಾಡಲು ಕ್ರಮ ಕೈಗೊಳ್ಳುವುದು
* ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು
* ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಪೊಲೀಸ್ ಘಟಕ ಸ್ಥಾಪನೆ
* ಮೇಯರ್ ಜನರಿಂದ ನೇರವಾಗಿ ಆಯ್ಕೆಯಾಗಬೇಕು
* ಮೇಯರ್ ಆಯ್ಕೆಗೆ ಈಗಿರುವ ವ್ಯವಸ್ಥೆಯನ್ನು ಮುಂದುವರೆಸಬಹುದು












Click it and Unblock the Notifications