6 ಪಥವಾಗಲಿದೆ ಬೆಂಗಳೂರು-ಹೈದರಾಬಾದ್ ರಸ್ತೆ
ಬೆಂಗಳೂರು, ಮಾರ್ಚ್ 23; ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಚಾರ ನಡೆಸುವ ಜನರಿಗೆ ಸಿಹಿ ಸುದ್ದಿ. ನಾಲ್ಕು ಪಥವಿರುವ ಈ ರಸ್ತೆಯನ್ನು 4,750 ಕೋಟಿ ರೂ. ವೆಚ್ಚದಲ್ಲಿ 6 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕೃಷ್ಣಾ ರೆಡ್ಡಿ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರು-ಹೈದರಾಬಾದ್ 4 ಪಥದ ರಸ್ತೆಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತದೆ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಖಾತೆ ಇದಕ್ಕೆ ಒಪ್ಪಿಗೆ ನೀಡಿದೆ. ವಾಹನ ಸವಾರರಿಗೆ ಸಂಚಾರ ನಿರ್ವಹಣೆ ಕುರಿತು ಡಿಜಿಟಲ್ ಮಾಹಿತಿ ನೀಡುವ ವ್ಯವಸ್ಥೆ ಸಹ ಜಾರಿಗೊಳಿಸಲಾಗುತ್ತದೆ.
ಬೆಂಗಳೂರು-ಹೈದರಾಬಾದ್ ನಡುವೆ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಹಲವು ರೈಲುಗಳು ಸಹ ಈ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಆದರೆ ಜೋಡಿ ಹಳಿ ಇಲ್ಲದ ಕಾರಣ ರೈಲು ಸಂಚಾರ ಸಹ ಹಲವು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಉಭಯ ನಗರಗಳ ನಡುವಿನ ಸಂಚಾರದ ಅವಧ ಕಡಿತಗೊಳಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ.

ಮೊದಲು ಬೆಂಗಳೂರು-ಹೈದರಾಬಾದ್ ನಡುವಿನ 570 ಕಿ. ಮೀ. ರಸ್ತೆ 2 ಪಥದ ರಸ್ತೆಯಾಗಿತ್ತು. ಆಗ ಉಭಯ ನಗರಗಳ ನಡುವೆ ಸಂಚಾರ ನಡೆಸಲು 12 ಗಂಟೆ ಬೇಕಾಗಿತ್ತು. ಬಳಿಕ ಹಲವು ಕಡೆ ಬೈಪಾಸ್ ನಿರ್ಮಾಣ, ಫ್ಲೈ ಓವರ್ ನಿರ್ಮಿಸಿ 4 ಪಥದ ರಸ್ತೆ ಮಾಡಿದ ಮೇಲೆ ಸಂಚಾರದ ಅವಧಿ 8 ಗಂಟೆಗೆ ಇಳಿಕೆಯಾಯಿತು.
ಈಗ ಬೆಂಗಳೂರು-ಹೈದರಾಬಾದ್ ರಸ್ತೆಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲು ವಿಸ್ತೃತ ಯೋಜನಾ ವರದಿ ತಯಾರು ಮಾಡಲು ಸೂಚನೆ ನೀಡಲಾಗಿದೆ. ಮೂರು ತಿಂಗಳಿನಲ್ಲಿ ಡಿಪಿಆರ್ ಸಿದ್ದವಾಗಲಿದ್ದು, 12 ತಿಂಗಳಿನಲ್ಲಿ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ. ಎಲ್ಲಿ ಫ್ಲೈ ಓವರ್ ನಿರ್ಮಾಣ, ಎಲ್ಲಿ ಅಂಡರ್ ಪಾಸ್ ನಿರ್ಮಾಣ, ಎಲ್ಲಿ ಟೋಲ್ ಫ್ಲಾಜಾ ಬರಬೇಕು ಎಂದು ಡಿಪಿಆರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ.
ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಬೆಂಗಳೂರು-ಹೈದರಾಬಾದ್ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ರಸ್ತೆ ಕರ್ನಾಟಕದ ಗಡಿಯಿಂದ ಆಂಧ್ರ ಪ್ರದೇಶದ ಮೂಲಕ ಹೈದರಾಬಾದ್ ತಲುಪಲಿದೆ. ಡಿಪಿಆರ್ ತಯಾರಾದ ಮೇಲೆ ಯೋಜನೆಯ ವೆಚ್ಚ ಇನ್ನು ಅಧಿಕವಾಗಲಿದೆ ಎಂದು ಅಂದಾಜಿಲಸಾಗಿದೆ.
ಈಗ ಆರು ಪಥದ ರಸ್ತೆ ನಿರ್ಮಾಣವಾದರೆ ಉಭಯ ನಗರಗಳ ಸಂಚಾರದ ಅವಧಿ ಇನ್ನೂ ಕಡಿತಗೊಳ್ಳಲಿದ್ದು, ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ನಾಲ್ಕು ಪಥದ ರಸ್ತೆಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸುವ ಯೋಜನೆಗೆ 4,750 ಕೋಟಿ ರೂ. ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರು-ಹೈದರಾಬಾದ್ ನಗರಗಳ ನಡುವಿನ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಕಡೆಗಳಲ್ಲಿ ಈಗಿರುವ 4 ಪಥದ ರಸ್ತೆ ಸಾಕಾಗುತ್ತಿಲ್ಲ ಎಂದು ವಾಹನ ಸವಾರರು ಹೇಳಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಉತ್ತರ ದಕ್ಷಿಣ ಕಾರಿಡಾರ್ ಘೋಷಣೆ ಮಾಡಲಾಗಿತ್ತು. ಅದು ಆರು ಪಥದ ರಸ್ತೆಯಾಗಬೇಕಿತ್ತು. ಬಳಿಕ ರಸ್ತೆ ನಿರ್ಮಿಸುವಾಗ 4 ಪಥದ ರಸ್ತೆ ನಿರ್ಮಾಣ ಮಾಡಲಾಗಿತ್ತು.
ಬೆಂಗಳೂರು-ಹೈದರಾಬಾದ್ ರಸ್ತೆ ಉತ್ತರ ಮತ್ತು ಮಧ್ಯ ಭಾರತಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಕನ್ಯಾಕುಮಾರಿ ತನಕ ಸಂಚಾರ ನಡೆಸಲು ಈ ರಸ್ತೆಯೇ ಪ್ರಮುಖ ಮಾರ್ಗವಾಗಿದೆ. ಆದ್ದರಿಂದ ಈ ರಸ್ತೆಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸುವುದು ಉತ್ತಮ ಎಂದು ವಾಹನ ಸವಾರರು ಅಭಿಪ್ರಾಯಪಟ್ಟಿದ್ದಾರೆ.
ರಸ್ತೆಯನ್ನು ಈಗಲೇ ಆರು ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸುವುದು ಉತ್ತಮ ಮುಂದಿನ ದಿನಗಳಲ್ಲಿ ಭೂ ಸ್ವಾಧೀನ ಸೇರಿದಂತೆ ಎಲ್ಲ ವೆಚ್ಚಗಳು ಏರಿಕೆಯಾಗಲಿವೆ. 4 ಪಥದ ರಸ್ತೆಯಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications