Breaking : ಇಡಿಯಿಂದ ಸೋನಿಯಾ ವಿಚಾರಣೆ, ಕೆಪಿಸಿಸಿಯಿಂದ ಪ್ರತಿಭಟನೆ
ಬೆಂಗಳೂರು ಜುಲೈ 20: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜುಲೈ 21ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಚಾರಣೆ ನಡೆಸಲಿದೆ. ಸೋನಿಯಾ ವಿಚಾರಣೆ ಖಂಡಿಸಿ ಕೆಪಿಸಿಸಿ ಪ್ರತಿಭಟನೆಗೆ ಕರೆ ನೀಡಿದೆ.
ಇದೇ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ನಡೆಸಿತ್ತು. ಅಂದು ಸಹ ಕೆಪಿಸಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಇದೀಗ ಮತ್ತೆ ಪ್ರತಿಭಟನೆ ಅಸ್ತ್ರ ಪ್ರಯೋಗಿಸಲು ಕೆಪಿಸಿಸಿ ಮುಂದಾಗಿದೆ.
ಗುರುವಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟಿಸಲಿದ್ದಾರೆ. ಸೋನಿಯಾ ಗಾಂಧಿಯನ್ನು ನೈತಿಕವಾಗಿ ಬೆಂಬಲಿಸುವ ಜೊತೆಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ನಗರದ ಸ್ವಾಂತ್ರ್ಯ ಉದ್ಯಾನದಿಂದ ಹಿಡಿದು ಕೆ. ಆರ್. ವೃತ್ತ, ವಿಧಾನಸೌಧ ಮುಂದಿನ ರಸ್ತೆ ಮೂಲಕ ರಾಜಭವನದ ತನಕ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.
Recommended Video
ಪ್ರತಿಭಟನಾ ಮೆರವಣಿಯಲ್ಲಿ ಕಾಂಗ್ರೆಸ್ ಪಕ್ಷ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಕಾರ್ಯಕರ್ತರು ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ರೀತಿ ದೆಹಲಿಯಲ್ಲಿಯೂ ಸಹ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಲಿದೆ.
ಬೆಳಗ್ಗೆ 11ಕ್ಕೆ ಪ್ರತಿಭಟನೆ ಆರಂಭ
ನಾಳೆ ಬೆಳಗ್ಗೆ 11ಕ್ಕೆ ಪ್ರತಿಭಟನೆ ಆರಂಭವಾಗಲಿದೆ. ನಗರದ ಹೃದಯ ಭಾಗದಲ್ಲಿ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು, ಮುಖಂಡರು ಜಮಾಯಿಸಲಿದ್ದಾರೆ. ಮುಖ್ಯವಾಗಿ ಸ್ವಾತಂತ್ರ್ಯ ಉದ್ಯಾನದಿಂದ ರಾಜಭವನ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಇದರಿಂದ ಮೆಜೆಸ್ಟಿಕ್, ಚಾಲುಕ್ಯ ವೃತ್ತ, ವಿಧಾನಸೌಧ, ರಾಜಭವನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಉದ್ಭವಿಸಲಿದೆ. ಇದರಿಂದ ವಾಹನ ಸವಾರರು ಹೈರಾಣಾಗುವ ಸಾಧ್ಯತೆ ಇದ್ದು, ಮಾರ್ಗ ಬದಲಿಸುವುದು ಉತ್ತಮ ಎನ್ನಲಾಗಿದೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications