ತಾಳ್ಮೆ ಅಂದ್ರೆ ತಾಳ್ಮೆ, ಸಚಿವ ಸ್ಥಾನದ ಹಿಂದೆ ಬಿದ್ದಿರುವ ಬಿಜೆಪಿಯವರಿಗೆ ಮುನಿರತ್ನ ರೋಲ್ ಮಾಡೆಲ್ ಆಗಲಿ!
ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಖುದ್ದು ಮುಖ್ಯಮಂತ್ರಿಗಳೇ ಹೇಳಿದ್ದ ಮಾತು, "ನೀವು ಆರಿಸುತ್ತಿರುವುದು ಶಾಸಕರನ್ನಲ್ಲಾ.. ಸಚಿವರನ್ನು" ಎಂದು ಅಷ್ಟರ ಮಟ್ಟಿಗೆ ಮುನಿರತ್ನ ಗೆದ್ದಾದ ಮೇಲೆ ಸಚಿವರಾಗುವುದು ಗ್ಯಾರಂಟಿ ಎನ್ನುವ ಮಾತಿತ್ತು.
ಇದಾದ ಮೇಲೆ, ಸಂಪುಟ ವಿಸ್ತರಣೆಗೆ ಹಲವು ಸುತ್ತಿನ ಕಸರತ್ತನ್ನು ಮುಖ್ಯಮಂತ್ರಿಗಳು ಮಾಡಿದ್ದರೂ, ಆ ವಿಚಾರ ಬಹುತೇಕ ನೆನೆಗುದಿಗೆ ಬಿದ್ದಿತ್ತು. ಆದರೆ, ತುರ್ತಾಗಿ ದೆಹಲಿಗೆ ಸಿಎಂ ಅವರನ್ನು ಕರೆಸಿಕೊಂಡ ಅಮಿತ್ ಶಾ, ಜೆ.ಪಿ.ನಡ್ಡಾ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.
ಯತ್ನಾಳ್ ಗೆ ಬಿಸಿಮುಟ್ಟಿಸಿದ ಸಿಎಂ ಯಡಿಯೂರಪ್ಪ: ನೀವೇ ಹೊಣೆಯೆಂದ ಯತ್ನಾಳ್
ಪ್ರಮಾಣವಚನ ಸ್ವೀಕರಿಸುವ ಏಳು ಶಾಸಕರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎನ್ನುವುದು ಗೊತ್ತಾದ ನಂತರ, ಸಾಮ್ರಾಟ್ ಆರ್.ಅಶೋಕ್ ಜೊತೆ, ಮುಖ್ಯಮಂತ್ರಿಗಳನ್ನು ಭೇಟಿಯಾದ ಮುನಿರತ್ನ ತಮ್ಮ ಬೇಸರನ್ನು ತೋಡಿಕೊಂಡಿದ್ದರು.
ಬಿಎಸ್ವೈ ಸಂಪುಟ ವಿಸ್ತರಣೆಯ ನಂತರ ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ?ಇಲ್ಲಿದೆ ಪಟ್ಟಿ
ನಕಲಿ ವೋಟರ್ ಐಡಿ ವಿಚಾರದಲ್ಲಿ ಸದ್ಯ ಸಚಿವ ಸ್ಥಾನ ನೀಡಲು ಆಗುವುದಿಲ್ಲ ಎಂದು ಸಿಎಂ ಹೇಳಿದ ಮೇಲೆ, ಉಸ್ತುವಾರಿ ಅರುಣ್ ಸಿಂಗ್ ಅವರನ್ನೂ ಮುನಿರತ್ನ ಭೇಟಿಯಾಗಿದ್ದರು. ಆದರೆ, ಬಿಜೆಪಿಯ ಇತರ ನಾಯಕರಂತೆ ಮುನಿರತ್ನ ಎಲ್ಲೂ ತಾಳ್ಮೆ ಕಳೆದುಕೊಂಡಿರಲಿಲ್ಲ.

ಎಚ್.ವಿಶ್ವನಾಥ್
ಎಚ್.ವಿಶ್ವನಾಥ್ ಹೊರತು ಪಡಿಸಿ, ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲರೂ ಮಂತ್ರಿಯಾಗಿರುವಾಗ, ತನಗೆ ಮಾತ್ರ ಆ ಸ್ಥಾನ ಸಿಗಲಿಲ್ಲ ಎಂದರೆ ಮುನಿರತ್ನ ಅವರಿಗೆ ಹೇಗಾಗಿರಬೇಡ? ಆದರೂ ಸಂಯಮ, ತಾಳ್ಮೆಯಿಂದ ಸಾರ್ವಜನಿಕವಾಗಿ ತೂಕದ ಹೇಳಿಕೆ ನೀಡುವ ಮೂಲಕ, ಮುನಿರತ್ನ ಸೈ ಎನಿಸಿಕೊಂಡಿದ್ದಾರೆ. ಜನಸೇವೆಗೆ ಸಚಿವರೇ ಆಗಿರಬೇಕೆಂದೇನೂ ಇಲ್ಲ ಎನ್ನುವ ಹೇಳಿಕೆಯೂ ಇವರಿಂದ ಬಂದಿದೆ.

ಯಡಿಯೂರಪ್ಪನವರು ವಚನಭ್ರಷ್ಟರಲ್ಲ
"ಯಡಿಯೂರಪ್ಪನವರು ವಚನಭ್ರಷ್ಟರಲ್ಲ, ಮಾತಿಗೂ ತಪ್ಪಿಲ್ಲ. ಕೆಲವು ಸಂದರ್ಭದಲ್ಲಿ ಕಾರಣಾಂತರದಿಂದ ಈ ರೀತಿ ಆಗುವುದು ಸಹಜ. ಸಚಿವ ಸ್ಥಾನ ಸಿಗಲಿಲ್ಲ ಎಂದು ಪಕ್ಷ ಮತ್ತು ವರಿಷ್ಠರ ಬಗ್ಗೆ ಕೆಟ್ಟದಾಗಿ ಮಾತನಾಡುವ ಜಾಯಮಾನ ನನ್ನದಲ್ಲ"ಎಂದು ಮುನಿರತ್ನ ಹೇಳುವ ಮೂಲಕ ತಮ್ಮದೇ ಪಕ್ಷದ ಮುಖಂಡರಿಗೆ ಟಾಂಗ್ ನೀಡಿದ್ದರು.

ಮತದಾರರಲ್ಲಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದೆ
"ಚುನಾವಣೆಯ ವೇಳೆ ಮತದಾರರಲ್ಲಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದೆ, ಅದನ್ನು ಮಾಡಿಕೊಂಡು ಹೋಗೋಣ. ಸಚಿವ ಸ್ಥಾನ ಸಿಗಲಿಲ್ಲ ಎಂದು ರೋಡ್ ನಲ್ಲಿ ನಿಂತು ಮಾತನಾಡುವುದು, ಕೆಟ್ಟದಾಗಿ ಹೇಳಿಕೆ ನೀಡುವುದು ಒಳ್ಳೆಯದಲ್ಲ"ಎಂದು ಮುನಿರತ್ನ, ಭರ್ಜರಿಯಾಗಿಯೇ ಬಿಜೆಪಿಯ ಕೆಲವು ಮುಖಂಡರಿಗೆ ಬುದ್ದಿಮಾತನ್ನು ಹೇಳಿದ್ದರು.

ಬಿಜೆಪಿಯವರಿಗೆ ಮುನಿರತ್ನ ಮಾದರಿ ಆಗೋದು ಯಾವಾಗ!
"ನಮ್ಮದು ರಾಷ್ಟ್ರೀಯ ಪಕ್ಷ, ದೆಹಲಿಯಿಂದ ಸಂದೇಶ ಬರುವುದು ಲೇಟಾಗಿರಬಹುದು. ಸಚಿವ ಸ್ಥಾನ ಸಿಗಲಿಲ್ಲ ಎನ್ನುವುದು ಮುಗಿದ ಅಧ್ಯಾಯ. ಸಚಿವನಾಗಬೇಕು ಎನ್ನುವುದು ನನ್ನ ಹಣೆಯಲ್ಲಿ ಬರೆದಿದ್ದರೆ, ಅದು ಆಗುತ್ತದೆ. ಆದರೆ, ನಾನು ತಾಳ್ಮೆ ಕಳೆದುಕೊಳ್ಲುವುದಿಲ್ಲ"ಎಂದು ಮುನಿರತ್ನ ಅಧಿಕಾರಕ್ಕಾಗಿ ರಾಜಕಾರಣಿಗಳಿಗೆ, ಸಾರ್ವಜನಿಕವಾಗಿ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.