SM Krishna: ಕೊನೆಯ ಕ್ಷಣದಲ್ಲಿ ಎಸ್.ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ಯಾಕೆ ?
ಕರ್ನಾಟಕದ ಮುತ್ಸದ್ದಿ ರಾಜಕಾರಣಿ ಅಂತಲೇ ಹೆಸರು ಗಳಿಸಿದ್ದ ಹಾಗೂ ಕರ್ನಾಟಕದ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದ ಎಸ್.ಎಂ ಕೃಷ್ಣ ಇನ್ನಿಲ್ಲ. ಎಸ್.ಎಂ ಕೃಷ್ಣ ಅವರ ಜೀವಮಾನದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದು, ಹೆಸರು ಹಾಗೂ ಖ್ಯಾತಿ ಗಳಿಸಿದ್ದು ಕಾಂಗ್ರೆಸ್‌ನಿಂದಲೇ. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ರಾಜಕೀಯದಿಂದ ರಾಜ್ಯ ರಾಜಕೀಯಕ್ಕೆ ಮರಳಿದ್ದ ಅವರು, ಸಂಧ್ಯಾಕಾಲದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಕರ್ನಾಟಕಕ್ಕೆ ಹಲವು ಕೊಡುಗೆ ಹಾಗೂ ಕಾಂಗ್ರೆಸ್ ಪಕ್ಷದಿಂದಲೇ ಅವರು ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಆದರೆ, ರಾಜಕೀಯ ಯುಗಾಂತ್ಯದ ಸಮಯದಲ್ಲೇ ಅವರು ಬಿಜೆಪಿ ಸೇರಿದ್ದರು.
ಎಸ್.ಎಂ ಕೃಷ್ಣ್ ಕನ್ನಡದ ಕಣ್ಮಣಿ. ಬೆಂಗಳೂರು ಐಟಿ ಕ್ಷೇತ್ರಕ್ಕೆ ಹಾಗೂ ಬೆಂಗಳೂರು ಅಭಿವೃದ್ಧಿಗೆ ಅವರು ಕೊಟ್ಟಿರುವ ಕೊಡುಗೆ ಅಪಾರ ಅಂತಲೇ ಹೇಳಬಹುದು. ಕಳೆದ ಕೆಲವು ತಿಂಗಳುಗಳಿಂದ ಎಸ್.ಎಂ ಕೃಷ್ಣ ಅವರಿಗೆ ವಯೋಸಹಜ ಸಮಸ್ಯೆ ಇತ್ತು. ಇನ್ನು ಅವರಿಗೆ ಈಚೆಗೆ ಶ್ವಾಸಕೋಶದ ಸಮಸ್ಯೆಯೂ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಹೀಗಾಗಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಎಸ್.ಎಂ ಕೃಷ್ಣ ಇಡೀ ದೇಶವೇ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದರು. ಆದರೆ, ಅವರು ಇನ್ನೇನು ರಾಜಕೀಯ ಜೀವನ ಮುಗಿಯಿತು ಎನ್ನುವಾಗಲೇ ಜನರಿಗೆ ದೊಡ್ಡ ಅಚ್ಚರಿಯೊಂದನ್ನು ಕೊಟ್ಟಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಮಾರಂಭರವೊಂದರಲ್ಲಿ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದರು. ಇದು ಹಲವು ಕಾರಣಗಳಿಗೆ ಅಚ್ಚರಿಯನ್ನು ಮೂಡಿಸಿತ್ತು. ಎಸ್.ಎಂ ಕೃಷ್ಣ ಅವರು ರಾಜಕೀಯ ಪ್ರವೇಶ ಮಾಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಪ್ರಯತ್ನದಲ್ಲೇ ಅವರು ಗೆದ್ದಿದ್ದರು. ಅದಾದ ಮೇಲೆ ಅವರು ಪ್ರಜಾ ಸೋಷಿಯಲಿಸ್ಟ್ ಎನ್ನುವ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿವಲ್ಲಿ ಅವರ ಪಾತ್ರ ದೊಡ್ಡದಿತ್ತು.
ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಎಸ್.ಎಂ ಕೃಷ್ಣ ಅವರು ಎರಡು ತಿಂಗಳ ನಂತರ ಬಿಜೆಪಿ ಸೇರಿದ್ದರು. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅವರು ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕೇಸರಿ ಶಾಲು ಧರಿಸಿದ್ದರು. 84ನೇ ವರ್ಷದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸಾಮಾನ್ಯವಾಗಿ ರಾಜಕೀಯ ಇಚ್ಛಾಶಕ್ತಿಯಿಂದ ಅಥವಾ ಪಕ್ಷದಲ್ಲಿ ಏನಾದರೂ ಗೊಂದಲ, ಸಿದ್ಧಾಂತ ಭಿನ್ನಾಭಿಪ್ರಾಯವಾದರೆ ಪಕ್ಷ ಬದಲಾವಣೆ ಮಾಡುವುದು ಇದೆ.
ಈಗೆಲ್ಲ ಕೆಲವು ರಾಜಕಾರಣಿಗಳು ತಮ್ಮ ರಕ್ಷಣೆಗಾಗಿಯೂ ಪಕ್ಷಾಂತರ ಮಾಡಿ ಆಡಳಿತ ನಡೆಸುವ ಪಕ್ಷಕ್ಕೆ ಸೇರುವುದು ಇದೆ. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ ಎಸ್.ಎಂ ಕೃಷ್ಣ ಅವರಿಗೆ ಈ ರೀತಿಯ ಸನ್ನಿವೇಶಗಳು ಎದುರಾಗಿರಲಿಲ್ಲ. ಅಲ್ಲದೇ ಅವರು ಸಕ್ರಿಯ ರಾಜಕೀಯದಲ್ಲೂ ಇರಲಿಲ್ಲ ಎನ್ನುತ್ತಾರೆ.
ಇನ್ನು ಎಸ್ ಎಂ ಕೃಷ್ಣ ಅವರು ಬಿಜೆಪಿ ನಾಯಕರ ಬಳಿ ಅವರ ಪುತ್ರಿ ಶಾಂಭವಿ ಅವರಿಗೆ ಮಂಡ್ಯದ ಮದ್ದೂರು ಇಲ್ಲ ಬೆಂಗಳೂರಿನ ರಾಜರಾಜೇಶ್ವರಿನಗರದಿಂದ ಟಿಕೆಟ್ ಕೊಡುವಂತೆ ಕೇಳಿದ್ದರು ಎನ್ನುವುದು ಸಹ ಸುದ್ದಿಯಾಗಿತ್ತು. ಆದರೆ, ಅವರು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಇಂದಿಗೂ ರಹಸ್ಯವಾಗಿಯೇ ಉಳಿದಿದೆ.












Click it and Unblock the Notifications