ಬೆಂಗಳೂರು: ಮುಚ್ಚಿದ್ದ ಆರು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮರುಜೀವ
ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಸದ ಸಮಸ್ಯೆ ವಿಪರೀತವಾಗುತ್ತಿದೆ. ತ್ಯಾಜ್ಯ ಸಂಸ್ಕರಣಾ ಘಕಗಳೂ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದರು.
ಆದರೆ ಇನ್ನುಮುಂದೆ ಹೀಗಾಗುವುದಿಲ್ಲ, ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ಮುಚ್ಚಲ್ಪಟ್ಟಿದ್ದ ಏಳು ನೂತನ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೈಕೋರ್ಟ್ ಜೀವ ತುಂಬಿದೆ. ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಬಿಬಿಎಂಪಿಯು ವರ್ಷದಿಂದ ಸ್ಥಗಿತಗೊಂಡಿದ್ದ ಘಟಕಗಳನ್ನೆಲ್ಲಾ ಒಂದೇ ವಾರದಲ್ಲಿ ಪುನರ್ ಆರಂಭಗೊಂಡಿವೆ.
ಸುಮಾರು 270 ಕೋಟಿ ರೂ ಸಾರ್ವಜನಿಕರಿಗೆ ತೆರಿಗೆ ಹಣ ವೆಚ್ಚ ಮಾಡಿ ನಿರ್ಮಿಸಿದ್ದ 7 ನೂತನ ತ್ಯಾಜ್ಯ ಸಂಸ್ಕರಣಾ ಘಟಕಗಳು ಒಂದೇ ವರ್ಷದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಇದಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಮೂಲ ಕಾರಣವಾಗಿದ್ದು, ಕಸ ವಿಂಗಡಣೆ-ವೈಜ್ಞಾನಿಕ ವಿಲೇವಾರಿಯಲ್ಲಿನ ವೈಫಲ್ಯದಿಂದಾಗಿ ಘಟಕಗಳು ಮುಚ್ಚಲ್ಪಟ್ಟಿದ್ದವು.

ಇದನ್ನು ಗಂಭೀರವಾಗಿಪರಿಗಣಿಸಿ ಪುನರ್ ಆರಂಭಕ್ಕೆ ಅನುವು ಮಾಡಿಕೊಡಬೇಕು. ಈ ಮೂಲಕ ನಗರದ ತ್ಯಾಜ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಕೆಲ ಸಾಮಾಜಿಕ ಕಾರ್ಯಕರ್ತರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಎಲ್ಲಾ ಘಟಕಗಳು ಕಾರ್ಯಾರಂಭ ಮಾಡಬೇಕು. ಸ್ಥಳೀಯ ವಿರೋಧವಿದ್ದರೆ ಸೂಕ್ತ ಭದ್ರತೆಯನ್ನು ಪಡೆದಾದರೂ ಮಾಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪರಿಣಾಮ ಕಳೆದ ಒಂದು ವರ್ಷದಿಂದ ನಿಷ್ಕ್ರಿಯಗೊಂಡಿದ್ದ ಬಿಬಿಎಂಪಿ ಘಟಕಗಳು ಪುನರ್ ಜನ್ಮ ಪಡೆದಿವೆ. ಒಂದೇ ವಾರದಲ್ಲಿ ಸುಬ್ಬರಾಯನಪಾಳ್ಯ ಘಟಕ ಹೊರತುಪಡಿಸಿ ಉಳಿದ ಆರೂ ಘಟಕಗಳು ಕಾರ್ಯಾರಂಭ ಮಾಡಿದ್ದು, ಕಸದ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಮೊಳಕೆ ಒಡೆದಿದೆ.












Click it and Unblock the Notifications