ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ
ಬೆಂಗಳೂರು, ಸೆ.8: ಮಳೆಯಿಂದ ಹಾನಿಗೊಳಗಾಗಿರುವ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗುರುವಾರ ಭೇಟಿ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ತೀವ್ರ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯವಾಗಿ ಸರ್ಜಾಪುರ, ವೈಟ್‌ಫೀಲ್ಡ್ ಭಾಗದಲ್ಲಿ ನಿವಾಸಿಗಳು ಅಷ್ಟೇ ಅಲ್ಲ, ಅಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಸುತ್ತಮುತ್ತಲಿನ ಎಲ್ಲಾ ಕಂಪೆನಿಗಳ ನೌಕರರು ಸಹ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ನಗರ ವೀಕ್ಷಣೆ ಆರಂಭ ಮಾಡಲಿದ್ದಾರೆ. ಯಮಲೂರು, ಬೆಳ್ಳಂದೂರು, ದೊಡ್ಡಕನ್ನೆಲ್ಲಿ, ಮುನ್ನೆಕೊಳಾಲ ಗ್ರಾ, ಸಿದ್ದಾಪುರ ಮತ್ತು ವರ್ತೂರು ಕೋಡಿ ಪ್ರದೇಶಗಳಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ಸಮಸ್ಯಗಳನ್ನು ವೀಕ್ಷಿಸಲಿದ್ದಾರೆ.

ಬೆಳಗ್ಗೆ :10 ಘಂಟೆಗೆ ಯಮಲೂರು ಇಪ್ಸಿಲಾನ್ (EPSILON)ಬಡಾವಣೆ
ಬೆಳಗ್ಗೆ :10 : 30 ಕ್ಕೆ ಬೆಳ್ಳಂದೂರು ರಿಂಗ್ ರಸ್ತೆ ಎಕೋ ಸ್ಪೇಸ್(ECOSPACE)ಹತ್ತಿರ.
ಬೆಳಗ್ಗೆ :11 ಘಂಟೆಗೆ ರೈನ್ ಬೋ ಬಡಾವಣೆ(RAINBOW LAYOUT ) ದೊಡ್ಡಕನ್ನೆಲ್ಲಿ .
ಬೆಳಗ್ಗೆ 11:30 ಘಂಟೆಗೆ ಬಳಗೆರೆ ದಿಶಾ ಅಪಾರ್ಟ್ ಮೆಂಟ್.(DISHA APARTMENT)
ಬೆಳಗ್ಗೆ 12 ಘಂಟೆಗೆ ಮುನ್ನೇಕೊಳಾಲ ಗ್ರಾಮ.
ಮದ್ಯಾಹ್ನ 12:30ಕ್ಕೆ ಸಿದ್ದಾಪುರ ಗ್ರಾಮದ ನಿವಾಸಿ ವಿದ್ಯುತ್ ಅವಘಡದಿಂದ ಮರಣ ಹೊಂದಿದ ಅಖಿಲಾ ಪೋಷಕರ ಭೇಟಿ.
ಮದ್ಯಾಹ್ನ 1 ಘಂಟೆಗೆ ವರ್ತೂರು ಕೋಡಿ ರುತ್ ಸಗಾಯಿ ಮೇರಿ @ ಅಮೀಲಾ ಮನೆ ಹತ್ತಿರ ರಾಜಕಾಲುವೆ ವೀಕ್ಷಣೆ.
ಅಧಿವೇಶನ ಕರೆಯಲಿ:
ಬೆಂಗಳೂರು ಮಳೆಯಿಂದ ತೊಂದರೆ ಅನುಭವಿಸಲು ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, "ಮುಖ್ಯ ಮಂತ್ರಿಗಳಿಗೆ ಧೈರ್ಯವಿದ್ದರೆ ಬೆಂಗಳೂರು ಅಭಿವೃದ್ಧಿಯ ಬಗ್ಗೆಯೆ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ನಡೆಸಲಿ, ಜೊತೆಗೆ ಕಳೆದ 20 ವರ್ಷಗಳಲ್ಲಿ ಏನೇನಾಗಿದೆ ಎಂಬ ಕುರಿತು ಸಮಗ್ರ ವರದಿ ಬಿಡುಗಡೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ ಮಾಡಿಕೊಡುವ ಕಾನೂನುಗಳನ್ನು ಹಿಂಪಡೆದು, ಸಮಸ್ಯೆಗಳು ಎಲ್ಲಿವೆ ಎಂದು ಪತ್ತೆ ಹಚ್ಚಿ ಜನಪರವಾಗಿ ಕೆಲಸ ಮಾಡಿ ನಗರದ ಜನರಿಗೆ ನೆಮ್ಮದಿ ನೀಡಬೇಕೆಂದು ಆಗ್ರಹಿಸುತ್ತೇನೆ," ಎಂದು ಹೇಳಿದ್ದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರ ಬದುಕು ನರಕ ಸದೃಶವಾಗಿದೆ. ಮುಖ್ಯಮಂತ್ರಿಗಳು ಮಾತ್ರ ಇದಕ್ಕೆಲ್ಲ ಹಿಂದಿನ ಸರ್ಕಾರಗಳು ಕಾರಣ ಎಂದು ಓಡಾಡುತ್ತಿದ್ದಾರೆ. ಸರ್ಕಾರ ಇಂತಹ ಬೇಜವಾಬ್ಧಾರಿ ಆಡಳಿತವನ್ನು ನಿಲ್ಲಿಸಿ ನಾಗರಿಕರಿಗೆ ನೆಮ್ಮದಿ ನೀಡಬೇಕು. ಬೆಂಗಳೂರು ಅಭಿವೃದ್ಧಿಗಾಗಿ ಈವರೆಗೂ ಒಬ್ಬ ಸ್ವತಂತ್ರ ಸಚಿವರನ್ನು ಬೊಮ್ಮಾಯಿ ಸರ್ಕಾರ ನೇಮಿಸಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯು ಬೆಂಗಳೂರು ನಗರಾಭಿವೃದ್ಧಿಗಾಗಿ ಒಬ್ಬ ಸಚಿವರನ್ನು ನೇಮಿಸಿದರೆ ಉಳಿದವರು ಕಿತ್ತಾಟಕ್ಕಿಳಿಯುತ್ತಾರೆ. ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಈ ಖಾತೆಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಬೆಂಗಳೂರಿಗರ ಕಷ್ಟವನ್ನು ಕೇಳುವವರು ಗತಿಯಿಲ್ಲ. ಹಾಗಾಗಿ ಬಿಜೆಪಿಯ ಸನಾತನ ತಂತ್ರವಾದ ತಾನು ಚೆನ್ನಾಗಿ ತಿಂದು ಮೇಕೆ ಬಾಯಿಗೆ ಒರೆಸುವ ಕೋತಿಯ ತಂತ್ರವನ್ನು ಜನರು ಅರ್ಥಮಾಡಿಕೊಳ್ಳದಷ್ಟು ದಡ್ಡರೇನಲ್ಲ ಎಂಬ ಹೇಳಿಕೆ ನೀಡಿದ್ದರು.












Click it and Unblock the Notifications