ಎದುರಾಳಿಯಾದರೂ ಯಡಿಯೂರಪ್ಪ ಮೇಲೆ ಅನುಕಂಪ ಎಂದ ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 27: "ಎದುರಾಳಿಯಾದರೂ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಅನುಭವಿಸುತ್ತಿರುವ ಸಂಕಷ್ಟ ನೋಡಿ ನನಗೆ ಅನುಕಂಪವಿದೆ" ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟ ಸಚಿವರಿಗೆ ಸೋಮವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದ್ದು, ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಖಾತೆ ಹಂಚಿಕೆ ಫೈನಲ್, ಇಲ್ಲಿದೆ ಅಧಿಕೃತ ಪಟ್ಟಿ
ಜಾತಿ ಲೆಕ್ಕಾಚಾರದ ಮೂಲಕ ಮೂವರಿಗೆ ಉಪಮುಖ್ಯಮಂತ್ರಿಸ್ಥಾನ ನೀಡಲಾಗಿದೆ ಎಂಬ ದೂರಿನ ನಡುವೆಯೇ ಸಾಲು ಸಾಲು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಯಡಿಯೂರಪ್ಪನವರ ಸರ್ಕಾರ ಆಂತರಿಕ ಭಿನ್ನಾಭಿಪ್ರಾಯಗಳ ಹೊರತಾಗಿ ಟೇಕಾಫ್ ಆಗುವುದು ಯಾವಾಗ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೊನೆಗೂ ಅಧಿಕೃತ : ಕರ್ನಾಟಕಕ್ಕೆ 3 ಉಪಮುಖ್ಯಮಂತ್ರಿಗಳು
ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಅನುಕಂಪ ಬೀರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಗಳು ಇಲ್ಲಿವೆ...

ಸರ್ಕಾರ ಟೇಕಾಫ್ ಆಗೋದು ಯಾವಾಗ?
ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಅವರೇ, ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 3 ದಿನ,
ಸಂಪುಟ ರಚನೆಗೆ 26 ದಿನ,
ಮತ್ತು ಖಾತೆ ಹಂಚಿಕೆಗೆ 6 ದಿನ ತಗೊಂಡಿರಿ.
ಈಗ ಭಿನ್ನಮತ ಶಮನಕ್ಕೆ ಇನ್ನೆಷ್ಟು ದಿನ ಬೇಕು?
ಈ ಎಲ್ಲದರ ನಡುವೆ ನಿಮ್ಮ ಸರ್ಕಾರ ಟೇಕ್ ಆಫ್ ಆಗುವುದು ಯಾವಾಗ?"- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಜನಪ್ರತಿನಿಧಿಗಳ ದನಿ ಉಡುಗಿಹೋಗಿದೆ!
"ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತುಗಳನ್ನು ಗಮನಿಸಿದರೆ ಜನಪ್ರತಿನಿಧಿಗಳ ದನಿ ಉಡುಗಿಹೋಗಿ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸಿರುತ್ತಿರುವ ಹಾಗೆ ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ" - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಎದುರಾಳಿಯಾದರೂ ಯಡಿಯೂರಪ್ಪ ಬಗ್ಗೆ ಅನುಕಂಪವಿದೆ!
"ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಭವಿಸುತ್ತಿರುವ ಅವಮಾನ,ಅನ್ಯಾಯ, ಅಸಂತೋಷವನ್ನು ನೋಡುತ್ತಿದ್ದರೆ ಅವರ ರಾಜಕೀಯ ಎದುರಾಳಿಯಾದ ನನ್ನಂತಹವನಲ್ಲಿಯೂ ಅವರ ಬಗ್ಗೆ ಅನುಕಂಪ ಮೂಡುವಂತಾಗಿದೆ"- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ
ಸೋಮವಾರ ರಾತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಗೋವಿಂದ ಕಾರಜೋಳ, ಅಶ್ವಥ್‌ನಾರಾಯಣ್, ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿಸ್ಥಾನ ನೀಡಿರುವುದು ಅಚ್ಚರಿ ನೀಡಿದೆ.