ಹೊಟ್ಟೆಗೆ ಹಿಟ್ಟಿಲ್ಲ-ಜುಟ್ಟಿಗೆ ಮಲ್ಲಿಗೆ! ₹3 ಕೋಟಿ ವೆಚ್ಚದಲ್ಲಿ ಸಿಎಂ ಕಚೇರಿ ನವೀಕರಣ, ಮಜವಾದಿ ಸರ್ಕಾರ ಎಂದ ಬಿಜೆಪಿ
ಬೆಂಗಳೂರು, ನವೆಂಬರ್ 16: ಗ್ಯಾರಂಟಿ ಯೋಜನೆಳಿಗೆ ಹಣ ವಿನಿಯೋಗಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ, ಶಾಸಕರ ಕ್ಷೇತ್ರಕ್ಕೆ ನೀಡಲು ಹಣ ಕೊರತೆ ಎದುರಿಸುತ್ತಿದೆ ಎಂಬ ಮಾತು ಒಂದೂವರೆ ವರ್ಷದಿಂದ ಕೇಳಿ ಬರುತ್ತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಐಶಾರಾಮಿ ಕಚೇರಿ ಹೊಂದಲು ಬಯಸಿದ್ದು, ಕೋಟಿ ಕೋಟಿ ಹಣ ವ್ಯಯಿಸಿದ್ದಾರೆ ಎಂದು ವರದಿ ಆಗಿದೆ. ಇದಕ್ಕೆ ಬಿಜೆಪಿ ಸಹ ಆಕ್ಷೇಪ ವ್ಯಕ್ತಪಡಿಸಿದೆ.
ಶಾಸಕರಿಗೆ ನೀಡಲು ಅನುದಾನ ಇಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಗೃಹ ಕಚೇರಿಯನ್ನು ಐಶಾರಾಮಿ ಮಾದರಿಯಲ್ಲಿ ನವೀರಣ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ. 'ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ" ಎಂದಿರುವ ಅವರು, ಬರೋಬ್ಬರಿ 2.5 ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಚೇರಿ ನವೀಕರಣ ಮಾಡುತ್ತಿದೆ. ಇದು 'ಮಜ'ವಾದಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದ್ದಾರೆ.

ಶನಿವಾರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೇ, ಸರ್ಕಾರದ ಪರವಾಗಿ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಸ್ತೆಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ಅವರ ಬಳಿ ದುಡ್ಡಿಲ್ಲ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಕಾರ ಗ್ಯಾರೆಂಟಿಗಳಿಂದ ಕಳೆದ ವರ್ಷ ಪೂರ್ತಿ ಅಭಿವೃದ್ಧಿಗೆ ದುಡ್ಡಿರಲಿಲ್ಲ. ರಾಜ್ಯದ ಜನತೆಯ ಮೇಲೆ ಒಟ್ಟು 1.05 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಪರಿಸ್ಥಿತಿ ಹೀಗಿರುವಾಗ ತಮ್ಮ ಕಚೇರಿಗೆ 3 ಕೋಟಿ ರೂಪಾಯಿ ವೆಚ್ಚ ಮಾಡುವುದು ಎಷ್ಟು ಸರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ವರ್ಷದ ಹಿಂದಷ್ಟೇ ನವೀರಕರಣಗೊಂಡಿದ್ದ ಸಿಎಂ ಕಚೇರಿ
ಕಳೆದ ವರ್ಷವಷ್ಟೇ ತಮ್ಮ ಸರ್ಕಾರಿ ನಿವಾಸ ಕಾವೇರಿ ನವೀಕರಣಗೊಂಡಿದೆ. ಕಾವೇರಿ ನಿವಾಸಕ್ಕೆಂದು ಸ್ಥಳಗಳ ಖರೀದಿ ಮಾಡಲಾಗಿದೆ. ಇದಕ್ಕೆ ಮೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈಗ ತಮ್ಮ ಕಚೇರಿಗೆ ಮತ್ತೊಮ್ಮೆ ಮೂರು ಕೋಟಿ ರೂಪಾಯಿ ಖರ್ಚು ಮಾಡುತ್ತಿಲ್ಲ, ತಮ್ಮ ಆತ್ಮಸಾಕ್ಷಿಗೆ ಒಪ್ಪಿಗೆ ಇದೆಯೇ? ಎಂದು ಕೇಳಿದ್ದಾರೆ.
ಹೀಗೆ ದುಂದುವೆಚ್ಚ ಮಾಡುವ ಬದಲು, ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಬೇಕು. ರೈತರಿಗೆ ಕೊಡುವ ಹಾಲಿನ ಖರೀದಿ ದರ ಹೆಚ್ಚಳ ಮಾಡಿದ್ದೀರಿ. ಆಂಬುಲೆನ್ಸ್ ಚಾಲಕರಿಗೆ ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಸಂಬಳ ಕೊಡಿ. ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.
ನಾನು ಸಮಾಜವಾದಿ, ಬಡವರ ಪರ ಎಂದು ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡರೆ ಸಾಲದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಆ ಹಣವನ್ನು ಬಡವರಿಗಾಗಿ ಉಪಯೋಗಿಸಿ, ನುಡಿದಂತೆ ನಡೆಯಿರಿ ಎಂದು ಆರ್.ಅಶೋಕ ಸಿದ್ದರಾಮಯ್ಯ ಅವರ ಕಚೇರಿ ನವೀಕರಣಕ್ಕೆ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡದೇ ಗೌಪ್ಯ ನವೀಕರಣ?
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಕಚೇರಿ ನವೀಕರಣಕ್ಕೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಇದೊಂದು ಗೌಪ್ಯ ನವೀಕರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸುಮಾರು 2.5 ರಿಂದ 3 ಕೋಟಿ ರೂ.ನಷ್ಟು ಖರ್ಚು ಮಾಡಿ ಕೊಠಡಿ ನವೀಕರಣಕ್ಕೆ ತಿರ್ಮಾನಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ನವೀಕರಣ ಮಾಡಲಾಗುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಯಾವುದೇ ಮಾಹಿತಿ ಕೊಡದ ಕಾರಣ, ಇದೊಂದು ಗೌಪ್ಯ ನವೀಕರಣ ಎನ್ನಲಾಗುತ್ತಿದೆ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವವರು, ಕೋಟಿ ಕೋಟಿ ಖರ್ಚು ಮಾಡಿ ಐಶಾರಾಮಿ ಕಚೇರಿ ಹೊಂದಲು ಬಯಸುತ್ತಿರುವುದು ಏಕೆ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ.












Click it and Unblock the Notifications