ಕುಮಾರಸ್ವಾಮಿ ಕೈ ಸೇರಿದ ಸಿದ್ದು ರಹಸ್ಯ ಪತ್ರ!
ಬೆಂಗಳೂರು, ಅ.10 : ಸಿಎಂ ಸಿದ್ದರಾಮಯ್ಯ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಸಚಿವರು ಮತ್ತು ಸಿಎಂ ನಡುವೆ ನಡೆದ ಖಾಸಗಿ ಪತ್ರ ವ್ಯವಹಾರದ ದಾಖಲೆಗಳು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಕೈ ಸೇರಿವೆ.
ಸಿದ್ದರಾಮಯ್ಯ ಕೈಯಲ್ಲಿರುವ ಗುಪ್ತಚರ ಇಲಾಖೆ ಈ ಕುರಿತು ಸಿಎಂಗೆ ಮಾಹಿತಿ ನೀಡಿದೆ. ಕೆಲವು ಇಲಾಖೆಗಳ ಅಧಿಕಾರಿಗಳ ವರ್ಗಾವಣೆ, ಟೆಂಡರ್ ಪ್ರಕ್ರಿಯೆ ಮುಂತಾದವುಗಳಿಗೆ ಸಂಬಂಧಿಸಿದ ಸಚಿವರ ಮತ್ತು ಸಿಎಂ ನಡುವಿನ ಪತ್ರ ವ್ಯವಹಾರದ ವಿವರಗಳು ಎಚ್ಡಿಕೆ ಕೈಗೆ ತಲುಪಿವೆ.
ಕೆಲವು ಅಧಿಕಾರಿಗಳೇ ಐವರು ಸಚಿವರು ಸಿದ್ದರಾಮಯ್ಯ ಅವರಿಗೆ ಬರೆದ ಖಾಸಗಿ ಪ್ರತದ ದಾಖಲೆಗಳನ್ನು ಕುಮಾರಸ್ವಾಮಿ ಅವರಿಗೆ ಮೂರು ದಿನದ ಹಿಂದೆ ತಲುಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕುವುದು ಖಚಿತವಾಗಿದೆ.
ಎರಡು ದಿನಗಳ ಹಿಂದೆ 25ಕ್ಕೂ ಹೆಚ್ಚು ಶಾಸಕರು ಸಿಎಂ ವಿರುದ್ಧ ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಸದ್ಯ ಸಚಿವರ ಪತ್ರಗಳು ಪ್ರತಿಪಕ್ಷ ನಾಯಕರ ಬಳಿ ಸೇರಿದ್ದು, ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ. ಸಿದ್ದರಾಮಯ್ಯ ಪತ್ರ ಸಂಕಟ ಎದುರಿಸುತ್ತಿರುವುದಂತೂ ನಿಜ. ಗುಪ್ತಚರ ಇಲಾಖೆ ಮಾಹಿತಿ ಏನು

ಪತ್ರ ಕೈ ಸೇರಿದೆ
ಅಧಿಕಾರಿಗಳ ವರ್ಗಾವಣೆ ಮತ್ತು ಇಲಾಖೆಯಲ್ಲಿನ ಟೆಂಡರ್ ಪ್ರಕ್ರಿಯೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರ ನಡುವೆ ನಡೆದಿರುವ ಖಾಸಗಿ ಪತ್ರ ವ್ಯವಹಾರದ ದಾಖಲೆಗಳನ್ನು ಕೆಲವು ಅಧಿಕಾರಿಗಳು ವಿಧಾನಸಭೆಯ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಲುಪಿಸಿದ್ದಾರೆ.

ಯಾವ ಇಲಾಖೆಗಳು
ಜಲಸಂಪನ್ಮೂಲ, ಲೋಕೋಪಯೋಗಿ, ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಹಕಾರ, ಮೀನುಗಾರಿಕೆ-ಬಂದರು ಇಲಾಖೆಗಳಲ್ಲಿ ಪ್ರಮುಖ ಅಧಿಕಾರಿಗಳ ವರ್ಗಾವಣೆ ಮತ್ತು ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಅಂಶಗಳು ಪತ್ರದಲ್ಲಿವೆ.

ಭಯವೇಕೆ
ಸಚಿವರು ತಮಗೆ ಸಂಬಂಧ ಪಡದ ಇಲಾಖೆಗಳ ವರ್ಗಾವಣೆಯಲ್ಲೂ ಹಸ್ತಕ್ಷೇಪ ಮಾಡಿದ್ದಾರೆ. ಇಲಾಖೆಯಲ್ಲಿನ ಟೆಂಡರ್ ಗಳನ್ನು ಇಂಥವರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎಂಬ ಅಂಶಗಳು ಈ ಪತ್ರದಲ್ಲಿ ಸೇರಿವೆ. ಆದ್ದರಿಂದ ಈ ಪತ್ರ ಕುಮಾರಸ್ವಾಮಿ ಕೈ ಸೇರಿರುವುದು ಸರ್ಕಾರಕ್ಕೆ ಇರುಸು ಮುರುಸು ಉಂಟು ಮಾಡಿದೆ.

ಅಧಿಕಾರಿಗಳ ಕೈವಾಡ
ಸಚಿವರ ಮತ್ತು ಸಿಎಂ ನಡುವಿನ ಖಾಸಗಿ ಪತ್ರ ವ್ಯವಹಾರದ ದಾಖಲೆಗಳನ್ನು ಅಧಿಕಾರಿಗಳೇ ಕುಮಾರಸ್ವಾಮಿ ಕೈಗೆ ತಲುಪಿಸಿದ್ದಾರೆ ಎಂಬುದು ಸಿದ್ದರಾಮಯ್ಯ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಆಡಳಿತದ ರಹಸ್ಯಗಳು ಪ್ರತಿಪಕ್ಷಗಳಿಗೆ ತಿಳಿಯಲಿದೆ ಎಂಬುದು ಪ್ರಮುಖ ಅಂಶ.

ದಾಖಲೆ ಬಿಡುಗಡೆ ಮಾಡ್ತಾರಾ?
ಸದಾ ದಾಖಲೆ ಬಿಡುಗಡೆ ಮಾಡುತ್ತೀನಿ ಎಂದು ಹೇಳುವ ಕುಮಾರಸ್ವಾಮಿ ಕೈಗೆ ಇಂತಹ ಪತ್ರಗಳು ಸಿಕ್ಕರೆ, ಸರ್ಕಾರದ ವಿರುದ್ಧ ಅವರು ದಾಖಲೆ ಬಿಡುಗಡೆ ಮಾಡಬಹುದು ಎಂಬುದು ಸಿಎಂ ಆತಂಕಕ್ಕೆ ಕಾರಣವಾಗಿದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಅಂತ್ಯದವರೆಗೂ ನಡೆದಿರುವ ಅಧಿಕಾರಿಗಳ ವರ್ಗಾವಣೆ ಕುರಿತ ಅಂಶಗಳಿ ಇದರಲ್ಲಿವೆ ಎಂದು ತಿಳಿದು ಬಂದಿದೆ.

ಪತ್ರಸಂಕಟ
ಕುಮಾರಸ್ವಾಮಿಯವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕೆಲವು ಅಧಿಕಾರಿಗಳು ಸಿಎಂ ಕಚೇರಿಯಿಂದಲೇ ರಹಸ್ಯ ಪತ್ರಗಳನ್ನು ಅವರಿಗೆ ತಲುಪಿಸಿದ್ದಾರೆ ಎಂಬುದು ಗಮನಾರ್ಹ ಅಂಶ. ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಿದರೆ, ಸರ್ಕಾರ ನಿಜವಾದ ಬಣ್ಣ ಬಯಲಾಗಿದೆ.












Click it and Unblock the Notifications