ಕೊಲೆ, ಲೈಂಗಿಕ ದೌರ್ಜನ್ಯ: ಕರ್ನಾಟಕ ಚುನಾವಣೆ ಸುಸೂತ್ರ ನಡೆಯುವುದು ಅನುಮಾನ ಎಂದ ಸಿದ್ದರಾಮಯ್ಯ, ಏಕೆ?
ಬೆಂಗಳೂರು, ಏಪ್ರಿಲ್ 02: ಕರ್ನಾಟಕ ರಾಜ್ಯ ವಿಧಾನಸಭಾ ಚನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಅದರ ಕುರಿತು ಪ್ರಕ್ರಿಯೆಗಳು ಆರಂಭವಾಗಿವೆ. ಎಲ್ಲೆಡೆ ಬಿಗಿ ಭದ್ರತೆ ಕಾಪಾಡಲಾಗುತ್ತಿದೆ. ಇದರ ನಡುವರೆಯು ಹತ್ಯೆ, ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ವಿರೋಧ ಪಕ್ಷದ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯ ವಿವಿಧೆಡೆ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ವಿರುದ್ಧ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕಿತ್ತು ಹಾಕುವಂತೆ ಅವರು ಗುಡುಗಿದ್ದಾರೆ. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು ಪೋಸ್ಟ್‌ಗೆ ಕರ್ನಾಟಕ ಬಿಜೆಪಿ, ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಾನೂನು ಸೂವ್ಯವಸ್ಥೆ ಹ್ಯಾಷ್‌ಟ್ಯಾಗ್ (#LawAndOrder) ಹಾಕಿದ್ದ ಬಿಜೆಪಿ ಆಡಳಿತ ವಿರುದ್ಧ ಗರಂ ಆಗಿದ್ದಾರೆ.

ಸಿದ್ದರಾಮಯ್ಯನವರು ಟ್ವೀಟ್‌ನಲ್ಲಿ, ಧರ್ಮ ರಕ್ಷಣೆಯ ಹೆಸರಲ್ಲಿ ಕರ್ನಾಟಕ ಬಿಜೆಪಿಯು ರಾಜ್ಯದಲ್ಲಿ ಬೆಳೆಸಿದ ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆಯೇ ಸಾಕ್ಷಿ ಎಂದಿದ್ದಾರೆ. ಈ ಹತ್ಯೆಯ ಹೊಣೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಂತಹ ಅಸಮರ್ಥ ಗೃಹ ಸಚಿವರೇ ಹೊರಬೇಕು ಎಂದಿದ್ದಾರೆ.
ಕರ್ನಾಟಕ ಇಂತಹ ಅಸಮರ್ಥ, ಅದಕ್ಷ ಮತ್ತು ಬೇಜವಾಬ್ದಾರಿ ಗೃಹಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ ಇಲಾಖೆಯ ಮೇಲೆ ನಿಯಂತ್ರಣ ಇಲ್ಲದ ಈ ಸಚಿವರಿಗೆ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಅವರು, ಮೊದಲು ಆರಗ ಜ್ಞಾನೇಂದ್ರ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿ ಎಂದು ಆಗ್ರಹಿಸಿದ್ದಾರೆ.
ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು.

ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ನಿತ್ಯ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಈ ಸರ್ಕಾರ ಅಸ್ತಿತ್ವದಲ್ಲಿರುವಾಗ ಚುನಾವಣೆ ನ್ಯಾಯಯುತವಾಗಿ ನಡೆಯುವುದು ಅನುಮಾನ. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾನುವಾರು ಸಾಗಾಟ ವ್ಯಕ್ತಿ ಕೊಲೆ
ಕಳೆದ ಶುಕ್ರವಾರ ರಾತ್ರಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿಯ ಬರ್ಬರ ಕೊಲೆಯಾಗಿದೆ. ಅಲ್ಲದೇ ಮೃತ ವ್ಯಕ್ತಿಯೊಂದಿಗೆ ತೆರಳುತ್ತಿದ್ದ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಪುನೀತ್ ಕೆರೇಹಳ್ಳಿ ಸೇರಿದಂತೆ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೃತರನ್ನು ಮಂಡ್ಯ ಜಿಲ್ಲೆಯ ಇದ್ರೀಸ್ ಪಾಷಾ ಎಂದು ಗುರುತಿಸಲಾಗಿದೆ. ಆರೋಪಿಗಳು ಜಾನುವಾರುಗಳನ್ನು ಆಕ್ರಮವಾಗಿ ಸಾಗಿಸುತ್ತಿದ್ದಾನೆ ಎಂದು ಕೊಂಡು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಸಮೂಹಿಕ ಲೈಂಗಿಕ ದೌರ್ಜನ್ಯ
ಇತ್ತೀಚೆಗಷ್ಟೇ ಬೆಂಗಳೂರಿನ ಕಗ್ಗಲಿಪುರದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಕೋರಮಂಗಲದಲ್ಲಿ ಯುವತಿಯೊಬ್ಬರನ್ನು ನಾಲ್ವರು ಕಾಮುಕರ ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾನೂನು ಸೂವ್ಯವಸ್ಥೆ ಹೇಗಿದೆ, ಇಲ್ಲಿ ಹೆಣ್ಣುಮಕ್ಕಳಿಗೆ, ಅಮಾಯಕರ ಜೀವಕ್ಕೆ ರಕ್ಷಣೆ ಇದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಸಂಬಂಧವೇ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ರಾಜ್ಯ ಬಿಜೆಪಿ ಆಡಳಿತದ ವಿರುದ್ಧ ಕಿಡಿ ಕಾರಿದ್ದಾರೆ.












Click it and Unblock the Notifications