ಸಚಿವರ ಕಾರ್ಯವೈಖರಿಗೆ ಸಿದ್ದು ಸಲಹೆಗಳು
ಬೆಂಗಳೂರು, ನ. 14 : ಅಧಿಕಾರಕ್ಕೆ ಏರಿದ ಆರು ತಿಂಗಳ ನಂತರ ಆಡಳಿತವನ್ನು ಬಿಗಿಗೊಳಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದಕ್ಕಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸಮಿತಿ ನೀಡಿರುವ ಶಿಫಾರಸು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಅದರ ಅನ್ವಯ ಸಚಿವರು ವಾರದಲ್ಲಿ ಮೂರುದಿನ ವಿಧಾನಸೌಧಕ್ಕೆ ಆಗಮಿಸುವುದು ಕಡ್ಡಾಯವಾಗಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ ಸುಧಾರಣೆಗಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ವಿವರವಾದ ಚರ್ಚೆ ನಡೆಸಲಾಗಿದೆ. ಆಡಳಿತ ಸುಧಾರಣೆ ಮಾಡುವ ನಿಟ್ಟಿಯಲ್ಲಿ ಟಿ.ಬಿ.ಜಯಚಂದ್ರ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಜಾರಿಗೆ ತರಲು ಸಿಎಂ ಒಪ್ಪಿಗೆ ನೀಡಿದ್ದಾರೆ.

ಸಮಿತಿಯ ಶಿಫಾರಸಿನಂತೆ ಸಚಿವರು ವಾರದಲ್ಲಿ ಮೂರು ದಿನ ರಾಜಧಾನಿಯಲ್ಲಿದ್ದು ಕಡತ ವಿಲೇವಾರಿ ಮಾಡಬೇಕಾಗಿದೆ. ಈ ಸಮಯದಲ್ಲಿ ಸಚಿವರು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಬರುವ ಮನವಿಯನ್ನು ಸ್ವೀಕರಿಸಬೇಕಾಗಿದೆ. 44 ಇಲಾಖೆಗಳ ಕಾರ್ಯದರ್ಶಿಗಳು ಪ್ರತಿವಾರ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುವುದು ಈ ಶಿಫಾರಸಿನಲ್ಲಿ ಸೇರಿದೆ. (ಸಂಪುಟದ ಇತರ ನಿರ್ಣಯಗಳು)
ವಿಧಾನಸೌಧದಲ್ಲಿ ಕಡತ ವಿಲೇವಾರಿ ಮಾಡಲಿರುವ ಸಚಿವರು ವಿಧಾನಸೌಧ-ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುವ ಸಚಿವಾಲಯದ ಸಿಬ್ಬಂದಿಯ ಕಾರ್ಯವೈಖರಿಯ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಗಿದೆ. ಪ್ರಮುಖವಾಗಿ ಕಡತ ವಿಲೇವಾರಿ ಮಾಡುವ ನಿಟ್ಟಿನಲ್ಲೇ ಈ ಪಮ್ರಖ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಕಡತ ಯಜ್ಞಕ್ಕಾಗಿ ಕ್ರಮ : ವಿವಿಧ ಇಲಾಖೆಗಳಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ 73,814 ಕಡತಗಳು, 1 ವರ್ಷಕ್ಕಿಂತ ಮೇಲ್ಪಟ್ಟ 27,073 ಕಡತಗಳು, 2 ವರ್ಷಕ್ಕಿಂತ ಮೇಲ್ಪಟ್ಟ 11,085 ಕಡತಗಳು, 3 ವರ್ಷಕ್ಕೂ ಮೇಲ್ಟಟ್ಟ 18,392 ಕಡತಗಳು ವಿಲೇವಾರಿಗಾಗಿ ಕಾದು ಕುಳಿತಿವೆ. ಆದ್ದರಿಂದ ಸಚಿವರ ವಿಧಾನಸೌಧ ಭೇಟಿಯನ್ನು ಕಡ್ಡಾಯ ಮಾಡಿ ಕಡತ ಯಜ್ಞ ಮಾಡಲು ತಯಾರಿ ಕೈಗೊಳ್ಳಲಾಗಿದೆ.












Click it and Unblock the Notifications